ಮಕ್ಕಳ ಕೈಗೆ ಮೊಬೈಲ್, ದೇಹಕ್ಕೆ ಜಂಕ್ ಫುಡ್ ಅಪಾಯಕಾರಿ

| Published : Mar 10 2025, 12:20 AM IST

ಮಕ್ಕಳ ಕೈಗೆ ಮೊಬೈಲ್, ದೇಹಕ್ಕೆ ಜಂಕ್ ಫುಡ್ ಅಪಾಯಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಡಾ.ಸುಮಾ ಉಪನ್ಯಾಸ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಮಕ್ಕಳ ಕೈಗೆ ಮೊಬೈಲ್ ಕೊಡುವುದು ಮತ್ತು ಮಕ್ಕಳಿಗೆ ಜಂಕ್‌ಫುಡ್ ತಿನ್ನಿಸುವುದು ಎರಡೂ ಅಪಾಯಕಾರಿ ಬೆಳವಣಿಗೆ ಎಂದು ರಾಮಯ್ಯ ಆಸ್ಪತ್ರೆಯ ಮಕ್ಕಳ ತಜ್ಞೆ ಡಾ.ಸುಮಾ ಅಭಿಪ್ರಾಯಪಟ್ಟರು.

ತಾಲೂಕಿನ ಹರಿಯಬ್ಬೆ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹರಿಯಬ್ಬೆ ಗೆಳೆಯರ ಬಳಗ ಮತ್ತು ಶಾಲೆಯ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಕ್ಕಳ ದೈಹಿಕ, ಮಾನಸಿಕ ಆರೋಗ್ಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.

ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಹೆಚ್ಚು ದಿನ ಉಳಿಸಿಕೊಳ್ಳುವ ಸಲುವಾಗಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪು, ಸಕ್ಕರೆ, ಕೊಬ್ಬಿನ ಅಂಶವನ್ನು ಹೆಚ್ಚು ಬಳಸಿರುತ್ತಾರೆ. ಬಾಯಿಗೆ ರುಚಿ ಸಿಗುವ ಈ ಆಹಾರ ಪದಾರ್ಥ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜಂಕ್‌ಫುಡ್ ಸೇವನೆಯಿಂದ ಮಧುಮೇಹ, ರಕ್ತದೊತ್ತಡ, ಬೊಜ್ಜು, ಜೀರ್ಣಕಾರಿ ಸಮಸ್ಯೆಯoತಹ ಹಲವು ಕಾಯಿಲೆಗಳನ್ನು ನಾವೇ ಬರಮಾಡಿಕೊಂಡಂತಾಗುತ್ತದೆ. ಬಹುಮುಖ್ಯವಾಗಿ ಜಂಕ್ ಫುಡ್‌ನಲ್ಲಿ ವಿಟಮಿನ್, ಖನಿಜ, ನೈಸರ್ಗಿಕ ಪದಾರ್ಥಗಳ ಕೊರತೆ ಇರುತ್ತದೆ. ಇವುಗಳ ಹೆಚ್ಚಿನ ಸೇವನೆಯಿಂದ ಖಿನ್ನತೆ, ಆತಂಕ, ಪೌಷ್ಟಿಕಾಂಶಗಳ ಕೊರತೆ, ಮೆಮೊರಿ ದುರ್ಬಲತೆಯಂತಹ ಅಪಾಯಗಳು ಜಾಸ್ತಿ. ಇನ್ನು ಮಕ್ಕಳ ಕೈಗೆ ಮೊಬೈಲ್ ನೀಡುವುದನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಇದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳು ಚಿಕ್ಕ ಚಿಕ್ಕ ವಿಷಯಗಳನ್ನು ಸಹ ಗಂಭೀರವಾಗಿ ತೆಗೆದುಕೊಳ್ಳುವ ಮನಸ್ಥಿತಿಗೆ ಬದಲಾಗಿ ಬಿಡುತ್ತಾರೆ. ಮಕ್ಕಳ ಹಠವನ್ನು ತಣಿಸುವ ಉದ್ದೇಶಕ್ಕೆ ಪದೇ ಪದೇ ಅವರ ಕೈಗೆ ಮೊಬೈಲ್ ನೀಡಿದರೆ ನಿಮ್ಮ ಮಕ್ಕಳ ಆರೋಗ್ಯವನ್ನು ಖುದ್ದು ನೀವೇ ಹಾಳು ಮಾಡಿದಂತಾಗುತ್ತದೆ. ಹಾಗಾಗಿ ಸದೃಢ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಮಕ್ಕಳಲ್ಲಿ ಕಾಪಾಡಲು ಜಂಕ್ ಫುಡ್ ಮತ್ತು ಮೊಬೈಲ್ ಗಳಿಂದ ಅವರನ್ನು ದೂರವಿಡುವುದು ಒಳಿತು ಎಂದರು.

ಎಎಸ್‌ಐ ರೇಖಾ ಮಾತನಾಡಿ, ಮಹಿಳೆಯರನ್ನು ಸಮಾಜ ನೋಡುವ ದೃಷ್ಟಿಕೋನ ಮೊದಲು ಬದಲಾಗಬೇಕು. ಇಂದು ಎಲ್ಲಾ ರಂಗದಲ್ಲೂ ಮಹಿಳೆ ತನ್ನ ಶಕ್ತಿ ಸಾಮರ್ಥ್ಯ ತೋರಿದ್ದಾಳೆ. ಅವಳನ್ನು ಅಬಲೆ ಎನ್ನುವ ಕಾಲ ಮುಗಿದಿದ್ದು ಇನ್ನಷ್ಟು ಮಹಿಳೆಯರು ಎಲ್ಲಾ ರಂಗದಲ್ಲೂ ಶಕ್ತಿವಂತರಾಗುತ್ತಾ ಸಾಗಬೇಕಿದೆ ಎಂದರು.

ಸಿ. ಹೆಂಜಾರಪ್ಪ ಮಾತನಾಡಿ, ಹರಿಯಬ್ಬೆ ಗೆಳೆಯರ ಬಳಗದ ಈ ಕಾರ್ಯ ಶ್ಲಾಘನೀಯ. ಮಕ್ಕಳನ್ನು ವೈಜ್ಞಾನಿಕ ಚಿಂತನೆಗೆ ಹಚ್ಚುವ ಅವರ ಪ್ರಯತ್ನ ಮೆಚ್ಚುವಂತಹದು. ಕೆ.ಪಿ.ಸತ್ಯನಾರಾಯಣ ಸೇರಿ ಅವರ ಗೆಳೆಯರ ಬಳಗ ಮಕ್ಕಳ ಸದೃಢ ಮಾನಸಿಕ ಹಾಗೂ ದೈಹಿಕ ಆರೋಗ್ಯ ವೃದ್ಧಿಗೆ, ವಿಜ್ಞಾನದ ಬಗ್ಗೆ ಹೆಚ್ಚಿನ ಜ್ಞಾನಕ್ಕೆ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ಈ ವೇಳೆ ಎಲ್‌ಕೆಜಿ, ಯುಕೆಜಿ ವಿಭಾಗದ ಅಧ್ಯಕ್ಷೆ ಶಾರದಮ್ಮ ವೆಂಕಟೇಶಪ್ಪ, ಉಪಾಧ್ಯಕ್ಷೆ ಸ್ವರೂಪ, ವಿಜಯಲಕ್ಷ್ಮಿ, ಗಗನ, ಗ್ರಾಪಂ ಉಪಾಧ್ಯಕ್ಷೆ ಶಶಿಕಲಾ, ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷೆ ಶ್ರುತಿ, ಗೆಳೆಯರ ಬಳಗದ ಸಮನ್ವಯ ವ್ಯಕ್ತಿ ಅಂಬಾಸಾಯಿ, ಅಂಬುಜಾ, ಮೂಡಲ ಗಿರಿಯಪ್ಪ, ಭಾಗ್ಯ, ಮುಖ್ಯ ಶಿಕ್ಷಕ ಮಂಜಣ್ಣ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.