ಸಾರಾಂಶ
ಲಕ್ಷ್ಮೇಶ್ವರ: ಸಕ್ಕರೆ ಕಾಯಿಲೆಯು ಜನಸಾಮಾನ್ಯರಲ್ಲಿ ಬರುತ್ತಿರುವುದು ಆತಂಕದ ಸಂಗತಿಯಾಗಿದೆ. ಆಧುನಿಕ ಜೀವನ ಶೈಲಿಯು ಮಧುಮೇಹ ರೋಗಕ್ಕೆ ಪ್ರಮುಖ ಕಾರಣವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಮಂಗಳವಾರ ಪಟ್ಟಣದ ಅಗಡಿ ಸನ್‌ರೈಸ್ ಆಸ್ಪತ್ರೆಯಲ್ಲಿ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಹಿರಿಯ ಮಧುಮೇಹ ತಜ್ಞ ವೈದ್ಯ ಡಾ.ಜಿ.ಬಿ. ಸತ್ತೂರ ಅವರು ಡಯಾಬಿಟಿಕ್ ಕೇಂದ್ರವನ್ನು ಉದ್ಘಾಟಿಸಿದರು.ಬಹು ಜನರಲ್ಲಿ ಕಾಡುವ ಮಧುಮೇಹ ಕಾಯಿಲೆಯನ್ನು ಅಲಕ್ಷ್ಯ ಮಾಡುವವರೆ ಅಧಿಕವಾಗಿದ್ದಾರೆ. ಪ್ರಾರಂಭದ ಹಂತದಲ್ಲಿಯೇ ಅದನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ಇನ್ನಿತರೆ ಕಾಯಿಲೆಗಳಿಂದ ದೂರ ಉಳಿಯಬಹುದಾಗಿದೆ, ಈ ನಿಟ್ಟಿನಲ್ಲಿ ಪಟ್ಟಣದ ಅಗಡಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ಯಂತ್ರಗಳಿಂದ ಮಧುಮೇಹದ ಬಗ್ಗೆ ಸರಿಯಾದ ಚಿಕಿತ್ಸೆ ದೊರೆಯುವಂತೆ ಮಾಡಿರುವುದು ಉತ್ತಮ ಸಂಗತಿಯಾಗಿದ್ದು, ಜನಸಾಮಾನ್ಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಹುಬ್ಬಳ್ಳಿಯ ಹಿರಿಯ ಖ್ಯಾತ ಮಧುಮೇಹ ಮತ್ತು ಹೃದಯರೋಗ ತಜ್ಞ ಡಾ. ಜಿ.ಬಿ. ಸತ್ತೂರ ಮಾತನಾಡಿ, ಮಧುಮೇಹ ಎಂದರೆ ದೇಹವು ಇನ್ಸುಲಿನ್ ಉತ್ಪಾದಿಸಲು ಸಾಧ್ಯವಾಗದಿದ್ದರೆ ಅಥವಾ ಇನ್ಸುಲಿನ್‌ಗೆ ಕಡಿಮೆ ಸಂವೇದನೆ ಹೊಂದಿದ್ದರೆ, ಆ ಸ್ಥಿತಿಯನ್ನು ಮಧುಮೇಹ ಎಂದು ಕರೆಯಲಾಗುತ್ತದೆ. ದೇಹಕ್ಕೆ ಇನ್ಸುಲಿನ್ ಮುಖ್ಯವಾಗಿದೆ, ಸಕ್ಕರೆ ಕಾಯಿಲೆ ಆನುವಂಶಿಕ ಎನ್ನುತ್ತಾರೆ. ಇದರ ಜತೆ ಒತ್ತಡದ ಜೀವನ ಶೈಲಿ, ಆಹಾರದ ಮೇಲೆ ನಿಯಂತ್ರಣವಿಲ್ಲದಿರುವುದು, ಯೋಗ, ವಾಕಿಂಗ್ ಬಗ್ಗೆ ನಿರಾಸಕ್ತಿ ಬೊಜ್ಜು ಬೆಳೆಯುವುದು ಇತ್ಯಾದಿ ಸಕ್ಕರೆ ರೋಗಕ್ಕೆ ಕಾರಣವಾಗಿವೆ. ಇದರಿಂದ ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಗ್ರಾಮೀಣ ಭಾಗಗಳಲ್ಲಿನ ಜನರು ಮಧುಮೇಹ ರೋಗಕ್ಕೆ ಒಳಗಾಗುವ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಬೇರೆ ರೋಗಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.
ನಿತ್ಯ ಆಹಾರದಲ್ಲಿ ಬಳಸುವ ಪದಾರ್ಥಗಳ ಮೇಲೆ ನಿಯಂತ್ರಣವಿರಲಿ, ಕಲಬೆರಕೆ ಆಹಾರದ ಜತೆ ಮಿತಿಮೀರಿದ ಕರಿದ, ಸಿಹಿ ಪದಾರ್ಥ, ಅನಿಯಮಿತ ಚಹಾ, ಕಾಫಿ ಸೇವನೆ ಇವುಗಳನ್ನು ನಿಯಂತ್ರಗೊಳಿಸಿ, ಮಧುಮೇಹ ಬಂದಾಗ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕೆ ಯೋಚಿಸಿ ಎಂದು ಅವರು ಹೇಳಿದರು.ಎಂಜಿನಿಯರಿಂಗ್ ಕಾಲೇಜ ಪ್ರಾಚಾರ್ಯ ಡಾ. ಪರಶುರಾಮ ಬಾರ್ಕಿ, ಮುಖ್ಯ ಆಡಳಿತ ಅಧಿಕಾರಿ ಹಾಗೂ ಹೃದಯರೋಗ ತಜ್ಞ ಡಾ. ರಾಜಶೇಖರ ಮೂಲಿಮನಿ, ಐಎಂಎ ಅಧ್ಯಕ್ಷ ಡಾ. ಪಿ.ಡಿ. ತೋಟದ, ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಸುಜಾತಾ ಸಂಗೂರ, ಡಾ. ದೀಪಾ ರಾಯ್ಕರ್, ಡಾ. ರೇಷ್ಮಾ ರಾಥೋಡ ಇದ್ದರು.
ಪಟ್ಟಣದ ಅನೇಕ ಹಿರಿಯ, ಕಿರಿಯ ವೈದ್ಯರು ಹಾಜರಿದ್ದರು. ಸಹಾಯಕ ಆಡಳಿತ ಅಧಿಕಾರಿ ಶ್ರೀಕಾಂತ ಪಾಟೀಲ ಸ್ವಾಗತಿಸಿದರು. ಸೋಮಶೇಖರ ಕೆರಿಮನಿ, ಮುತ್ತು ಬಿಂಕದಕಟ್ಟಿ, ಸುನೀತಾ, ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.