ಕಾರವಾರದಲ್ಲಿ ಮೇ 12ರಂದು ಮಾಕ್ ಡ್ರಿಲ್: ಡಿಸಿ ಲಕ್ಷ್ಮೀಪ್ರಿಯಾ

| Published : May 09 2025, 12:39 AM IST

ಸಾರಾಂಶ

ಐಎನ್‌ಎಸ್ ಕದಂಬ ನೌಕಾನೆಲೆಯ ಅಮದಳ್ಳಿ ಕಾಲನಿ, ಕೈಗಾ ಅಣು ವಿದ್ಯುತ್ ಯೋಜನಾ ಪ್ರದೇಶ, ಬಿಣಗಾದ ಗ್ರಾಸಿಂ ಇಂಡಸ್ಟ್ರಿ, ಕಾರವಾರದ ರವೀಂದ್ರನಾಥ ಟಾಗೋರ್ ಕಡಲತೀರ, ಕಾರವಾರ ನಗರ ಹಾಗೂ ಮಲ್ಲಾಪುರದ ಕೈಗಾ ಟೌನ್ ಶಿಪ್ ನಲ್ಲಿ ನಡೆಯಲಿದೆ.

ಕಾರವಾರ: ಕಾರವಾರದ ವಿವಿಧೆಡೆ ಮೇ 12ರಂದು ಮಾಕ್ ಡ್ರಿಲ್ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ, ಈ ವಿವರ ನೀಡಿದರು.

ಐಎನ್‌ಎಸ್ ಕದಂಬ ನೌಕಾನೆಲೆಯ ಅಮದಳ್ಳಿ ಕಾಲನಿ, ಕೈಗಾ ಅಣು ವಿದ್ಯುತ್ ಯೋಜನಾ ಪ್ರದೇಶ, ಬಿಣಗಾದ ಗ್ರಾಸಿಂ ಇಂಡಸ್ಟ್ರಿ, ಕಾರವಾರದ ರವೀಂದ್ರನಾಥ ಟಾಗೋರ್ ಕಡಲತೀರ, ಕಾರವಾರ ನಗರ ಹಾಗೂ ಮಲ್ಲಾಪುರದ ಕೈಗಾ ಟೌನ್ ಶಿಪ್ ನಲ್ಲಿ ನಡೆಯಲಿದೆ.

ಬಿಣಗಾ ಗ್ರಾಸಿಂ ಇಂಡಸ್ಟ್ರಿಯಲ್ಲಿ ಮೇ 12 ಮಧ್ಯಾಹ್ನ 4 ಗಂಟೆ ಗ್ರಾಸಿಂ ಇಂಡಸ್ಟ್ರಿಯಲ್ಲಿ ಮಿಸೈಲ್ ಅಟ್ಯಾಕ್ ನಿಂದ ಕಟ್ಟಡ ಕುಸಿಯುವುದನ್ನು ಕಲ್ಪಿಸಿಕೊಂಡು ಅವಶೇಷಗಳ ಅಡಿಯಿಂದ ಜನರ ರಕ್ಷಣೆ, 30 ಗಾಯಾಳುಗಳನ್ನು ಕ್ರಿಮ್ಸ್ ಆಸ್ಪತ್ರೆಗೆ ಕರೆತರಲಾಗುತ್ತದೆ. ಎನ್‌ಡಿಆರ್‌ಎಫ್‌, ಅಗ್ನಿಶಾಮಕ, ವೈದ್ಯಕೀಯ ಸಿಬ್ಬಂದಿ, ಕಂದಾಯ, ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ನೌಕಾನೆಲೆಯ ಅಮದಳ್ಳಿ ಕಾಲನಿ ಸಂಜೆ 5 ಗಂಟೆ:

ನೌಕಾನೆಲೆಯ ಅಮದಳ್ಳಿ ಸಿವಿಲ್ ಕಾಲನಿಯಲ್ಲಿ ಅಟ್ಯಾಕ್ ಆದ ಸನ್ನಿವೇಶ ನಿರ್ಮಾಣ ಮಾಡಲಾಗುತ್ತದೆ. ಆ ದಾಳಿಯಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ. ಆಗ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗಿಳಿಯುತ್ತಾರೆ. ಗಾಯಗೊಂಡ 40 ಸ್ವಯಂಸೇವಕರನ್ನು ನೌಕಾನೆಲೆಯ ಐಎನ್ಎಸ್ ಪತಂಜಲಿ ಆಸ್ಪತ್ರೆಗೆ ಕರೆತರುತ್ತಾರೆ. ಆಸ್ಪತ್ರೆ ಗಾಯಾಳುಗಳಿಂದ ಭರ್ತಿಯಾದರೆ ಸಮಸ್ಯೆ ಆಗಬಹುದು ಎಂದು ಬೈತಖೋಲದಲ್ಲಿ ತಾತ್ಕಾಲಿಕ ಆಸ್ಪತ್ರೆಯನ್ನು ತೆರೆಯಲಾಗುತ್ತದೆ. ಅಗ್ನಿಶಾಮಕ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿ, ಎನ್‌ಸಿಸಿ, ಎನ್‌ಎಸ್‌ಎಸ್, ಕಂದಾಯ ಇಲಾಖೆ, ಪೊಲೀಸರು, ಗ್ರಾಸಿಂ ಇಂಡಸ್ಟ್ರೀ ತಂಡ ಪಾಲ್ಗೊಳ್ಳಲಿದ್ದಾರೆ.

ಕೈಗಾ ಅಣು ವಿದ್ಯುತ್ ಸ್ಥಾವರ, ಸಂಜೆ 4 ಗಂಟೆ:

ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಸಂಜೆ 4 ಗಂಟೆಗೆ ಕಾರ್ಯಾಚರಣೆ ನಡೆಯಲಿದೆ. ಕೈಗಾದ ಅಧಿಕಾರಿಗಳು ಹಾಗೂ ಸಿಐಎಸ್ ಎಫ್ ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಆಂತರಿಕವಾಗಿ ಮಾಕ್ ಡ್ರಿಲ್ ನಡೆಯಲಿದೆ. ದಾಳಿ ಆದಾಗ ಸುರಕ್ಷಿತ ಕಟ್ಟಡದಲ್ಲಿ ಆಶ್ರಯ ಪಡೆದುಕೊಳ್ಳುವುದನ್ನು ಮಾಡಲಾಗುತ್ತದೆ. ಅಣು ವಿಕಿರಣ ಸೋರಿಕೆ ಬಗ್ಗೆ ಮಾಕ್ ಡ್ರಿಲ್ ಮಾಡುತ್ತಿಲ್ಲ. ಅದನ್ನು ನಿಗದಿತ ಸಮಯಕ್ಕೆ ಮಾಡಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ, ರಕ್ಷಣಾ ತಂಡ ಸಹಕಾರ ನೀಡಲಿದೆ.

ಟಾಗೋರ್ ಬೀಚ್ ನಲ್ಲಿ ಸಂಜೆ 6 ಗಂಟೆ:

ಟಾಗೋರ ಬೀಚ್ ನಲ್ಲಿ ಜನತೆ ಸೇರಿರುವ ಸಮಯದಲ್ಲಿ ಅಟ್ಯಾಕ್ ಆದಾಗ ಅವರನ್ನು ಜಿಲ್ಲಾಧಿಕಾರಿ ಕಚೇರಿ ಹಾಗೂ ಸುತ್ತಮುತ್ತ ಸುರಕ್ಷಿತ ಪ್ರದೇಶಕ್ಕೆ ಕರೆತರಲಾಗುತ್ತದೆ. ಪೊಲೀಸರು, ಪ್ರವಾಸೋದ್ಯಮ ಇಲಾಖೆ ಪಾಲ್ಗೊಳ್ಳಲಿದೆ.

ಕದ್ರಾ ಅಣೆಕಟ್ಟು ಕೆಳಭಾಗದಲ್ಲಿ ಸಂಜೆ 5 ಗಂಟೆಗೆ:

ಕದ್ರಾ ಅಣೆಕಟ್ಟಿಗೆ ದಾಳಿಯಾಗಿ ಅಣೆಕಟ್ಟು ಒಡೆದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಹೀಗಾಗಿ ಕೆಳಭಾಗದಲ್ಲಿರುವ ಹರ್ಟುಗಾ ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶವಾದ ಸಿದ್ಧರ ಶಾಲೆಗೆ ಸ್ಥಳಾಂತರಿಸಲಾಗುತ್ತದೆ.

ಕಾರವಾರ ಹಾಗೂ ಮಲ್ಲಾಪುರದಲ್ಲಿ ಬ್ಲ್ಯಾಕ್ ಔಟ್, ಸಂಜೆ 7.30ಕ್ಕೆ:

ಕಾರವಾರ ನಗರ (ನಗರಸಭೆ ವ್ಯಾಪ್ತಿ), ಮಲ್ಲಾಪುರದ ಕೈಗಾ ಟೌನ್ ಶಿಪ್ ನಲ್ಲಿ ಬ್ಲ್ಯಾಕ್ ಔಟ್ ಮಾಡಲಾಗುತ್ತದೆ. ಸಂಜೆ 7.30 ಆಗುತ್ತಿದ್ದಂತೆ ಸೈರನ್ ಮೊಳಗಲಿದೆ. ಆಗ ಜನರು ಮನೆಯೊಳಗೆ ಬಂದು ಲೈಟ್ ಆಫ್ ಮಾಡಿಕೊಳ್ಳಬೇಕು. ವಾಹನಗಳಲ್ಲಿ ಇದ್ದವರು ಹೆಡ್ ಲೈಟ್ ಆಫ್ ಮಾಡಿ ಸುರಕ್ಷಿತ ಪ್ರದೇಶದಲ್ಲಿರಬೇಕು ಎಂದು ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠ ಎಂ.ನಾರಾಯಣ ಮಾತನಾಡಿ, ಕಾರ್ಯಾಚರಣೆಯಲ್ಲಿ 230 ಪೊಲೀಸರು, ಎನ್‌ಸಿಸಿ 200 ಸಿಬ್ಬಂದಿ, ಕೈಗಾ ನೇವಲ್ ಸಿಬ್ಬಂದಿ ಸೇರಿ 1000 ಜನರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಬೆಂಗಳೂರು ಹೊರತುಪಡಿಸಿದರೆ ಹೆಚ್ಚಿನ ಚಟುವಟಿಕೆಗಳು ಕಾರವಾರದಲ್ಲಿ ನಡೆಯಲಿದೆ. ಜನರು ಆತಂಕಗೊಳ್ಳದೇ ಈ ಮಾಕ್ ಡ್ರಿಲ್ ಗೆ ಸಹಕಾರ ನೀಡಬೇಕು ಎಂದು ಅವರು ಕೋರಿದರು.