ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಯುವ ರೈತ, ತಾನು ಬಿಕಾಂ ಪದವೀಧರ, ಸರ್ಕಾರಿ ಅಥವಾ ಖಾಸಗಿ ಕೆಲಸಗಳಲ್ಲಿ ದುಡಿಯುವ ಬದಲು ತಮ್ಮ ಮನೆಯ ಭೂಮಿಯಲ್ಲಿ ಅಡಿಕೆ ಕೃಷಿಯಲ್ಲಿಯೇ ಹತ್ತಾರು ಜನರಿಗೆ ಉದ್ಯೋಗ ನೀಡುವ ಜೊತೆಗೆ ರೈತರಿಗೆ ಗುಣಮಟ್ಟದ ಅಡಿಕೆ ತಳಿಗಳನ್ನು ಬೆಳೆಸುತ್ತಿದ್ದಾರೆ.ತಾಲೂಕಿನ ಅಂದಲೆ ಗ್ರಾಮ ಪಂಚಾಯಿತಿಯ ಹಿರುಗುಪ್ಪೆ ಗ್ರಾಮದ ಯುವ ರೈತ ಕಿರಣ್, ಬಿಕಾಂ ಪದವಿಯನ್ನು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಯಾವುದೇ ಖಾಸಗಿ ಕಂಪನಿ ಅಥವಾ ಸರ್ಕಾರಿ ಕೆಲಸದಲ್ಲಿ ಇನ್ನೊಬ್ಬರ ಹಂಗಿನಲ್ಲಿ ಕೆಲಸ ಮಾಡಬೇಕು ಎಂಬ ಆಲೋಚನೆಯಿಂದ ಹೊರಬಂದು, ತಮಗೆ ಇದ್ದ ಭೂಮಿಯಲ್ಲಿ ಬೇಸಾಯಕ್ಕೆ ಮುಂದಾದವರು. ಈ ಸಂದರ್ಭದಲ್ಲಿ ಅವರ ಬದುಕಿನಲ್ಲಿ ಹೊಂಗಿರಣವಾಗಿ ಬಂದಿದ್ದು ಅಡಿಕೆ ಸಸಿ ನರ್ಸರಿ. ಇತ್ತೀಚಿನ ದಿನಗಳಲ್ಲಿ ಬಹುತೇಕ ರೈತಾಪಿ ವರ್ಗ ಅಡಿಕೆ ಬೆಳೆಯ ಕಡೆಗೆ ಹೆಚ್ಚು ಒಲವು ಹೊಂದಿದ್ದು, ಅವರಿಗೆ ಸದೃಡವಾದ ಮತ್ತು ಗುಣಮಟ್ಟದ ಉತ್ತಮ ತಳಿಯ ಅಡಿಕೆ ಸಸಿಗಳು ಸಿಗುತ್ತಿಲ್ಲ ಎಂಬ ಹತ್ತಾರು ರೈತರ ಅಳಲನ್ನು ಆಲಿಸಿದ ಕಿರಣ್, ತನ್ನ ಊರಿನಲ್ಲಿ ಅಡಿಕೆ ಸಸಿಗಳನ್ನು ಬೆಳೆಸಲು ನರ್ಸರಿಯನ್ನು ಕಳೆದ ನಾಲ್ಕು ವರ್ಷದಿಂದ ಆರಂಭಿಸಿ ಉತ್ತಮ ವರಮಾನವನ್ನು ಕಂಡಿದ್ದು ರೈತರಿಗೆ ಸಸಿಗಳನ್ನು ನೀಡುವ ಮೂಲಕ ಹೆಸರು ಮಾಡಿದ್ದಾರೆ.
ಹಿರುಗುಪ್ಪೆ ಕಿರಣ್ ಅವರ ಮನೆಯ ಪಕ್ಕದಲ್ಲಿ ಆರಂಭಿಸಿದ ನರ್ಸರಿಗೆ ಯಾವುದೇ ಶೆಡ್ ಮಾಡಿಲ್ಲ, ಬದಲಾಗಿ ಬಿಸಿಲು-ಮಳೆ ಎನ್ನದೆ ಅಡಿಕೆ ಸಸಿಗಳು ಸ್ವಾಭಾವಿಕವಾಗಿ ಬೆಳಸಬೇಕು ಎಂಬ ಕಾರಣದಿಂದ ರಾಸಾಯಿಕ ಕ್ರಿಮಿನಾಶಕಗಳನ್ನು ಸಿಂಪಡಣೆ ಮಾಡದೆ ಸಾವಯವ ಪದ್ದತಿಯಲ್ಲಿ ಅಡಿಕೆ ಸಸಿ ಕೃಷಿಗೆ ಮುಂದಾಗಿದ್ದಾರೆ. ೪೦ ಸಾವಿರಕ್ಕೂ ಅಧಿಕ ಅಡಿಕೆ ಸಸಿಗಳನ್ನು ನರ್ಸರಿಯಲ್ಲಿ ಬೆಳೆಸಿದ್ದು, ಒಂದು ವರ್ಷದಿಂದ ಎರಡು ವರ್ಷದ ಸಸಿಗಳು ಇವರಲ್ಲಿ ಲಭ್ಯವಿದೆ. ತಾವು ಕೂಡ ಅಡಿಕೆ ತೋಟಕ್ಕೆ ಒತ್ತು ನೀಡಿದ್ದಾರೆ. ಇವರ ಅವಿರತ ಕೃಷಿ ಚಟುವಟಿಕೆಯನ್ನು ಕಂಡ ಗ್ರಾಮಸ್ಥರು ಮತ್ತು ಸ್ನೇಹಿತರು ಈತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.‘ಇತ್ತೀಚಿನ ದಿನಗಳಲ್ಲಿ ಅಡಿಕೆ ಬೆಳೆ ಕಡೆ ಕೃಷಿಕರು ಒಲವು ಹೆಚ್ಚಾದ ಕಾರಣ ಅವರಿಗೆ ಉತ್ತಮ ತಳಿಯ ಅಡಿಕೆ ಸಸಿಗಳನ್ನು ನೀಡಬೇಕು ಎಂದು ಸ್ವಗ್ರಾಮದಲ್ಲಿ ನರ್ಸರಿ ಆರಂಭಿಸಿ, ಶಿವಮೊಗ್ಗ ಜಿಲ್ಲೆಯಿಂದ ಅನುಭವಿ ರೈತರಿಂದ ಅಡಿಕೆ ತಂದು ಮಡಿ ಮಾಡಿ, ಯಾವುದೇ ರಾಸಾಯಿನಿಕ ಗೊಬ್ಬರವಿಲ್ಲದೆ ಸದೃಡವಾಗಿ ಬೆಳೆಸಿ ಕಡಿಮೆ ದರದಲ್ಲಿ ನೀಡುತ್ತಿದ್ದೇನೆ. ರೈತರು ಸದ್ಬಳಿಕೆ ಮಾಡಿಕೊಳ್ಳಬೇಕು’.
-ಕಿರಣ್ ಹಿರಗುಪ್ಪೆ. ಯುವ ರೈತ