ರೋಣ ಪಟ್ಟಣದ ಶರಣರ ಶಿಕ್ಷಣ ಸಮಿತಿಯ ನ್ಯೂ ಲಿಟಲ್ ಫ್ಲಾವರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಪಿಯು ಕಾಲೇಜು, ಪಾರಾ ಮೆಡಿಕಲ್ ಕಾಲೇಜ್ ವಾರ್ಷಿಕ ಸ್ನೇಹ ಸಮ್ಮೇಳನ, ಅತಿಥಿ ಗೃಹ ಉದ್ಘಾಟನೆ ಹಾಗೂ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ನಡೆಯಿತು.

ರೋಣ: ಡ್ರಗ್ಸ್ ವ್ಯಸನದಷ್ಟೆ ಮಕ್ಕಳು ಮೊಬೈಲ್ ಬಳಸುವುದು ಅಪಾಯಕಾರಿ. ಆದ್ದರಿಂದ‌ ಮಕ್ಕಳ ಕೈಗೆ ಮೊಬೈಲ್ ಕೊಡಬಾರದು ಎಂದು ಭಾರತೀಯ ವೈದ್ಯಕೀಯ ಸಂಘದ ಮಾಜಿ ರಾಜ್ಯಾಧ್ಯಕ್ಷ, ಶರಣರ ಶಿಕ್ಷಣ ಸಮಿತಿ ಅಧ್ಯಕ್ಷ ಡಾ. ಎಸ್.ಬಿ. ಲಕ್ಕೋಳ ಹೇಳಿದರು.

ಶನಿವಾರ ಪಟ್ಟಣದ ಶರಣರ ಶಿಕ್ಷಣ ಸಮಿತಿಯ ನ್ಯೂ ಲಿಟಲ್ ಫ್ಲಾವರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಪಿಯು ಕಾಲೇಜು, ಪಾರಾ ಮೆಡಿಕಲ್ ಕಾಲೇಜ್ ವಾರ್ಷಿಕ ಸ್ನೇಹ ಸಮ್ಮೇಳನ, ಅತಿಥಿ ಗೃಹ ಉದ್ಘಾಟನೆ ಹಾಗೂ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಮಕ್ಕಳು ಮನೆಯಲ್ಲಿ ದಿನವಿಡಿ ಮೊಬೈಲ್ ಹಿಡಿದುಕೊಂಡು ರೀಲ್ಸ್ ನೋಡುವುದು, ಚಾಟಿಂಗ್ ಮಾಡುವುದು, ಗೇಮ್ಸ್‌ ಆಡುವುದು ಮುಂತಾದ ಚಟುವಟಿಕೆ ಮಾಡುತ್ತಿರುತ್ತಾರೆ. ಹೀಗಾದಲ್ಲಿ ಬೇಗನೆ ದೃಷ್ಟಿದೋಷ, ಮಾನಸಿಕ ಖಿನ್ನತೆ, ಒತ್ತಡಕ್ಕೆ ಒಳಗಾಗುತ್ತಾರೆ. ಇದರಿಂದ ಓದು, ಬರಹದತ್ತ ಗಮನ ಹರಿಸದೇ ಅಪಾಯಕಾರಿ, ಸಮಾಜಕ್ಕೆ ಮಾರಕವಾಗುವ ಕೃತ್ಯದಲ್ಲಿ ತೊಡಗುತ್ತಾರೆ. ಡ್ರಗ್ಸ್‌ ವ್ಯಸನಕ್ಕಿಂತಲೂ ಮಕ್ಕಳು ಮೊಬೈಲ್ ಬಳಕೆ ಅತ್ಯಂತ ಅಪಾಯಕಾರಿ ಎಂಬುದನ್ನು ಪಾಲಕರು ಅರಿತು, ಮೊಬೈಲ್‌ನಿಂದ ಮಕ್ಕಳನ್ನು ದೂರವಿಟ್ಟು, ಓದಿನಲ್ಲಿ ತೊಡಗಲು ಸಲಹೆ ನೀಡಬೇಕು ಎಂದರು.

ಗ್ಯಾರಂಟಿ ಯೋಜನೆ ಅನುಷ್ಠಾನ‌ ಸಮಿತಿ ತಾಲೂಕು ಅಧ್ಯಕ್ಷ ಮಿಥುನ‌ ಪಾಟೀಲ ಮಾತನಾಡಿ, ಮಕ್ಕಳು ಸುಸಂಸ್ಕೃತರಾಗಿ ಬೆಳೆಯಲು ಪಾಲಕರ ಪಾತ್ರ ಪ್ರಮುಖವಾಗಿದೆ. ಭವಿಷ್ಯದ ಉಜ್ವಲ ಜೀವನಕ್ಕೆ ಶಿಕ್ಷಣ ಬುನಾದಿಯಾಗಿದೆ ಎಂದರು.

ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ ಮಾತನಾಡಿ, ಉತ್ತರ ಕರ್ನಾಟಕ ಭಾಗದ ಶಿಕ್ಷಣ ಕ್ಷೇತ್ರಕ್ಕೆ ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರವಾಗಿದ್ದು, ಮಠ-ಮಂದಿರಗಳು ಹಾಗೂ ಖಾಸಗಿ ವ್ಯಕ್ತಿಗಳಿಂದ ಶಿಕ್ಷಣ ಕ್ಷೇತ್ರಕ್ಕೆ ನಿರಂತರ ಸೇವೆ ಸಲ್ಲುತ್ತಿರುವುದು ಶ್ಲಾಘನೀಯ ಎಂದರು‌.

ಸಾನ್ನಿಧ್ಯ ವಹಿಸಿದ್ದ ಬಳಗಾನೂರ ಮಠದ ಶಿವಶಾಂತವೀರ ಶರಣರು ಆಶೀರ್ವಚನ ನೀಡಿ, ಮಕ್ಕಳು ಮನೆಯ ನಂದಾದೀಪವಿದ್ದಂತೆ. ಮಕ್ಕಳಿಗೆ ಶಿಕ್ಷಣದ ಸಂಸ್ಕಾರ ನೀಡಬೇಕು. ವಿದ್ಯೆ ವ್ಯಕ್ತಿಯ ಗೌರವ ಹೆಚ್ಚಿಸುತ್ತದೆ. ಮಾನವಿಯತೆ ಬೆಳಗಿಸುತ್ತದೆ ಎಂದರು.

ಗುಲಗಂಜಿ ಮಠದ ಗುರುಪಾದ ಮಹಾಸ್ವಾಮೀಜಿ, ಬಸವರಾಜ ಸುಂಕದ, ತೋಟಪ್ಪ ನವಲಗುಂದ, ರಾಜಣ್ಣ ಗಿರಡ್ಡಿ, ಮುತ್ತಣ್ಣ ಸಂಗಳದ, ಸೋಮಶೇಖರ ಪಾಳೇಗಾರ, ನಾಗನಗೌಡ ಕೆಂಚನಗೌಡ್ರ, ಸಾವಿತ್ರಮ್ಮ ಹುಗ್ಗಿ, ಕೆ.ಬಿ. ಹರ್ಲಾಪುರ, ಬಿ.ಎನ್. ಬಳಗಾನೂರ, ಪಿ.ವಿ. ಚರಂತಿಮಠ, ಜೆ.ಬಿ. ಕಲ್ಲನಗೌಡ್ರ ಉಪಸ್ಥಿತರಿದ್ದರು. ಎಸ್.ಪಿ. ಬಳಿಗಾರ ಸ್ವಾಗತಿಸಿದರು.