ಸಾರಾಂಶ
ಯಾದಗಿರಿ : ಯಾದಗಿರಿ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬಡವರು ಮತ್ತು ಬುಡಕಟ್ಟು ಜನಾಂಗದ ಗುರಿಯಾಗಿಟ್ಟುಕೊಂಡು, ಹಿಂದೂ ದೇವರುಗಳ ಹೀಯಾಳಿಸಿ, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ಆಮಿಷವೊಡ್ಡುವ ಸಂಚು ರೂಪಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಈ ಮೂಲಕ, ಸದ್ದಿಲ್ಲದೇ ಬಲವಂತದ ಮತಾಂತರದ ಜಾಲ ಜಿಲ್ಲೆಯಲ್ಲಿ ಹಬ್ಬುತ್ತಿದೆಯೇ ಎಂಬ ಆತಂಕ ಮೂಡಿದ್ದು, ಬುಡಕಟ್ಟು, ಅಲೆಮಾರಿ ಜನಾಂಗದವರನ್ನೇ ಇದರಲ್ಲಿ ಗುರಿಯಾಗಿಸಿಕೊಳ್ಳಲಾಗುತ್ತಿದೆ ಎಂಬ ಅನುಮಾನಗಳು ಕಾಡುತ್ತಿವೆ.
ಹಿಂದೂ ಧರ್ಮ ತೊರೆದು, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದರೆ ಮಾತ್ರ ಬಡತನದ ಬೇಗೆಯಿಂದ ಹೊರಬರಲು ಸಾಧ್ಯ ಎಂದು ನಂಬಿಸಿ, ಹಿಂದೂ ದೇವರುಗಳ ವಿರುದ್ಧ ಇಲ್ಲಸಲ್ಲದ ಮಾತುಗಳನ್ನಾಡಿ, ಬಲವಂತದ ಮತಾಂತರ ಮಾಡಲಾಗುತ್ತದೆ ಎಂಬ ಗಂಭೀರ ಆರೋಪಗಳು ಜಿಲ್ಲಾದ್ಯಂತ ಹಬ್ಬಿದೆ.
ಶನಿವಾರ ಸಂಜೆ ಯಾದಗಿರಿ ನಗರದ ಹೊಸಳ್ಳಿ ಕ್ರಾಸ್ ಬಳಿಯಿರುವ, ಬುಡ್ಗಜಂಗಮ-ಅಲೆಮಾರಿ ಜನರು ವಾಸಿಸುತ್ತಿರುವ ಗಿರಿನಗರ ಬಡಾವಣೆಯಲ್ಲಿನ ಬೆಳವಣಿಗೆಗಳು ಈ ಆರೋಪಗಳಿಗೆ ಪುಷ್ಟಿ ನೀಡುವಂತಿದೆ.
ಕೆಲವರು ತಮ್ಮನ್ನು ಪಾಸ್ಟರ್‌ಗಳು ಎಂದು ಹೇಳಿಕೊಂಡು ಗಿರಿನಗರ ಬಡಾವಣೆಗೆ ಬಂದ ಆರೇಳು ಜನರ ತಂಡವೊಂದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಚೋದನೆ ನೀಡಿತ್ತು. ಹಿಂದೂ ದೇವರುಗಳ ಹೀಯಾಳಿಸಿ ಮಾತನಾಡುತ್ತಿದ್ದ ಅವರು, ಏಸು ಒಬ್ಬನೇ ದೇವರು, ಉಳಿದವರನ್ನು ನಂಬಬೇಡಿ ಎಂದು ತಮ್ಮ ಜನಾಂಗದ ಜನರಿಗೆ ಹೇಳುತ್ತಿದ್ದರು ಎಂದು ಬಡಾವಣೆಯ ಶಂಕರ ಶಾಸ್ತ್ರಿ ಆರೋಪಿಸಿದ್ದಾರೆ.
ಗಿರಿನಗರದ ಆಂಜನೇಯ ದೇವಸ್ಥಾನದ ಬಳಿ ನಿಂತು ಧರ್ಮ ಪ್ರಚಾರ ಮಾಡುತ್ತಿದ್ದ ಅವರೆಲ್ಲ, ಕ್ರಿಶ್ಚಿಯನ್ ಧರ್ಮಕ್ಕೆ ಆಹ್ವಾನ ನೀಡಿದರು. ಮುಂದೊಂದು ದಿನ ಎಲ್ಲ ಧರ್ಮಗಳೂ ಅಳಿದು ಹೋಗಿ, ಕ್ರಿಶ್ಚಿಯನ್ ಧರ್ಮ ಮಾತ್ರ ಉಳಿಯುತ್ತದೆ. ಕೇವಲ ಕ್ರಿಸ್ತನಿಂದ ಮಾತ್ರ ಜಗತ್ತಿಗೆ ಒಳಿತು ಸಾಧ್ಯ ಎಂದು ಅವರು ಸಂದೇಶ ನೀಡಿದರು. ಇದನ್ನು ಆಕ್ಷೇಪಿಸಿದ ನಾನು ಠಾಣೆಗೆ ದೂರು ನೀಡಿದೆ ಎಂದು ಶಾಸ್ತ್ರಿ ತಿಳಿಸಿದ್ದಾರೆ.
ಗಿರಿನಗರದ ನಿವಾಸಿಗಳ ಪೈಕಿ ಕೆಲವರು ಆಸೆ ಆಮಿಷಗಳಿಗೆ ಬಲಿಯಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅವರ ಮೂಲಕ ಮಿಷಿನರಿಗಳು ಉಳಿದವರ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಶನಿವಾರ ಸಂಜೆ ಘಟನೆ ವೇಳೆ ಅಲ್ಲಿನ ನಿವಾಸಿಗಳು ಪಾಸ್ಟರ್‌ಗಳ ಇಂತಹ ವರ್ತನೆಗಳಿಗೆ ವಿರೋಧಿಸಿ ಪೊಲೀಸರನ್ನು ಕರೆಯಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಇನ್ಪೆಕ್ಟರ್ ಸುನಿಲ್ ಮೂಲಿಮನಿ, ಧಾರ್ಮಿಕ ಭಾವನೆಗಳ ಕೆರಳಿಸುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮತಾಂತರಕ್ಕೆ ಮುಂದಾದವರ ವಿರುದ್ಧ ಕ್ರಮಕ್ಕೆ ಸ್ಥಳೀಯರು ಹಾಗೂ ಭಜರಂಗದಳ ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ.