ಸಾರಾಂಶ
ಸ್ಥಳೀಯ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಬುಧವಾರ ಸಂಜೆ ನಾಗರಿಕ ರಕ್ಷಣಾ ಅಣಕು ಕವಾಯತು (ಮಾಕ್ ಡ್ರಿಲ್) ನಡೆಸಲಾಯಿತು.
ರಾಯಚೂರು : ಯುದ್ಧರ ಸನ್ನಿವೇಶದಲ್ಲಿ ಯಾವ ರೀತಿಯಾಗಿ ಎಚ್ಚರಿಕೆಯಿಂದಿರಬೇಕು, ತುರ್ತು ಪರಿಸ್ಥಿತಿಯನ್ನು ಹೇಗೆ ನಿರ್ವಹಿಸಬೇಕು ಎನ್ನುವುದರ ಕುರಿತು ಸ್ಥಳೀಯ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಬುಧವಾರ ಸಂಜೆ ನಾಗರಿಕ ರಕ್ಷಣಾ ಅಣಕು ಕವಾಯತು (ಮಾಕ್ ಡ್ರಿಲ್) ನಡೆಸಲಾಯಿತು.
ಕೇಂದ್ರ ರೈಲ್ವೆ ಇಲಾಖೆಯ ಸೂಚನೆಯಂತೆ ದಕ್ಷಿಣ ಮಧ್ಯೆ ರೈಲ್ವೆ ಗುಂತಕಲ್ ವಿಭಾಗದ ವ್ಯಾಪ್ತಿಗೆ ಬರುವ ರಾಯಚೂರು ರೈಲ್ವೆ ನಿಲ್ದಾಣದ ಆವರಣದಲ್ಲಿ ರೈಲ್ವೆ ಪೊಲೀಸ್ ಇಲಾಖೆ, ನಾಗರಿಕ ರಕ್ಷಣಾ ವಿಭಾಗದ ಅಧಿಕಾರಿ, ಸಿಬ್ಬಂದಿ ತಂಡ ಮಾಕ್ ಡ್ರಿಲ್ ನಡೆಸಿತು.
ಯುದ್ಧದ ಸಮಯದಲ್ಲಿ ಎದುರಾಗುವ ಸನ್ನಿವೇಶಗಳು, ಬಾಂಬ್ ಸ್ಫೋಟ, ಸ್ವಯಂ ರಕ್ಷಣೆ, ಗಾಯಾಳುಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ನೀಡುವುದು, ಬೆಂಕಿ ನಂದಿಸುವುದು, ಬಾಂಬ್ ಸ್ಥಳದಲ್ಲಿ ಯಾವ ರೀತಿಯಾಗಿರಬೇಕು, ಸಿಪಿಆರ್ ಸೇರಿದಂತೆ ಇತರೆ ಮುನ್ನೆಚ್ಚರಿಕಾ ಕ್ರಮಗಳು, ಮಾಡಬೇಕಾದಂತಹ ಕೆಲಸ-ಕಾರ್ಯಗಳ ಕುರಿತು ಅಣಕು ಪ್ರದರ್ಶನವನ್ನು ನಡೆಸಲಾಯಿತು.
ಆರಂಭದಲ್ಲಿ ಪಟಾಕಿ ಸಿಡಿಸಿ ಅದನ್ನು ಬಾಂಬ್ ದಾಳಿಯಾಗಿದೆ ಎಂದು ಘೋಷಣೆ ಮಾಡುತ್ತ ಹಸಿರು ಹಾಗೂ ಕೆಂಪು ಬಾವುಟ ಪ್ರದರ್ಶಿಸಿ ನಾಗರಿಕರಿಗೆ ದಾಳಿಯ ಕುರಿತು ಡಂಗುರ ಸಾರಲಾಯಿತು. ಬಳಿಕ ದಾಳಿಯಿಂದ ಗಾಯಗೊಂಡು ನೆಲಕ್ಕೆ ಬಿದ್ದವರು ಚೀರಾಡುತ್ತಾ ಸಹಾಯಕ್ಕೆ ಕೋರಿದ್ದರು. ಕೈ ಕಾಲು, ತಲೆಗೆ ಗಾಯಗೊಂಡವರನ್ನು ಅನೇಕರು ತಮ್ಮ ಭುಜದ ಮೇಲೆ, ಸ್ಟ್ರೆಚರ್ ಮೂಲಕ ತುರ್ತು ಚಿಕಿತ್ಸಾ ಘಟಕಕ್ಕೆ ಸಾಗಣೆ ಮಾಡಿದರು.
ಅಗತ್ಯ ಪ್ರಮಾಣದಲ್ಲಿ ಸ್ಟ್ರೆಚರ್ ಇಲ್ಲದ ವೇಳೆ ಪ್ಲಾಸ್ಟಿಕ್ ಚೀಲ, ಬಂಬುಗಳಿಂದ ತಯಾರಿಸಿದ ಸ್ಟ್ರೆಚರ್, ಹಗ್ಗವನ್ನು ಸ್ಟ್ರೆಚರ್ ತರಹ ಮಾಡಿ ಸಾಗಿಸುವ ಬಗೆ ಬಳಿಕ ಅಲ್ಲಿಯೇ ಪ್ರಥಮ ಚಿಕಿತ್ಸೆ ಘಟಕ, ತುರ್ತು ಚಿಕಿತ್ಸಾ ಕೇಂದ್ರ ಸ್ಥಾಪಿಸಿ ಬ್ಯಾಂಡೇಜ್, ಒಆರ್‌ಎಸ್ ಮುಂತಾದ ಚಿಕಿತ್ಸಾ ವಿಧಾನದ ಮೂಲಕ ಆರಂಭಿಕ ಚಿಕಿತ್ಸೆ ನೀಡಲಾಗುತ್ತದೆ.
ಮತ್ತೊಂದೆಡೆ ಅಗ್ನಿ ದುರಂತ ಸಂಭವಿಸಿದಾಗ ಯಾವ ರೀತಿಯಲ್ಲಿ ನಂದಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಟ್ಟಿಗೆಗಳಿಗೆ ಬೆಂಕಿ ಹೊತ್ತಿಸಿ ಅಣಕು ಪ್ರದರ್ಶನ ಮಾಡಲಾಯಿತು. ಇದೇ ವೇಳೆ ದಾಳಿಯಲ್ಲಿ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಾಗ ಯಾವ ರೀತಿಯಲ್ಲಿ ಪ್ರಾಣ ಕಾಪಾಡಬೇಕು ಎಂಬುವುದರ ಕುರಿತು ಪ್ರಯಾಣಿಕರಿಗೆ, ನೆರೆದ ಸಾರ್ವಜನಿಕರಿಗೆ ತಿಳಿಸಲಾಯಿತು.
ಈ ಸಂದರ್ಭ ಆರ್‌ಪಿಎಫ್ ನ ಅಧಿಕಾರಿಗಳಾದ ಕೆ.ಸುದರ್ಶನ ರೆಡ್ಡಿ, ಅನಿಲ ಕುಮಾರ ಸಿಂಗ್, ಅನುರಾಗ ಕುಮಾರ, ಪ್ರವೀಣ ಕುಮಾರ, ಮದುಸೂಧನರೆಡ್ಡಿ, ಶ್ರೀನಿವಾಸುಲು, ರಾಜಶೇಖರ, ಭರತ ಭೂಷಣ, ರಾಮಚಂದ್ರರೆಡ್ಡಿ, ಹೇಮರಾಜ,ಅರವಿಂದ ಕುಮಾರ ಸೇರಿ ವೈದ್ಯಕೀಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಇದ್ದರು.
ಜಿಲ್ಲಾಡಳಿತದಿಂದ ತುರ್ತುಸಭೆ ಬೆನ್ನಲ್ಲೆ ಮಾಕ್ ಡ್ರಿಲ್
ತುರ್ತು ಪರಿಸ್ಥಿತಿಯ ನಿರ್ವಹಣೆ ಬಗ್ಗೆ ರಾಯಚೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ನಿಗಾ ವಹಿಸಲು ಆರಂಭಿಸಿದೆ. ಬುಧವಾರ ಜಿಲ್ಲಾಡಳಿತ ಭವನದಲ್ಲಿ ಬೆಳಿಗ್ಗೆ ತುರ್ತುಸಭೆ ನಡೆದ ಬೆನ್ನಲ್ಲೆ ನಗರದ ಜನನಿಬಿಡ ಪ್ರದೇಶ ರೈಲು ನಿಲ್ದಾಣದಲ್ಲಿ ಮಾಕ್ ಡ್ರಿಲ್ ಅಭ್ಯಾಸ ಮಾಡಲಾಯಿತು.
ತುರ್ತು ಪರಿಸ್ಥಿತಿ ಎದುರಾದಲ್ಲಿ ಜನಸಂದಣಿ ಇರುವ ರೈಲು ನಿಲ್ದಾಣದಲ್ಲಿ ಪ್ರಯಾಣಿಕರನ್ನು ಹೇಗೆ ರಕ್ಷಣೆ ಮಾಡಬಹುದು ಎಂಬುದರ ಬಗ್ಗೆ ಅಣಕು ಪ್ರದರ್ಶನದ ಮೂಲಕ ತೋರಿಸಿ ರಾಯಚೂರು ಜಿಲ್ಲೆಯಲ್ಲಿ ಮಾಕ್ ಡ್ರಿಲ್ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಲಾಯಿತು. ಆಂಧ್ರದ ಕಡಪ ಮೂಲದ 30 ಅಧಿಕ ಸಿವಿಲ್ ಡಿಫೆನ್ಸ್ ತಂಡದಿಂದ ಮಾಕ್ ಡ್ರಿಲ್ ನಡೆಯಿತು. ತುರ್ತು ಪರಿಸ್ಥಿತಿ ವೇಳೆ ಜನರು ಗಾಯಗೊಂಡಾಗ ಅವರಿಗೆ ಹೇಗೆ ಚಿಕಿತ್ಸೆಗೊಳಪಡಿಸಬೇಕು ಎಂಬುದರ ಬಗ್ಗೆ ಮತ್ತು ಗಾಯಗೊಂಡು ನರಳುವವರಿಗೆ ಪ್ರಥಮ ಚಿಕಿತ್ಸೆ ಹೇಗೆ ನೀಡಬೇಕು ಎಂಬ ಬಗ್ಗೆ ಅಣಕು ಪ್ರದರ್ಶನ ನಡೆಸಿ ಜನತೆಗೆ ಜಾಗೃತಿ ಮೂಡಿಸಲಾಯಿತು.