ಸಾರಾಂಶ
ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವದ ಅಡಿಯಲ್ಲಿ ಎಲ್ಲಾ ವರ್ಗದವರಿಗೂ ಸಮಾನತೆ ನೀಡುತ್ತಿರುವ ಏಕೈಕ ಧರ್ಮ ವೀರಶೈವ ಲಿಂಗಾಯತ ಧರ್ಮ.
ಕನ್ನಡಪ್ರಭ ವಾರ್ತೆ ಹಳೇಬೀಡು
ಪುಷ್ಪಗಿರಿ ಶ್ರೀಕ್ಷೇತ್ರ ರಾಜ್ಯದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಬೆಳೆಯಲು ಶ್ರೀ ಸೋಮಶೇಖರ ಸ್ವಾಮೀಜಿಯವರ ಅವಿರತ ಪರಿಶ್ರಮ ಕಾರಣವಾಗಿದ್ದು, ಈ ಭಾಗದಲ್ಲಿ ಟ್ರೀ ಪಾರ್ಕ್ ನಿರ್ಮಿಸಲು ಒಂದು ಕೋಟಿ ಅನುದಾನವನ್ನು ಸರ್ಕಾರದಿಂದ ನೀಡಲು ಬದ್ಧನಾಗಿದ್ದೇನೆ ಎಂದು ಅರಣ್ಯ ಸಚಿವರ ಈಶ್ವರ ಖಂಡ್ರೆ ತಿಳಿಸಿದ್ದಾರೆ.ಇಲ್ಲಿನ ಸಮೀಪ ಪುಷ್ಪಗಿರಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕರ್ನಾಟಕ ರಾಜ್ಯ, ಹಾಸನ, ಮೈಸೂರು ವಿಭಾಗ ಮಟ್ಟದ ಪದಾಧಿಕಾರಿಗಳ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವದ ಅಡಿಯಲ್ಲಿ ಎಲ್ಲಾ ವರ್ಗದವರಿಗೂ ಸಮಾನತೆ ನೀಡುತ್ತಿರುವ ಏಕೈಕ ಧರ್ಮ ವೀರಶೈವ ಲಿಂಗಾಯತ ಧರ್ಮ. ಅದನ್ನ ಮಠಮಾನ್ಯಗಳು ಮುಂದುವರಿಸುತ್ತ ಅವರು ಸಮಾಜದ ಎಲ್ಲಾ ಧರ್ಮದವರಿಗೂ ಮತ ಪಂಥದವರಿಗೂ ವಿದ್ಯೆ, ಅನ್ನ, ಸಂಸ್ಕಾರ ಕೊಟ್ಟಿರುವಂತಹ ಧರ್ಮ ವೀರಶೈವ ಧರ್ಮ. ಈ ಧರ್ಮದ ತತ್ವಗಳು ಕೇವಲ ವೀರಶೈವರಿಗೆ ಮಾತ್ರವಲ್ಲದೆ ಇಷ್ಟಲಿಂಗ ಪೂಜಿಸುವ ಎಲ್ಲರೂ ಕೂಡ ಈ ಸಂಸ್ಕಾರ ದೊರೆಯುತ್ತದೆ. ಇಷ್ಟಲಿಂಗ ಪೂಜೆಗೆ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿ ವ್ಯಕ್ತಿಯಲ್ಲಿ ಏಕಾಗ್ರತೆಯ ಜ್ಞಾಪಕ ಶಕ್ತಿ ಹೆಚ್ಚಿಸುವ ವೈಜ್ಞಾನಿಕ ಶಕ್ತಿ ಇದೆ, ವೈಜ್ಞಾನಿಕ ತಳಹದಿಯ ಮೇಲೆ ನಮ್ಮ ವೀರರಶೈವ ಲಿಂಗಾಯತ ಧರ್ಮದ ಸಾರಾಂಶ ಅಡಗಿದೆ ಎಂದು ಹೇಳಿದರು .ವೀರಶೈವ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ:ವೀರಶೈವ ಲಿಂಗಾಯಿತರಲ್ಲಿ ಒಗ್ಗಟಿನ ಬಹುದೊಡ್ಡ ಕೊರತೆಯಿದೆ. ಅದು ನಮ್ಮ ವೀರಶೈವ ಮಹಾಸಭಾಕ್ಕೆ ಸವಾಲಾಗಿದೆ. ಅಂಗೈಯಲ್ಲಿ ಲಿಂಗ ಹಿಡಿದು ಪೂಜೆ ಮಾಡುವವರೆಲ್ಲರೂ ವೀರಶೈವ ಲಿಂಗಾಯಿತರಾಗಿರುವುದರಿಂದ ಒಳಪಂಗಡದ ಒಡಕುಗಳನ್ನ ಬಿಟ್ಟು ವೀರಶೈವ ಲಿಂಗಾಯತ ಧರ್ಮವನ್ನು ಕಟ್ಟುವಲ್ಲಿ ಪ್ರತಿಯೊಬ್ಬರು ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.ಆನೆ ಕಾಟಕ್ಕೆ ಶಾಶ್ವತ ಪರಿಹಾರ:
ಮಾನವ ಮತ್ತು ಪ್ರಾಣಿ ಸಂಘರ್ಷ ಅನಾದಿ ಕಾಲದಿಂದಲೂ ಇದೆ. ಜೊತೆಗೆ ವನ್ಯಜೀವಿಗಳ ಸಂರಕ್ಷಣೆ ಕೂಡ ನಮ್ಮ ಜವಾಬ್ದಾರಿಯಾಗಿದೆ. ಕರ್ನಾಟಕದಲ್ಲಿ ೬೫೦೦ ಆನೆಗಳಿದ್ದು ನಮ್ಮ ರಾಜ್ಯ ಮೊದಲನೇ ಸ್ಥಾನದಲ್ಲಿದೆ. ದೇಶದಲ್ಲಿ ಸುಮಾರು ೫೬೫ ಹುಲಿಗಳು ಇವೆ. ಇದರಲ್ಲಿ ೬೦ರಿಂದ ೮೦% ಆನೆಗಳು ಅರಣ್ಯದ ಹೊರ ಭಾಗದಲ್ಲಿ ವಾಸ ಮಾಡುತ್ತಿವೆ. ಕಾರಣ ಈ ಭಾಗದಲ್ಲಿ ನೀರು ಆಹಾರ ಪ್ರಾಣಿಗಳಿಗೆ ಸಿಗುತ್ತಿರುವುದರಿಂದ ಆನೆಗಳು ಹೊರ ವಲಯದ ವಾಸ ಮಾಡುತ್ತಿರುವುದು ಮಾನವ ಮತ್ತು ಪ್ರಾಣಿ ಸಂಘರ್ಷಕ್ಕೆ ಕಾರಣವಾಗಿದೆ. ಮನುಷ್ಯ ಪ್ರಾಣಿಗಳ ಜೊತೆ ಸಹಬಾಳ್ವೆ ಕೊರತೆಯಿಂದ ಪ್ರಾಣಿಗಳ ದಾಳಿಗೆ ತುತ್ತಾಗಿ ಮರಣ ಹೊಂದುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇವುಗಳನ್ನು ತಡೆಯಲು ರೈಲ್ವೆ ಬ್ಯಾರಿಕೇಡ್, ಆನೆ ಕಾರ್ಯಪಡೆ, ರೇಡಿಯೋ ಕಾಲರ್, ವಯರ್ಲೆಸ್, ಡ್ರೋನ್ ಕ್ಯಾಮರಗಳ ಮೂಲಕ ಅವುಗಳ ಚಲನವಲನಗಳನ್ನು ಗಮನಿಸಿ ಅವುಗಳ ದಾಳಿಯನ್ನು ತಡೆಯುವ ಪ್ರಯತ್ನವನ್ನ ಶಾಶ್ವತವಾಗಿ ಮಾಡಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.