ಮಾವಿನಕುರ್ವೆ ಬಂದರಿನಲ್ಲಿ ಬಾಂಬ್ ದಾಳಿಯ ಅಣಕು ಕಾರ್ಯಾಚರಣೆ

| Published : May 17 2025, 01:17 AM IST

ಸಾರಾಂಶ

ಅಣಕು ಕಾರ್ಯಾಚರಣೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿ 6 ಜನರು ಗಾಯಗೊಂಡಿದ್ದಾರೆ.

ಭಟ್ಕಳ: ಇಲ್ಲಿನ ಮಾವಿನಕುರ್ವೆ ಬಂದರಿನಲ್ಲಿ ಕರಾವಳಿ ಕಾವಲು ಪಡೆ, ಅಗ್ನಿಶಾಮಕದಳ, ಗ್ರಾಮೀಣ ಪೋಲಿಸ್ ಠಾಣೆ, ಆರೋಗ್ಯ ಇಲಾಖೆ, ಬಂದರು ಇಲಾಖೆ, ಲೈಟ್ ಹೌಸ್ ನ ಜಂಟಿ ಸಹಯೋಗದಲ್ಲಿ ಬಾಂಬ್ ದಾಳಿಯ ಅಣಕು ಕಾರ್ಯಾಚರಣೆ ನಡೆಸಲಾಯಿತು.

ಅಣಕು ಕಾರ್ಯಾಚರಣೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿ 6 ಜನರು ಗಾಯಗೊಂಡಿದ್ದು, ಘಟನೆ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಪೋಲಿಸ್ ಸಿಬ್ಬಂದಿ ಆಗಮಿಸಿ ಘಟನೆ ನಡೆದ ಸ್ಥಳವನ್ನು ಸುತ್ತುವರಿದು ನಾಕಾಬಂಧಿ ಮಾಡಿ ಬಂದೋಬಸ್ತ್‌ ಒದಗಿಸಿದರು. ಅಗ್ನಿಶಾಮಕದಳ ವಾಹನ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ ಗಾಯಾಳುಗಳನ್ನು ತ್ವರಿತವಾಗಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿತು. ಪೊಲೀಸ್ ಇಲಾಖೆ ಶಸ್ತ್ರಸಜ್ಜಿತ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.

ಕರಾವಳಿ ಕಾವಲು ಪಡೆಯ ಠಾಣಾಧಿಕಾರಿ ಕುಸುಮಾಧರ್ ಕೆ. ಸಾರ್ವಜನಿಕರನ್ನುದ್ದೇಶಿಸಿ‌ ಮಾತನಾಡಿ, ಇಂತಹ ಸಂದರ್ಭದಲ್ಲಿ ಜನರು ಎಚ್ಚರಿಕೆಯಿಂದ ಇರಬೇಕು. ಯಾವುದೇ ಸಂದೇಹಾಸ್ಪದ ಘಟನೆಗಳು ಕಂಡುಬಂದಲ್ಲಿ ಅಥವಾ ಹೊರ ರಾಜ್ಯದ, ಹೊರ ದೇಶದ ಬೋಟ್, ಅಪರಿಚಿತ ವ್ಯಕ್ತಿಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಇಲಾಖೆಗೆ ತಿಳಿಸಬೇಕು. ಗಡಿ ಪ್ರದೇಶಗಳಲ್ಲಿ ದಾಳಿಗಳು ಸಂಭವಿಸದಂತೆ ಕರಾವಳಿ ಭಾಗದಲ್ಲೂ ದಾಳಿ ಸಂಭವಿಸಬಹುದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರದ ಅಗತ್ಯವಿದೆ. ದೇಶ ಸೇವೆಗೆ ನಾವೆಲ್ಲರೂ ಸದಾ ಸಿದ್ಧರಾಗಿರೋಣ ಎಂದರು.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕದಳದ ಠಾಣಾಧಿಕಾರಿ ಮಹಮ್ಮದ್ ಶಫಿ ಮತ್ತಿತರರಿದ್ದರು.

ಭಟ್ಕಳ ಬಂದರಿನಲ್ಲಿ ಬಾಂಬ್ ದಾಳಿ ಕುರಿತ ಅಣಕು ಕಾರ್ಯಾಚರಣೆ ನಡೆಯಿತು.