ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಯಲ್ಲಿ ಮಳೆ ಹೆಚ್ಚಾಗಿ ಪ್ರವಾಹದ ತುರ್ತು ಪರಿಸ್ಥಿತಿ ಉಂಟಾದ ಸಂದರ್ಭದಲ್ಲಿ ಅಲ್ಲಿನ ಜನರನ್ನು ರಕ್ಷಿಸುವ ಬಗ್ಗೆ ಮಹಾನಗರಪಾಲಿಕೆ ಮತ್ತು ಅಗ್ನಿಶಾಮಕ ದಳದ ವತಿಯಿಂದ ನಗರದ ಕೋಡಿಹಳ್ಳದ ಬಳಿ ಅಣಕು ಪ್ರದರ್ಶನ ನಡೆಯಿತು. ಮಹಾನಗರಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ ಮಾತನಾಡಿ, ನಗರದ ಕೋಡಿಹಳ್ಳದ ಬಳಿ ಇರುವ 22ಕ್ಕೂ ಹೆಚ್ಚು ಮನೆಗಳಿಗೆ 2021ರಲ್ಲಿ ಅಮಾನಿಕೆರೆ ಕೋಡಿ ಹರಿದು ನೀರು ನುಗ್ಗಿತ್ತು. ಆ ಸಂದರ್ಭದಲ್ಲಿ ಪ್ರವಾಹದಲ್ಲಿ ಸಿಲುಕಿದ ಜನರನ್ನು ನಗರದ ಪೂರ್ಣಯ್ಯ ಛತ್ರ, ಬಟವಾಡಿ ಸಮುದಾಯ ಭವನಗಳಿಗೆ ಸ್ಥಳಾಂತರಿಸಲಾಗಿತ್ತು. ಈ ವರ್ಷವೂ ಸತತ ಮಳೆಯಾಗುತ್ತಿದ್ದು, ಪ್ರವಾಹ ಸ್ಥಿತಿ ಏನಾದರೂ ಎದುರಾದಲ್ಲಿ ಪ್ರವಾಹದಲ್ಲಿ ಸಿಲುಕಿದ ಜನರನ್ನು ರಕ್ಷಿಸುವ ಬಗ್ಗೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದರು. ಅಣಕು ಪ್ರದರ್ಶನ ವೀಕ್ಷಿಸಿದ ನಂತರ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ಎದುರಿಸಲು ಜಿಲ್ಲಾಡಳಿತ, ಪೊಲೀಸ್, ಅಗ್ನಿಶಾಮಕ ದಳ, ಸ್ಥಳೀಯ ಸಂಸ್ಥೆಗಳಿಂದ ಮುನ್ನೆಚ್ಚರಿಕಾ ಕ್ರಮವಾಗಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಸಾರ್ವಜನಿಕರು ಮಳೆಯಿಂದಾಗಿ ತೊಂದರೆಗೆ ಸಿಲುಕಿದ್ದಲ್ಲಿ ತುರ್ತು ಸಹಾಯವಾಣಿ ಸಂಖ್ಯೆ 101, 112 ಮತ್ತು ಸ್ಮಾರ್ಟ್ ಸಿಟಿ ಕಂಟ್ರೋಲ್ ರೂಂ ಸಂಖ್ಯೆ: 7304975519ಕ್ಕೆ ಕರೆ ಮಾಡಬಹುದಾಗಿದ್ದು, ದಿನದ 24 ಗಂಟೆಯೂ ಸಹಾಯವಾಣಿ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು. ಪ್ರವಾಹದಲ್ಲಿ ಸಿಲುಕಿದವರನ್ನು ಲೈಫ್ ಜಾಕೇಟ್, ರೋಪ್ ನೆರವಿನಿಂದ ಜನರನ್ನು ರಕ್ಷಿಸುವ ಬಗ್ಗೆ ಅಗ್ನಿಶಾಮಕ ದಳ ಹಾಗೂ ಮಹಾನಗರಪಾಲಿಕೆ ಸಿಬ್ಬಂದಿಯಿಂದ ಅಣಕು ಪ್ರದರ್ಶನ ನೀಡಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶಶಿಧರ್ ಕೆ.ಪಿ. ಸೇರಿದಂತೆ ಅಗ್ನಿಶಾಮಕ ಸಿಬ್ಬಂದಿ ಉಪಸ್ಥಿತರಿದ್ದರು.