ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಯುವ ಸಂಸತ್ತು ಚರ್ಚಾ ಸಭೆಯು ವಿಧಾನಸಭೆಯ ಕಲಾಪದ ಮಾದರಿಯಲ್ಲಿ ಗಮನಸೆಳೆಯಿತು.
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಯುವ ಸಂಸತ್ತು ಚರ್ಚಾ ಸಭೆಯು ವಿಧಾನಸಭೆಯ ಕಲಾಪದ ಮಾದರಿಯಲ್ಲಿ ಗಮನಸೆಳೆಯಿತು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಆಡಳಿತ ಪಕ್ಷ, ಪ್ರತಿಪಕ್ಷ, ಸ್ಪೀಕರ್, ಮುಖ್ಯಮಂತ್ರಿ ಹಾಗೂ ವಿವಿಧ ಇಲಾಖೆಗಳ ಸಚಿವರ ಪಾತ್ರಗಳನ್ನು ನಿರ್ವಹಿಸಿ ಪ್ರಜಾಪ್ರಭುತ್ವದ ಕಾರ್ಯವೈಖರಿಯನ್ನು ಪ್ರದರ್ಶಿಸಿದರು. ಸ್ಪೀಕರ್ ಅವರನ್ನು ಗೌರವದಿಂದ ಸದನಕ್ಕೆ ಕರೆತರುವ ಮೂಲಕ ಆರಂಭವಾದ ಅಧಿವೇಶನದಲ್ಲಿ, ಇತ್ತೀಚೆಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.
ನಂತರ ನಡೆದ ಪ್ರಶ್ನೋತ್ತರ ಕಲಾಪದಲ್ಲಿ ರಾಜ್ಯದಲ್ಲಿನ ಬರಗಾಲ, ಮಳೆ ಕೊರತೆ, ಕೃಷಿ ಬಿಕ್ಕಟ್ಟು, ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಮೇವಿನ ಸಮಸ್ಯೆಗಳ ಕುರಿತು ಗಂಭೀರ ಚರ್ಚೆ ನಡೆಯಿತು. ಬರ ಪರಿಹಾರವಾಗಿ ಸರ್ಕಾರ ಕೇವಲ ₹ 2500 ಘೋಷಿಸಿರುವುದನ್ನು ಪ್ರತಿಪಕ್ಷ ಸದಸ್ಯರ ಪಾತ್ರಧಾರಿಗಳು ತೀವ್ರವಾಗಿ ಟೀಕಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಮತ್ತು ಕೃಷಿ ಸಚಿವರ ಪಾತ್ರಧಾರಿಗಳು, ಸರ್ಕಾರ ರೈತರ ಕಷ್ಟಕ್ಕೆ ಸದಾ ಸ್ಪಂದಿಸುತ್ತಿದ್ದು, ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ ಎಂದು ಸಮರ್ಥಿಸಿಕೊಂಡರು. ಸ್ಪೀಕರ್ ಪಾತ್ರಧಾರಿ ವಿದ್ಯಾರ್ಥಿ ಸದನದ ಕಲಾಪವನ್ನು ನಿಯಂತ್ರಿಸಿ ಶಿಸ್ತು ಕಾಪಾಡಿದರು.ಇದಕ್ಕೂ ಮುನ್ನ ಗ್ರೇಡ್-2 ತಹಶೀಲ್ದಾರ್ ಮಂಜುನಾಥ ಅಮಾಸಿ ಯುವ ಸಂಸತ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಇಒ ಮಂಜುಳಾ ಹಕಾರಿ, ಬಿಇಒ ಶಿವರಾಜ ಸೀಮಿಕೇರಿ, ಸಮಾಜ ಕಲ್ಯಾಣ ಇಲಾಖೆಯ ಮುತ್ತಣ್ಣ ಸಂಕನೂರ, ಕೃಷ್ಣಪ್ಪ ಧರ್ಮರ, ಬಿ.ಎಸ್. ಹಡಪದ, ಎಂ.ಬಿ. ಇಟಗಿ, ಸೀಮಾ ಮಡಿವಾಳರ, ರೇಣುಕಾ ಎಚ್., ಸಿದ್ದಪ್ಪ ಕಳಸಣ್ಣವರ, ಶಿಕ್ಷಣ ಸಂಯೋಜಕ ಆರ್.ಬಿ. ಜೋಶಿ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಕೆ. ಹವಾಲ್ದಾರ್ ಹಾಗೂ ಮಂಜುನಾಥ ಕೊಕ್ಕರಗುಂದಿ ಉಪಸ್ಥಿತರಿದ್ದರು.