ಸಾರಾಂಶ
ಕೊಪ್ಪಳ:
ಕೃಷಿ ಪರಿಕರ ಮಾರಾಟದಲ್ಲಿ ಆತ್ಯಾಧುನಿಕ ತಾಂತ್ರಿಕತೆಯನ್ನು ರೈತರಿಗೆ ತಲುಪಿಸಲು ಅದರ ಜ್ಞಾನ ಅಗತ್ಯ ಎಂದು ಧಾರವಾಡ ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು.ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಗಳ ಡಿಪ್ಲೊಮಾ ಕೋರ್ಸ್ ಉದ್ಘಾಟಿಸಿ ಮಾತನಾಡಿದರು.
ಕೃಷಿ ಪರಿಕರಗಳ ಮಾರಾಟಗಾರರು ತಮಗೆ ನೀಡುವ 48 ವಾರಗಳ ತರಬೇತಿಯಲ್ಲಿ ಶಿಸ್ತು. ಸಂಯಮ ಜತೆಗೆ ಉತ್ಸಾಹದಿಂದ ಕಲಿಯಬೇಕು. ಇಂದು ವೈಜ್ಞಾನಿಕ ಕೃಷಿಯ ಕಾಲ ಆಗಿರುವುದರಿಂದ ಕೃಷಿ ಪರಿಕರಗಳ ಬಗ್ಗೆ ಮಾರಾಟ ಮಾಡಿದರೆ ಸಾಲದು, ಅವುಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳಬೇಕಿದೆ. ಎಲ್ಲ ಪ್ರದೇಶದಲ್ಲಿ ಹವಾಮಾನ ಒಂದೇ ತರಹ ಇರುವುದಿಲ್ಲ. ನಮ್ಮ ಸುತ್ತಲಿನ ಪರಿಸರ ಮತ್ತು ಜೀವಿಗಳ ಬಗ್ಗೆ ಜ್ಞಾನ ಹೊಂದಿರುವುದು ಮುಖ್ಯವಾಗಿದೆ. ಹಾಗಾಗಿ ನಿಮ್ಮ ಮಕ್ಕಳಿಗೆ ಜೀವ ವಿಜ್ಞಾನದ ಬಗ್ಗೆ ತಿಳಿವಳಿಕೆ ನೀಡಿ ಎಂದರು.ಕೃಷಿಯನ್ನು ವೈಜ್ಞಾನಿಕವಾಗಿ ಮಾಡಿದಾಗ ಮಾತ್ರ ಉದ್ದಿಮೆಯನ್ನಾಗಿ ಮಾಡಬಹುದು. ಸೋಲಾರ ಅಳವಡಿಕೆ, ಮಣ್ಣು ಮತ್ತು ನೀರಿನ ಸಂರಕ್ಷಣೆಗೆ ಒತ್ತು ನೀಡುವುದು, ಮಣ್ಣಿನ ಪರೀಕ್ಷೆ ಮಾಡಿಸುವುದು, ಹತ್ತಿ, ತೊಗರಿ, ಸೂರ್ಯಕಾಂತಿ ಕಟಗಿ ಸುಡದೆ ಕೊಳೆಸಿ ಗೊಬ್ಬರ ಮಾಡುವ ಜತೆಗೆ ಸಮಗ್ರ ಕೃಷಿಗೆ ರೈತರು ಒತ್ತು ನೀಡಬೇಕೆಂದು ಹೇಳಿದರು.
ಸಮೇತಿ-ಉತ್ತರ ಧಾರವಾಡ ಕೃಷಿ ವಿವಿ ಪ್ರಾಧ್ಯಾಪಕ ಡಾ. ಎಸ್.ಎನ್. ಜಾಧವ್ ಮಾತನಾಡಿ, ಈ ತರಬೇತಿಯಲ್ಲಿ 8ನೇ ಮತ್ತು 15ನೇ ವಾರ ಮೂರು ಪರೀಕ್ಷೆ ನಡೆಸಿ ಬಳಿಕ ಅಂತಿಮ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡಲಾಗುವುದು ಎಂದರು.ಇದೇ ವೇಳೆ ಸೆ. 13ರಿಂದ 16ರ ವರೆಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಕೃಷಿ ಮೇಳ-2025ರ ಕರಪತ್ರ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ. ಧಾರವಾಡ ಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ. ಎಂ.ವಿ. ಮಂಜುನಾಥ, ಕೊಪ್ಪಳ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್., ಕೃಷಿ ತಂತ್ರಜ್ಞರ ಸಂಸ್ಥೆ ಕೊಪ್ಪಳ ಉಪಾಧ್ಯಕ್ಷ ವೀರಣ್ಣ ಕಮತರ ಸೇರಿದಂತೆ ಇತರೆ ಕೃಷಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ, ಡಿಪ್ಲೊಮಾ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳು ಉಪಸ್ಥಿತರಿದ್ದರು.