ಮೊಬೈಲ್‌ ಬಳಕೆಯೂ ಬದುಕಿಗೆ ಮಾರಕ

| Published : Aug 02 2024, 12:48 AM IST

ಸಾರಾಂಶ

ಜನರ ಆರೋಗ್ಯ ಹಾಳು ಮಾಡುವಲ್ಲಿ ಮಾದಕ ವಸ್ತುಗಳಷ್ಟೇ ಇಂದು ಮೊಬೈಲ್ ಕೂಡಾ ಹೊರ ಹೊಮ್ಮುತ್ತಿರುವುದು ವಿಷಾದನೀಯ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜನರ ಆರೋಗ್ಯ ಹಾಳು ಮಾಡುವಲ್ಲಿ ಮಾದಕ ವಸ್ತುಗಳಷ್ಟೇ ಇಂದು ಮೊಬೈಲ್ ಕೂಡಾ ಹೊರ ಹೊಮ್ಮುತ್ತಿರುವುದು ವಿಷಾದನೀಯ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

ಜಿಪಂ ನೂತನ ಸಭಾಭವನದಲ್ಲಿ ಗುರುವಾರ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ, ಶಿಕ್ಷಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಲಿಂ.ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನ ಆಚರಿಸಲ್ಪಡುವ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ಗ್ರಾಮಗಳಲ್ಲಿರುವ ವ್ಯಸನಿಗಳನ್ನು ಗುರುತಿಸಿ ದುಶ್ಚಟಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ. ಇಂದು ವಿದ್ಯಾರ್ಥಿಗಳೇ ವ್ಯಸನಿಗಳಾಗುತ್ತಿರುವುದು ವಿಷಾದನೀಯ. ಇದಕ್ಕೆ ಪಾಲಕರು ಕಾರಣರಲ್ಲ, ಶಿಕ್ಷಕರು ಕಾರಣರಲ್ಲ. ತಿಳಿವಳಿಕೆಯ ವಯಸ್ಸಿನ ಯುವಕರು ತಪ್ಪು ಸರಿಯನ್ನು ಅರಿತಿರುತ್ತಾರೆ. ಇಂತವರೆಲ್ಲ ದುಷ್ಚಟಗಳಿಗೆ ದಾಸರಾದರೇ ಅದಕ್ಕೆ ನೀವೇ ಹೊಣೆಗಾರರು ಆಗತ್ತೀರಿ. ಮನೆಯಲ್ಲಿ ಒಬ್ಬ ವ್ಯಸನಿಯಾದರೆ ಇಡೀ ಕುಟುಂಬದ ನೆಮ್ಮದಿ ಜೊತೆಗೆ ಗೌರವ ಹಾಗೂ ಆರೋಗ್ಯ ಹಾಳಾಗುತ್ತಿದ್ದು, ಇದರ ಅರಿವು ವ್ಯಸನಿಗಳಿಗೆ ಆಗಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ, ಕೇವಲ ಮಕ್ಕಳನ್ನು ಹೆತ್ತರೆ ಸಾಲದು ಅವರನ್ನು ಸುಸಂಸ್ಕೃತರನ್ನಾಗಿ ಮಾಡಿ ಸಮೃದ್ಧ ಸಮಾಜ ಕಟ್ಟಲು ಪಾಲಕರು ಜವಾಬ್ದಾರಿ ಮಹತ್ವದ್ದಾಗಿದೆ. ಬದುಕಿನಲ್ಲಿ ವಿಪರ್ಯಾಸ ನಡೆಯದಂತೆ ನೋಡಿಕೊಳ್ಳಬೇಕು. ಅಂದಾಗ ಮಾತ್ರ ಮನುಷ್ಯ ಯಾವುದೇ ವ್ಯಸನಕ್ಕೆ ಬಲಿಯಾಗದೇ ಆರೋಗ್ಯಯುತವಾದ ಸುಂದರ ಜೀವನ ನಡೆಸಲು ಸಾದ್ಯವಾಗುತ್ತದೆ. ಕುಟುಂಬದಲ್ಲಿ ಒಬ್ಬ ವ್ಯಸನಿಕನಿಂದ ಮನೆತನಕ್ಕೆ, ತಂದೆ ತಾಯಿಗಳಿಗೆ ಹಾಗೂ ಆತನ ಮಕ್ಕಳಿಗೂ ಕೂಡ ಸಮಾಜದಲ್ಲಿ ಶಿಕ್ಷೆ ಅನುಭವಿಸುವಂತಾಗುತ್ತದೆ ಎಂದರು.

ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಮಾತನಾಡಿ, ದುಶ್ಚಟಗಳು ಮೊದಲು ಆಕರ್ಷಣೆಗೊಂಡು ಕ್ರಮೇಣ ಬೆಳೆದು ನಿಂತು ಆ ವ್ಯಕ್ತಿಯನ್ನಷ್ಟೇ ಅಲ್ಲ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತದೆ. ಅಂತಹ ವ್ಯಸನಿಗಳು ಮೇಲಿಂದ ಮೇಲೆ ಅಶಾಂತಿ ಮೂಡಿಸುವ ಕಾರ್ಯಗಳು ಮಾಡಿದರೆ ಅವರಿಗೆ ಕಾನೂನಿನಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಎಚ್ಚರಿಸಿದರು.

ಇಳಕಲ್ಲಿನ ಮಹಾಂತ ಶಿವಯೋಗಿಗಳು ತಮ್ಮ ಈಡೀ ಜೀವನವನ್ನು ವ್ಯಸಮುಕ್ತ ಸಮಾಜ ನಿರ್ಮಿಸಲು ಪಣ ತೊಟ್ಟಿದ್ದರು. ಇಂದು ಪ್ರತಿಜ್ಞಾವಿಧಿ ಸ್ವೀಕರಿಸುವ ವಿದ್ಯಾರ್ಥಿಗಳು ಶ್ರೀಗಳ ಮಾರ್ಗದರ್ಶನದಲ್ಲಿ ನಡೆಯಬೇಕಿದೆ ಎಂದರು.

ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿ, ಕೆಟ್ಟ ಚಟಗಳಿಂದ ದೂರವಿರುವ ಜೊತೆಗೆ ಆರೋಗ್ಯಕರವಾದ ಹವ್ಯಾಸಗಳನ್ನು ಮಾತ್ರ ರೂಢಿಸಿಕೊಳ್ಳಬೇಕು. ಅಂದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ವ್ಯಸನಿಗಳಾದವರು ತಮ್ಮ ಇಚ್ಚಾಶಕ್ತಿಯಿಂದ ಹೊರಬರಲು ಸಾಧ್ಯವಿದೆ. ಮನಸ್ಸು ಮಾಡಿದರೆ ಸಾಧ್ಯವಾಗಲಾದರು ಯಾವುದು ಇಲ್ಲ. ಇದನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡಿದಾಗ ಮಾತ್ರ ವ್ಯಸನಮುಕ್ತರನ್ನಾಗಿ ಮಾಡಲು ಸಾಧ್ಯವೆಂದರು.

ಮನೋರೋಗ ತಜ್ಞರಾದ ಡಾ.ಸೌಮ್ಯ ಪಾಟೀಲ ಅವರು ಬೀಡಿ, ಸಿಗರೇಟ್, ತಂಬಾಕು ಉತ್ಪನ್ನ ಹಾಗೂ ಮದ್ಯಪಾನದಂತಹ ದುಶ್ಚಟಗಳಿಂದ ಉಂಟಾಗುವ ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು. ಪ್ರಾರಂಭದಲ್ಲಿ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಕಸ್ತೂರಿ ಪಾಟೀಲ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಂಕರಲಿಂಗ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.