ದೇಶವನ್ನು ಕಾಡುತ್ತಿರುವ ಆಧುನಿಕ ನವಗ್ರಹಗಳು: ಗೊ.ರು.ಚನ್ನಬಸಪ್ಪ

| Published : Aug 25 2025, 01:00 AM IST

ದೇಶವನ್ನು ಕಾಡುತ್ತಿರುವ ಆಧುನಿಕ ನವಗ್ರಹಗಳು: ಗೊ.ರು.ಚನ್ನಬಸಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ನಮ್ಮನ್ನು ಕಾಡುತ್ತಿರುವ ನವಗ್ರಹಗಳೆಂದರೆ ವ್ಯಕ್ತಿ ಚಾರಿತ್ರ್ಯದ ದಾರಿದ್ರ್ಯ, ಜಾಗತೀಕರಣದ ಜೂಜು, ಹಣ ಮತ್ತು ಅಧಿಕಾರದ ಹುಚ್ಚು, ಬುದ್ಧಿಜೀವಿಗಳ ಮೂರ್ಖತನ, ನೈಸರ್ಗಿಕ ಸಂಪತ್ತಿನ ದುರ್ಬಳಕೆ, ಮತಾಂಧತೆಯ ಮತಿಹೀನತೆ, ರಾಜಕೀಯ ವ್ಯವಸ್ಥೆಯ ಅರಾಜಕತ್ವ, ಧರ್ಮದ ಅಪವ್ಯಾಖ್ಯಾನ ಮತ್ತು ಆಧ್ಯಾತ್ಮಿಕತೆಯ ಅಭಾವ. ಇವುಗಳ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ನಮ್ಮ ದೇಶವನ್ನೀಗ ನವಗ್ರಹಗಳು ಕಾಡುತ್ತಿವೆ. ಆ ನವಗ್ರಹಗಳು ಶಾಸ್ತ್ರ-ಪುರಾಣಗಳಲ್ಲಿ ಬರುವ ನವಗ್ರಹಗಳಲ್ಲ. ಆಧುನಿಕರಲ್ಲಿರುವ ನಾವೇ ನಮ್ಮ ವಿಕೃತ ಮನಸ್ಸಿನಿಂದ ಸೃಷ್ಟಿಸಿರುವ ನವಗ್ರಹಗಳು. ಅವುಗಳ ಶಾಂತಿ ಶಾಸ್ತ್ರ, ಪುರಾಣ, ಪುರೋಹಿತರಿಂದ ಸಾಧ್ಯವಿಲ್ಲ ಎಂದು ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಭವನದಲ್ಲಿ ಭಾನುವಾರ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸ್ಮರಣ ಸಂಚಿಕೆ ಬೆಲ್ಲದಾರತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ನಮ್ಮನ್ನು ಕಾಡುತ್ತಿರುವ ನವಗ್ರಹಗಳೆಂದರೆ ವ್ಯಕ್ತಿ ಚಾರಿತ್ರ್ಯದ ದಾರಿದ್ರ್ಯ, ಜಾಗತೀಕರಣದ ಜೂಜು, ಹಣ ಮತ್ತು ಅಧಿಕಾರದ ಹುಚ್ಚು, ಬುದ್ಧಿಜೀವಿಗಳ ಮೂರ್ಖತನ, ನೈಸರ್ಗಿಕ ಸಂಪತ್ತಿನ ದುರ್ಬಳಕೆ, ಮತಾಂಧತೆಯ ಮತಿಹೀನತೆ, ರಾಜಕೀಯ ವ್ಯವಸ್ಥೆಯ ಅರಾಜಕತ್ವ, ಧರ್ಮದ ಅಪವ್ಯಾಖ್ಯಾನ ಮತ್ತು ಆಧ್ಯಾತ್ಮಿಕತೆಯ ಅಭಾವ. ಇವುಗಳ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದರು.

ಈ ಅನಿಷ್ಠ ನವಗ್ರಹಗಳ ಹಾವಳಿಯಲ್ಲಿ ನಮ್ಮ ಧಾರ್ಮಿಕ, ಸಾಮಾಜಿಕ, ರಾಜಕೀಯ ಕ್ಷೇತ್ರಗಳಲ್ಲಿ ಸ್ವಾರ್ಥದ ಸಿಕ್ಕು, ಸ್ಥಾನದ ಸೊಕ್ಕು, ಸೇಡಿನ ಹಠ, ಅಸಹನೀಯತೆ, ಭಯೋತ್ಪಾದನೆ ಭ್ರಷ್ಟಾಚಾರ, ಲೈಂಗಿಕ ಲಾಲಸೆ, ವಿಶ್ವಾಸದ್ರೋಹ ಇತ್ಯಾದಿ ಅವಘಡಗಳು ತುಂಬಿಕೊಂಡಿವೆ. ಪರಿಣಾಮ ನಮ್ಮ ಬದುಕು ಬಾಹ್ಯ ಸನ್ನಿವೇಶದ ಸುಳಿಗೆ ಸಿಲುಕಿ ನೆಮ್ಮದಿಯನ್ನೇ ಕಳೆದುಕೊಂಡಿದ್ದೇವೆ. ಇಂತಹ ಸಂದರ್ಭದಲ್ಲಿ ಸಾಹಿತ್ಯ ನಮಗೆ ಮಾರ್ಗದರ್ಶಕವಾಗಿದೆ. ಯಾವುದೇ ದೇಶಕ್ಕೆ ಸಾಹಿತ್ಯ-ಸಂಸ್ಕೃತಿಯಲ್ಲಿ ಸ್ಥಾನ-ಮಾನವಿಲ್ಲದಿದ್ದರೆ ಆ ದೇಶದ ಬದುಕು ಬರಡಾಗಿ ಹೋಗುತ್ತದೆ ಎಂದು ನುಡಿದರು.

ಪರಿಷತ್ತು ಗೊಂದಲದ ಗೂಡಾಗಬಾರದು:

ಕನ್ನಡದ ಪ್ರಾತಿನಿಧಿಕ ಸಂಸ್ಥೆಯ ಪಾವಿತ್ರ್ಯ, ಘನತೆ, ಗೌರವಗಳಿಗೆ ಯಾವುದೇ ರೀತಿಯಲ್ಲಿ ಭಂಗ ಉಂಟಾಗದಂತೆ ನೋಡಿಕೊಳ್ಳಬೇಕಿರುವುದು ಪ್ರತಿಯೊಬ್ಬರ ಕರ್ತವ್ಯ. ಆ ಎಚ್ಚರವನ್ನೂ ಸಮ್ಮೇಳನ ನೀಡಿದೆ. ಸಮ್ಮೇಳನದ ನಂತರ ಪರಿಷತ್ತಿನಲ್ಲಾದ ಬೆಳವಣಿಗೆಗಳು ನಿಜಕ್ಕೂ ನನಗೆ ನೋವುಂಟುಮಾಡಿದೆ. ಪರಿಷತ್ತಿನಂತಹ ಸ್ವಾಯತ್ತ ಸಂಸ್ಥೆ ಗೊಂದಲಗಳ ಗೂಡಾಗಬಾರದು. ಅದರ ಘನತೆ-ಗಾಂಭೀರ್ಯಗಳು ಹಾದಿ ಬೀದಿಯಲ್ಲಿ ಚೆಲ್ಲಾಡುವ ಸರಕುಗಳಾಗಬಾರದು. ಪರಿಷತ್ತು ಕೇವಲ ಕನ್ನಡದ ನುಡಿದೇಗುಲವಲ್ಲ, ನಡೆದೇಗುಲವೂ ಹೌದು. ಪರಿಷತ್ತಿನ ಪರಂಪರೆ, ಪಾವಿತ್ರ್ಯತೆ, ಪ್ರಾಮುಖ್ಯತೆಗಳಿಗೆ ಕಳಂಕ ಬಾರದಂತೆ ನೋಡಿಕೊಳ್ಳಬೇಕು. ಪರಿಷತ್ತಿನ ಕಾರ್ಯಭಾರದ ಹೊಣೆ ಹೊತ್ತಿರುವ ಪದಾಧಿಕಾರಿಗಳು ಇದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದರು.

ಪರಿಷತ್ತಿನ ಪದಾಧಿಕಾರಿಗಳಿಗೆ ಒದಗಿರುವುದು ಅಧಿಕಾರವಲ್ಲ. ಕನ್ನಡ ಸೇವೆಗೆ ಒದಗಿದ ಅವಕಾಶ. ಪರಿಷತ್ತಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ಪ್ರಸ್ತುತ ಉಂಟಾಗಿರುವ ವಿವಾದ ಮತ್ತು ಸರ್ಕಾರ ವಿಚಾರಣೆ ನಡೆಸಬೇಕಾದ ಪರಿಸ್ಥಿತಿ ಎದುರಾಗಿರುವುದೇ ಒಂದು ನೋವಿನ ಸಂಗತಿ. ರಾಜ್ಯ ಸರ್ಕಾರ ಆದಷ್ಟು ಬೇಗ ವಿಚಾರಣೆ ಮುಗಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು.

ಸಮ್ಮೇಳನದ ಸುದೀರ್ಘ ವರದಿ ಇಲ್ಲದ ಕೊರತೆ:

ಯಾವುದೇ ಗಮನಾರ್ಹವಾದ ಕಾರ್ಯಕ್ರಮ ನಡೆದಾಗ ಅದರ ನೆನಪಿನಾರ್ಥ ಸ್ಮರಣ ಸಂಚಿಕೆ ತರುವುದು ರೂಢಿ. ಸಾಮಾನ್ಯವಾಗಿ ಸ್ಮರಣಸಂಚಿಕೆ ಆ ಕಾರ್ಯಕ್ರಮದ ದಿನವೇ ಬಿಡುಗಡೆಯಾಗುವುದು ರೂಢಿ. ಆನಂತರ ಸ್ಮರಣಸಂಚಿಕೆ ಬಿಡುಗಡೆಯಾಗಿರುವುದರಿಂದ ಸಮ್ಮೇಳನದ ವರದಿಗಳು, ಕಾರ್ಯಕಲಾಪಗಳು ಅದರಲ್ಲಿ ಸೇರುವುದಕ್ಕೆ ಅವಕಾಶವಿತ್ತು. ಆದರೆ, ಸಮ್ಮೇಳನದ ಸ್ವಾಗತ ಸಮಿತಿಯಿಂದ ಆರಂಭವಾಗಿ ಸ್ಮರಣಸಂಚಿಕೆ ಬಿಡುಗಡೆಯವರೆಗೆ ಸುದೀರ್ಘ ವರದಿ ಇಲ್ಲದಿರುವ ಕೊರತೆ ಕಾಡುತ್ತಿದೆ. ಇದೊಂದು ದೃಷ್ಟಿಬೊಟ್ಟಾಗಿದೆ ಎಂದು ಅಭಿಪ್ರಾಯಿಸಿದರು.

ಜಿಲ್ಲೆಯ ಸಾಂಸ್ಕೃತಿಕ ವಿಶ್ವರೂಪ ದರ್ಶನ:

ಮಂಡ್ಯ ಸಕ್ಕರೆಗೆ ಹೆಸರಾಗಿದ್ದರೂ ಸ್ಮರಣ ಸಂಚಿಕೆಗೆ ಬೆಲ್ಲದ ಹೆಸರಿಟ್ಟಿರುವುದು ಹೆಚ್ಚು ಅರ್ಥಪೂರ್ಣವಾಗಿದೆ. ಸಕ್ಕರೆ ಶಿಷ್ಠ, ಬೆಲ್ಲ ದೇಸಿ. ಬೆಲ್ಲದಾರತಿ ಸ್ಮರಣ ಸಂಚಿಕೆಯ ವಿಶೇಷವೆಂದರೆ ಜಾಹೀರಾತಿಲ್ಲ. ಪೂರ್ಣವಾಗಿ ಸಾಹಿತ್ಯಕ್ಕೆ ಮೀಸಲಾದ ಸ್ಮರಣ ಸಂಚಿಕೆ. ಇದು ಸಂಚಿಕೆಗಿಂತ ಸಂಪುಟ ಎಂದು ಕರೆದಿರುವುದು ಗಂಭೀರ ವಿಷಯ. ಇದರಲ್ಲಿ ಸಮ್ಮೇಳನಕ್ಕೆ ಸಂಬಂಧಿಸಿದ ಚಿತ್ರಗಳು, ಒಂದು ಸಾವಿರ ಪುಟಕ್ಕಿಂತಲೂ ಹೆಚ್ಚಿರುವ ಸಂಪುಟವನ್ನು ಐದು ಗೊಂಚಲುಗಳಾಗಿ ವಿಂಗಡಣೆ ಮಾಡಿದ್ದಾರೆ.

ಕರ್ನಾಟಕ ಸಾಹಿತ್ಯ ಸಮ್ಮೇಳನಾಧ್ಯಕ್ಷರು, ಕರ್ನಾಟಕ- ಭಾರತ ಕುರಿತ ಲೇಖನಗಳು, ವಿಶ್ವ ಕರ್ನಾಟಕದ ಲೇಖನಗಳು, ಅಭಿವೃದ್ಧಿ ಭಾರತದ ಲೇಖನಗಳು, ಮಧುರ ಮಂಡ್ಯ ಕುರಿತಂತೆ ಒಟ್ಟು ೧೩೨ ಲೇಖನಗಳಿವೆ. ಇದರ ಜೊತೆಗೆ ಮಂಡ್ಯ ಜಿಲ್ಲೆಯ ಸಮಕಾಲೀನ ಬದುಕು, ಜನಜೀವನ, ಅಭಿವೃದ್ಧಿ, ಜಾನಪದ, ವೈಶಿಷ್ಟ್ಯ, ಇತಿಹಾಸ, ಸಾಂಸ್ಕೃತಿಕ ಸಂಪತ್ತು, ಆಗಿಹೋದ ಪ್ರಮುಖರು, ಪ್ರವಾಸಿಸ್ಥಳಗಳನ್ನು ದಾಖಲಿಸಲಾಗಿದೆ. ಒಟ್ಟಾರೆ ಬೆಲ್ಲದಾರತಿ ಮಹತ್ವದ ದಾಖಲೆಯ ಪ್ರಕಟಣೆಯಾಗಿದೆ. ಮಂಡ್ಯ ಜಿಲ್ಲೆಯ ಸಾಂಸ್ಕೃತಿಕ ವಿಶ್ವರೂಪ ದರ್ಶನ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಬೆಲ್ಲದಾರತಿ ಸ್ಮರಣ ಸಂಚಿಕೆಯ ಸಂಪಾದಕ ಮಂಡಳಿಯನ್ನು ಗೌರವಿಸಿ ಸನ್ಮಾನಿಸಲಾಯಿತು. ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಶಾಸಕರಾದ ಪಿ.ರವಿಕುಮಾರ್, ದರ್ಶನ್ ಪುಟ್ಟಣ್ಣಯ್ಯ, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ನಿಕಟಪೂರ್ವ ಸಮ್ಮೇಳನದ ಸಂಚಾಲಕಿ ಮೀರಾ ಶಿವಲಿಂಗಯ್ಯ, ಸಾಹಿತಿಗಳಾದ ತೈಲೂರು ವೆಂಕಟಕೃಷ್ಣ, ಮ.ರಾಮಕೃಷ್ಣ, ಡಾ.ಬೋರೇಗೌಡ ಚಿಕ್ಕಮರಳಿ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಇತರರಿದ್ದರು.ಮಂಗಳವಾದ್ಯದೊಂದಿಗೆ ಸ್ಮರಣ ಸಂಚಿಕೆ ಬಿಡುಗಡೆ

ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸವಿನೆನಪಿಗಾಗಿ ಹೊರತಂದಿರುವ ಬೆಲ್ಲದಾರತಿ ಸ್ಮರಣ ಸಂಚಿಕೆಯನ್ನು ಎಂಟು ತಿಂಗಳ ಬಳಿಕ ವಿಶೇಷ ರೀತಿಯಲ್ಲಿ ಬಿಡುಗಡೆ ಮಾಡಲಾಯಿತು. ಮಂಗಳವಾದ್ಯ ಸಮೇತವಾಗಿ ಸುಮಂಗಲಿಯರು ಬೆಲ್ಲದಾರತಿಯೊಂದಿಗೆ ಸಾಗಿದರೆ ಬುಟ್ಟಿಯಲ್ಲಿ ಸ್ಮರಣಸಂಚಿಕೆಯನ್ನು ಹೊತ್ತು ತಂದು ಗಣ್ಯರಿಗೆ ಸಮರ್ಪಿಸುವುದರೊಂದಿಗೆ ಸ್ಮರಣಸಂಚಿಕೆ ಬಿಡುಗಡೆಗೊಳಿಸಲಾಯಿತು. ಆ ಸಮಯದಲ್ಲಿ ಅಂಬೇಡ್ಕರ್ ಭವನದ ದೀಪಗಳೆಲ್ಲವನ್ನೂ ಆರಿಸಲಾಗಿತ್ತು. ಬೆಲ್ಲದಾರತಿಯ ಬೆಳಕಿನಲ್ಲೇ ಸ್ಮರಣ ಸಂಚಿಕೆಯನ್ನು ಅರ್ಥಪೂರ್ಣವಾಗಿ ಬಿಡುಗಡೆಗೊಳಿಸಲಾಯಿತು.ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ್ ಜೋಶಿ ಗೈರು

ಎಂಬತ್ತೇಳನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬೆಲ್ಲದಾರತಿ ಸ್ಮರಣಸಂಚಿಕೆ ಬಿಡುಗಡೆ ಸಮಾರಂಭಕ್ಕೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ್ ಜೋಶಿ ಗೈರು ಹಾಜರಾಗಿದ್ದರು. ಸಮ್ಮೇಳನದ ಬಳಿಕ ಪರಿಷತ್ತಿನಲ್ಲಾದ ಬೆಳವಣಿಗೆಗಳು, ಅಧ್ಯಕ್ಷರ ನಡೆ, ನಿರ್ಧಾರಗಳು, ವ್ಯವಹಾರಿಕ ದೋಷಗಳು, ೨.೫೦ ಕೋಟಿ ರು. ಸಮ್ಮೇಳನ ಖರ್ಚಿಗೆ ಲೆಕ್ಕ ಕೊಡದಿರುವ ಕುರಿತಾಗಿ ಸಾಹಿತ್ಯ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇವೆಲ್ಲಾ ಕಾರಣಗಳಿಂದ ಸ್ಮರಣಸಂಚಿಕೆ ಸಮಾರಂಭಕ್ಕೆ ಅವರನ್ನು ಆಹ್ವಾನಿಸದಂತೆ ಜಿಲ್ಲಾಡಳಿತಕ್ಕೆ ಸಾಹಿತಿಗಳು, ಸಂಘಟನೆಗಳ ಪ್ರಮುಖರು ಒತ್ತಾಯಿಸಿದ್ದರು. ಒಮ್ಮೆ ಸಮಾರಂಭಕ್ಕೆ ಅವರು ಬಂದರೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದರು. ಈ ಕಾರಣದಿಂದ ಡಾ.ಮಹೇಶ್ ಜೋಶಿ ಸಮಾರಂಭದಿಂದ ದೂರವೇ ಉಳಿದರು. ಸಮ್ಮೇಳನ ಮುಗಿದು ಎಂಟು ತಿಂಗಳಾದರೂ ಡಾ.ಮಹೇಶ್ ಜೋಶಿ ಅವರು ಇದುವರೆಗೆ ಒಮ್ಮೆಯೂ ಜಿಲ್ಲೆಗೆ ಕಾಲಿಡುವ ಧೈರ್ಯ ಮಾಡಿಲ್ಲ.