ಮೊಬೈಲ್‌ ಬಳಕೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮಾರಕ

| Published : Dec 28 2023, 01:45 AM IST / Updated: Dec 28 2023, 01:46 AM IST

ಸಾರಾಂಶ

ದೊಡ್ಡಬಳ್ಳಾಪುರ: ಪರಿಶ್ರಮ ಮತ್ತು ಸಂಕಲ್ಪದಿಂದ ನಿರ್ದಿಷ್ಟ ಗುರಿ ಸಾಧನೆ ಸಾಧ್ಯವಾಗುತ್ತದೆ. ಓದಿನ ವಿವಿಧ ಆಯಾಮಗಳನ್ನು ವೈಜ್ಞಾನಿಕವಾಗಿ ರೂಢಿಸಿಕೊಳ್ಳುವುದರಿಂದ ಸಮಗ್ರ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ಎಂ.ಎಸ್‌.ರಾಮಯ್ಯ ವೈದ್ಯಕೀಯ ಸಂಸ್ಥೆಯ ಕೀಲು ಮತ್ತು ಮೂಳೆ ರೋಗ ತಜ್ಞ ಡಾ.ಮಂಜುನಾಥ್ ಹೇಳಿದರು.

ದೊಡ್ಡಬಳ್ಳಾಪುರ: ಪರಿಶ್ರಮ ಮತ್ತು ಸಂಕಲ್ಪದಿಂದ ನಿರ್ದಿಷ್ಟ ಗುರಿ ಸಾಧನೆ ಸಾಧ್ಯವಾಗುತ್ತದೆ. ಓದಿನ ವಿವಿಧ ಆಯಾಮಗಳನ್ನು ವೈಜ್ಞಾನಿಕವಾಗಿ ರೂಢಿಸಿಕೊಳ್ಳುವುದರಿಂದ ಸಮಗ್ರ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ಎಂ.ಎಸ್‌.ರಾಮಯ್ಯ ವೈದ್ಯಕೀಯ ಸಂಸ್ಥೆಯ ಕೀಲು ಮತ್ತು ಮೂಳೆ ರೋಗ ತಜ್ಞ ಡಾ.ಮಂಜುನಾಥ್ ಹೇಳಿದರು.

ಇಲ್ಲಿನ ಸಹ್ಯಾದ್ರಿ ಮತ್ತು ಜ್ಞಾನಗಂಗಾ ವಿದ್ಯಾ ಸಂಸ್ಥೆಯ ನೇತೃತ್ವದಲ್ಲಿ ಬುಧವಾರ ಮಾಂಗಲ್ಯ ಸಮುದಾಯ ಭವನದಲ್ಲಿ ನಡೆದ ನಮ್ಮ ಸಹ್ಯಾದ್ರಿ ಜ್ಞಾನೋತ್ಸವ-2023 ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಿತಿಮೀರಿದ ಮೊಬೈಲ್‌ ಬಳಕೆ ಹಾಗೂ ಅನಗತ್ಯ ಸಮಯ ವ್ಯಯದ ಕಾರಣದಿಂದಾಗಿ ಶೈಕ್ಷಣಿಕವಾಗಿ ನಿರೀಕ್ಷಿತ ಪ್ರಗತಿ ಸಾಧ್ಯವಾಗುವುದಿಲ್ಲ. ಪೋಷಕರು ಮಾದರಿ ವ್ಯಕ್ತಿತ್ವವನ್ನು ರೂಢಿಸಿಕೊಂಡು ತಮ್ಮ ಮಕ್ಕಳಿಗೆ ಮಾರ್ಗದರ್ಶನ ಮಾಡುವುದು ಅಗತ್ಯ. ಮನೆಯ ವಾತಾವರಣ, ಭಾಷೆ ಹಾಗೂ ದೊಡ್ಡವರ ನಡವಳಿಕೆಗಳು ಮಕ್ಕಳ ಮೇಲೆ ಬಹುಬೇಗ ಪರಿಣಾಮ ಬೀರುತ್ತವೆ. ಹೀಗಾಗಿ ಅಧ್ಯಯನಶೀಲ ಮಕ್ಕಳ ಮುಂದೆ ಸುಸಂಸ್ಕೃತ ನಡವಳಿಕೆ ಅತ್ಯಗತ್ಯ ಎಂದು ತಿಳಿಸಿದರು.

ಸಾಧನೆಯ ಹಾದಿಯಲ್ಲಿ ಮುನ್ನಡೆದಾಗ ಮಾತ್ರ ಯಶಸ್ಸು ನಮ್ಮ ಕೈಹಿಡಿಯುತ್ತದೆ. ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಅಗತ್ಯ ಮಾರ್ಗದರ್ಶನ ಮತ್ತು ಸ್ಪೂರ್ತಿ ದೊರೆತಾಗ ಅದು ಅನಾವರಣಗೊಳ್ಳುತ್ತದೆ. ತಾವು ಜ್ಞಾನಗಂಗಾ ವಿದ್ಯಾ ಸಂಸ್ಥೆಯ ಹಳೆಯ ವಿದ್ಯಾರ್ಥಿಯೂ ಆಗಿರುವುದು ನಮ್ಮ ಹೆಮ್ಮೆ ಎಂದರು.

ಬೆಂ.ಗ್ರಾ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ವಿದ್ಯಾವಂತ ಯುವಸಮುದಾಯ ವಿವೇಕವನ್ನೂ ಮೈಗೂಡಿಸಿಕೊಳ್ಳುವುದು ಅಗತ್ಯ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವುದರ ಜೊತೆಗೆ ಸೋಲುಗಳನ್ನು ಸಮಭಾವದಿಂದ ಸ್ವೀಕರಿಸುವ ಆತ್ಮಸ್ಥೈರ್ಯವನ್ನು ಬೆಳೆಸುವುದು ಅಗತ್ಯ ಎಂದು ಹೇಳಿದರು.

ನಿವೃತ್ತ ಮುಖ್ಯಶಿಕ್ಷಕ ಕೆ.ಎನ್.ಹನುಮೇಗೌಡ ಮಾತನಾಡಿ, ಮಕ್ಕಳು ಉನ್ನತ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಸಮಾಜದ ಆಸ್ತಿಯಾಗಿ ಬೆಳೆಯುತ್ತಾರೆ. ವಿದ್ಯಾರ್ಥಿಗಳು ಗುರುಗಳನ್ನು ಮೀರಿಸಿ ಬೆಳೆಯುವುದೇ ನೈಜ ಸಾರ್ಥಕತೆ ಎಂದು ತಿಳಿಸಿದರು.

ಇದೇ ವೇಳೆ ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ 40ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರತಿ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾವಂತ ವಿದ್ಯಾರ್ಥಿಗಳಾದ ಜಿ.ವರ್ಷಾ ಮತ್ತು ಸಿ.ಎಂ.ವೇದಲಕ್ಷ್ಮಿ ಉದ್ಘಾಟನೆ ನೆರವೇರಿಸಿದರು. ಮುಖ್ಯಶಿಕ್ಷಕರಾದ ಜಗದೀಶ್, ರವಿಕುಮಾರ್, ಸಹ್ಯಾದ್ರಿ ಮತ್ತು ಜ್ಞಾನಗಂಗಾ ವಿದ್ಯಾ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

27ಕೆಡಿಬಿಪಿ4-

ದೊಡ್ಡಬಳ್ಳಾಪುರದ ಸಹ್ಯಾದ್ರಿ ಮತ್ತು ಜ್ಞಾನಗಂಗಾ ವಿದ್ಯಾ ಸಂಸ್ಥೆಯ ನೇತೃತ್ವದಲ್ಲಿ ನಮ್ಮ ಸಹ್ಯಾದ್ರಿ ಜ್ಞಾನೋತ್ಸವ-2023 ಕಾರ್ಯಕ್ರಮದಲ್ಲಿ ತಜ್ಞ ವೈದ್ಯ ಡಾ.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.