ಸುಮಾರು ₹500 ಕೋಟಿ ಅನುದಾನದಲ್ಲಿ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ರಾಜ್ಯದಲ್ಲಿ ಏಕಕಾಲಕ್ಕೆ ಮಂಜೂರಾದ ನಾಲ್ಕು ವೈದ್ಯಕೀಯ ಕಾಲೇಜುಗಳ ಪೈಕಿ ಇದು ಮಾದರಿಯಾಗಿದೆ. ಇದರ ಉದ್ಘಾಟನಾ ಸಮಾರಂಭ ಜ. 7ರಂದು ಜರುಗಲಿದ್ದು, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಹಾವೇರಿ: ಸುಮಾರು ₹500 ಕೋಟಿ ಅನುದಾನದಲ್ಲಿ ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ರಾಜ್ಯದಲ್ಲಿ ಏಕಕಾಲಕ್ಕೆ ಮಂಜೂರಾದ ನಾಲ್ಕು ವೈದ್ಯಕೀಯ ಕಾಲೇಜುಗಳ ಪೈಕಿ ಇದು ಮಾದರಿಯಾಗಿದೆ. ಇದರ ಉದ್ಘಾಟನಾ ಸಮಾರಂಭ ಜ. 7ರಂದು ಜರುಗಲಿದ್ದು, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.ಇಲ್ಲಿನ ಹಾವೇರಿ ವೈದಕೀಯ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಜೆ.ಪಿ. ನಡ್ಡಾ, ಪ್ರಹ್ಲಾದ ಜೋಶಿ, ರಾಜ್ಯದ ವಿವಿಧ ಇಲಾಖೆಯ ಸಚಿವರು, ಸಂಸದರಾದ ಬಸವರಾಜ ಬೊಮ್ಮಾಯಿ, ಜಿಲ್ಲೆಯ ಶಾಸಕರು ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಪ್ರಥಮ ವರ್ಷದ ತರಗತಿಯಿಂದ 3ನೇ ವರ್ಷದ ತರಗತಿಗಳನ್ನು ಹೊಸ ಕಟ್ಟಡದಲ್ಲೇ ನಡೆಸಲಾಗುತ್ತಿದೆ. ಎಲ್ಲ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ತರಗತಿ ಕೊಠಡಿಗಳು, ಲ್ಯಾಬ್, ವಸತಿ, ಲಾಂಡ್ರಿ, ಸಾರಿಗೆ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.ಒಂದು ತಿಂಗಳೊಳಗಾಗಿ ಜಿಲ್ಲೆಗೆ ಎಂಆರ್‌ಐ ಯಂತ್ರ ಬರಲಿದ್ದು, ಇನ್ನು ಮುಂದೆ ರೋಗಿಗಳು ಎಂಐಆರ್ ಸ್ಕ್ಯಾನಿಂಗ್‌ಗೆ ಹುಬ್ಬಳ್ಳಿ ಹಾಗೂ ದಾವಣಗೆರೆ ಹೋಗುವುದು ತಪ್ಪಲಿದೆ. ಈ ಯಂತ್ರವನ್ನು ವೈದ್ಯಕೀಯ ಕಾಲೇಜಿನಲ್ಲಿ ಅಥವಾ ಜಿಲ್ಲಾ ಆಸ್ಪತ್ರೆಯಲ್ಲಿ ಅಳವಡಿಸುವ ಕುರಿತು ಚಿಂತನೆ ನಡೆದಿದೆ. ಬರುವ ದಿನಗಳಲ್ಲಿ ವೈದ್ಯಕೀಯ ಸೀಟುಗಳು, ನರ್ಸಿಂಗ್ ಸೀಟುಗಳು ಹೆಚ್ಚಾಗಲಿದ್ದು, ಇದರಿಂದ ಜಿಲ್ಲೆಯಲ್ಲಿ ವೈದ್ಯರ ಹಾಗೂ ನರ್ಸಿಂಗ್ ಸಿಬ್ಬಂದಿ ಕೊರತೆ ನೀಗಲಿದೆ ಎಂದರು.ಜಿಲ್ಲೆಯ ಜನತೆಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ 330 ಹಾಸಿಗೆಗಳಿಂದ 500 ಹಾಸಿಗೆಗೆ ಉನ್ನತೀಕರಿಸಲಾಗಿದೆ. ಆಸ್ಪತ್ರೆ ಉನ್ನತೀಕರಣ ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ₹20 ಕೋಟಿ ವೆಚ್ಚ ಮಾಡಲಾಗಿದೆ. ಮೆಡಿಕಲ್‌ ಕಾಲೇಜು ಶುರುವಾದ ಮೇಲೆ ಜಿಲ್ಲಾಸ್ಪತ್ರೆಯ ಒಪಿಡಿ ಹಾಗೂ ಒಳರೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದೆ. ಜಿಲ್ಲೆಯ ಜನರಿಗೆ ಬಹಳಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು.ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ..ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಜ.7ರಂದು ಹಾವೇರಿ ವೈದ್ಯಕೀಯ ಕಾಲೇಜ್ ಕಟ್ಟಡ, ಅಂಗನವಾಡಿ ನೂತನ ಕಟ್ಟಡ, ಕರ್ಜಗಿಯ ಕರ್ನಾಟಕ ಪಬ್ಲಿಕ್ ಸ್ಕೂಲ್ ನೂತನ ಶಾಲಾ ಕಟ್ಟಡ, ಕನವಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕೊಠಡಿ, ಹೊಸ ಪ್ರವಾಸ ಮಂದಿರ, ನೆಲೋಗಲ್ ಪ್ರವಾಸ ಮಂದಿರ ಉದ್ಘಾಟನೆ ಮತ್ತು ಹಾವೇರಿ ಬಾಲಕಿಯರ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಕಾಮಗಾರಿ ಮತ್ತು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯ ಕಟ್ಟಡ ಕಾಮಗಾರಿಗಳ ಶೀಲಾನ್ಯಾಸ ಜರುಗಲಿದೆ ಎಂದು ತಿಳಿಸಿದರು.

17 ಪಿಜಿ ಸೀಟುಗಳು: ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಡೀನ್ ಮತ್ತು ನಿರ್ದೇಶಕ ಪ್ರದೀಪಕುಮಾರ ಎಂ.ವೈ. ಮಾತನಾಡಿ, ವೈದ್ಯಕೀಯ ಕಾಲೇಜಿನ ತೃತೀಯ ವರ್ಷದ ವೈದ್ಯಕೀಯ ವಿದ್ಯಾರ್ಥಿಗಳ ಪರೀಕ್ಷೆ ಫಲಿತಾಂಶ ಶೇ.100 ರಷ್ಟಾಗಿದೆ. ಪ್ರಸಕ್ತ 2025-26ನೇ ಸಾಲಿಗೆ 17 ಪಿಜಿ ಸೀಟುಗಳು ಮಂಜೂರಾಗಿದೆ. ಬರುವ ದಿನಗಳಲ್ಲಿ ಎಂಬಿಬಿಎಸ್ ಸೀಟುಗಳನ್ನು 200ಕ್ಕೆ, ನರ್ಸಿಂಗ್ ಸೀಟಗಳನ್ನು 80ಕ್ಕೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲೇ ಪ್ರಥಮವಾಗಿ ಕನ್ನಡ ಭಾಷೆಯ ಅತ್ಯುತ್ತಮ ಪುಸ್ತಕಗಳ ಗ್ರಂಥಾಲಯ ಆರಂಭಿಸಲಾಗಿದೆ. ಜಿಲ್ಲಾಸ್ಪತ್ರೆ ವೈದ್ಯಕೀಯ ಕಾಲೇಜಿನೊಂದಿಗೆ ಸಂಯೋಜನೆಗೊಂಡ ನಂತರ ರೋಗಿಗಳಿಗೆ ಉತ್ತಮ, ಆರೋಗ್ಯ ಸೇವೆ ಹಾಗೂ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪಿ.ಆರ್. ಹಾವನೂರ ಮಾತನಾಡಿದರು. ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಎಸ್ಪಿ ಯಶೋದಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ, ಹುಡಾ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಇತರರು ಇದ್ದರು.ಕಟ್ಟಡ ಪರಿಶೀಲನೆ: ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಟ್ಟಡದ ಉದ್ಘಾಟನೆ ಸಮಾರಂಭದ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಭೇಟಿ ನೀಡಿ, ಪೂರ್ವ ಸಿದ್ಧತೆ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಎಸ್ಪಿ ಯಶೋದಾ ವಂಟಗೋಡಿ, ಡೀನ್ ಪ್ರದೀಪಕುಮಾರ ಎಂ.ವೈ, ಹುಡಾ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಇದ್ದರು.