‘ಕನ್ನಡಪ್ರಭ ರೈತರತ್ನ’ನ ಹೊಲದಲ್ಲಿ ಚಲುವ ಬಿತ್ತನೆ

| N/A | Published : Jul 03 2025, 11:51 PM IST / Updated: Jul 04 2025, 07:34 AM IST

‘ಕನ್ನಡಪ್ರಭ ರೈತರತ್ನ’ನ ಹೊಲದಲ್ಲಿ ಚಲುವ ಬಿತ್ತನೆ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು ತಾಲೂಕಿನ ರೈತ, ‘ಕನ್ನಡಪ್ರಭ’ ರೈತರತ್ನ ಪ್ರಶಸ್ತಿ ಪುರಸ್ಕೃತ ಪಿ.ದಯಾನಂದ ಅವರ ಹೊಲದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿಯವರು ಗುರುವಾರ ರಾಗಿ ಬಿತ್ತನೆ ಮಾಡುವ ಮೂಲಕ ಈ ಬಾರಿಯ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದರು.

 ಚಾಮರಾಜನಗರ :  ಜಿಲ್ಲೆಯ ಹನೂರು ತಾಲೂಕಿನ ರೈತ, ‘ಕನ್ನಡಪ್ರಭ’ ರೈತರತ್ನ ಪ್ರಶಸ್ತಿ ಪುರಸ್ಕೃತ ಪಿ.ದಯಾನಂದ ಅವರ ಹೊಲದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿಯವರು ಗುರುವಾರ ರಾಗಿ ಬಿತ್ತನೆ ಮಾಡುವ ಮೂಲಕ ಈ ಬಾರಿಯ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿದರು.

ಪಂಚೆ-ಜುಬ್ಬಾ ಧರಿಸಿ ಬಂದಿದ್ದ ಸಚಿವರಿಗೆ ಹಸಿರು ಶಾಲು ಹೊದಿಸಿ ಕೃಷಿ ಇಲಾಖೆಯ ಅಧಿಕಾರಿಗಳು ಸ್ವಾಗತ ಕೋರಿದರು. ಬಳಿಕ, ಸಚಿವರು ಎತ್ತುಗಳಿಗೆ ನಮಸ್ಕರಿಸಿ, ನೇಗಿಲು ಹಿಡಿದು ರಾಗಿ ಬಿತ್ತಿದರು‌‌. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹಾಗೂ ಶಾಸಕ ಎಂ.ಆರ್‌. ಮಂಜುನಾಥ್ ಸಚಿವರಿಗೆ ಸಾಥ್ ನೀಡಿದರು. ಬೀಜ ಬಿತ್ತನೆ ಬಳಿಕ ರೈತ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣಗಳನ್ನು ಸಚಿವರು ವಿತರಿಸಿದರು‌. ಎಂಆರ್‌1 ರಾಗಿ ಬಿತ್ತನೆ ಮಾಡಿದ ನಂತರ, ನ್ಯಾನೋ ಯೂರಿಯಾವನ್ನು ಡ್ರೋಣ್‌ ಮೂಲಕ ಮುಸುಕಿನ ಜೋಳದ ಬೆಳೆಗೆ ಸಿಂಪಡಣೆ ಮಾಡಿದರು.

ಇದೇ ವೇಳೆ, ಕೃಷಿ ಇಲಾಖೆ ಮೂಲಕ ಪಿ.ದಯಾನಂದರ ಸುಸ್ಧಿರ ಕೃಷಿ ಬಗ್ಗೆ ಸಾಕ್ಷ್ಯಚಿತ್ರ ಮಾಡಿಸಿದ ಸಚಿವರು, ಸುಸ್ಧಿರ ಕೃಷಿ ಬಗ್ಗೆ ಸ್ವತಃ ಸಚಿವರೇ ಸಂದರ್ಶನ ಮಾಡಿದರು. ಸಂದರ್ಶನದ ನಂತರ ದಯಾನಂದ ಅವರು ಬೆಳೆದಿರುವ ಹತ್ತಾರು ಬೆಳೆ ಮಾದರಿ, ನೂರಾರು ಬಗೆ ಬಗೆಯ ಹಣ್ಣಿನ ಗಿಡಗಳು, ಸಾವಿರಾರು ಜಾತಿ ಸಸ್ಯಗಳು, ಬರಗೂರ್, ಹಳ್ಳಿಕಾರ್ ತಳಿ ಹಸುಗಳು, ಕುರಿ ಕೋಳಿ, ಮೇಕೆ ಹಾಗೂ ಕತ್ತೆಗಳು, ಅಡುಗೆ ಎಣ್ಣೆ ಘಟಕ, ಸುಗಂಧ ತಯಾರಿಕಾ ಘಟಕ, ರೇಷ್ಮೆಘಟಕ, ವಿವಿಧ ಬಗೆ ಪರಿಕರಗಳ ಜೊತೆಗೆ ಎತ್ತಿನಗಾಡಿ, ಕುದುರೆಗಾಡಿ, ವಿವಿಧ ಮಾದರಿ ಸ್ಕೂಟರ್‌ ಮತ್ತು ಕಾರುಗಳನ್ನು ವೀಕ್ಷಣೆ ಮಾಡಿದರು.

ಈ ವೇಳೆ ಮಾತನಾಡಿ, ವ್ಯವಸಾಯ ಕಷ್ಟಪಟ್ಟು ಮಾಡುವ ದುಡಿಮೆಯಾಗಿದ್ದು ರೈತರು ನಿತ್ಯ ಜಮೀನಿಗೆ ಹೋಗಬೇಕು. ಆಗೊಮ್ಮೆ- ಈಗೊಮ್ಮೆ ಜಮೀನಿಗೆ ಹೋದರೆ ಯಾವುದೇ ಆದಾಯ ಬರಲು ಸಾಧ್ಯವಿಲ್ಲ. ಒಂದೆಕರೆ, ಎರಡೆಕೆರೆ ಜಮೀನಿದ್ದವರೂ ಲಕ್ಷಗಟ್ಟಲೆ ಆದಾಯ ಕಾಣಬಹುದು. ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳುವ ಪದ್ಧತಿಯನ್ನು ರೈತರು ಅನುಸರಿಸಬೇಕು. ಆಧುನಿಕ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಗತಿಪರ ರೈತ ದಯಾನಂದ: ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ಚಿಂಚಳ್ಳಿ ಗ್ರಾಮದ ಬಳಿ, ಮಹದೇಶ್ವರ ಬೆಟ್ಟದ ನಿಸರ್ಗದ ಮಡಿಲಿನಲ್ಲಿ ಹತ್ತಾರು ಎಕರೆ ಕೃಷಿ ಭೂಮಿಯಲ್ಲಿ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಜೇನು, ರೇಷ್ಮೆ, ಪುಷ್ಪ ಹಾಗೂ ಅರಣ್ಯ ಕೃಷಿ ಮಾಡುವ ಮೂಲಕ ತಮ್ಮ ಜಮೀನನ್ನು ಕೃಷಿ ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸಿದ್ದಾರೆ ಪ್ರಗತಿ ಪರ ರೈತ ದಯಾನಂದ.ಇವರ ಸುಸ್ಧಿರ ಕೃಷಿ ಸಾಧನೆ ಗುರುತಿಸಿ ಕನ್ನಡಪ್ರಭ ರೈತ ಪ್ರಶಸ್ತಿಯನ್ನು ಪ್ರಕಟಿಸಿತ್ತು. ಧರ್ಮಸ್ಧಳದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಅವರೇ ಪಿ.ದಯಾನಂದ ಅವರಿಗೆ ರೈತರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದರು.

Read more Articles on