ಹತ್ತು ವರ್ಷದಲ್ಲಿ 120 ಕೋಟಿ ಸಾಲ ಮಾಡಿದ್ದೇ ಮೋದಿ ಸಾಧನೆ

| Published : Jan 26 2024, 01:50 AM IST

ಸಾರಾಂಶ

ಆದರೆ ಪ್ರಧಾನಿ ನರೇಂದ್ರ ಮೋದಿಯವರೊಬ್ಬರ ಅವಧಿಯಲ್ಲಿ ದೇಶದ ಸಾಲ ಸುಮಾರು 173 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದು, ಮೋದಿ ಸರ್ಕಾರ ಭಾರತವನ್ನು ಆರ್ಥಿಕವಾಗಿ ಸರ್ಕಾರ ದಿವಾಳಿ ಮಾಡಿದೆ ಎಂದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಳೆದ 10 ವರ್ಷದಲ್ಲಿ ಸುಮಾರು 120 ಕೋಟಿ ರುಪಾಯಿ ಸಾಲ ಮಾಡಿದ್ದೇ ಕೇಂದ್ರದ ಮೋದಿ ಸರ್ಕಾರದ ಸಾಧನೆಯಾಗಿದ್ದು, ಭಾರತವನ್ನು ಆರ್ಥಿಕವಾಗಿ ಸರ್ಕಾರ ದಿವಾಳಿ ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಗುರುವಾರ ಸಂಜೆ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಬರುವ ಮುಂಚೆ 53 ಲಕ್ಷದ 11 ಸಾವಿರ ಕೋಟಿ ಸಾಲ ಇತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯವರೊಬ್ಬರ ಅವಧಿಯಲ್ಲಿ ದೇಶದ ಸಾಲ ಸುಮಾರು 173 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ 10 ವರ್ಷಗಳ ಮೋದಿ ಅವಧಿಯಲ್ಲಿ 120 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಟೀಕಿಸಿದರು.

ನಾವು ತಂದ ಗ್ಯಾರಂಟಿಗಳನ್ನು ಮೋದಿಯವರು ಆಡಿಕೊಂಡರು. ಜಾರಿಗೆ ತಂದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದರು. ಈಗ ಅದೇ ಮೋದಿಯವರೇ ನಮ್ಮ ಗ್ಯಾರಂಟಿ ಕಾರ್ಯಕ್ರಮಗಳನ್ನು ಕಾಪಿ ಮಾಡುತ್ತಿದ್ದಾರೆ. ನಮ್ಮ ಸರ್ಕಾರ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿ ಆರ್ಥಿಕವಾಗಿ ಇನ್ನೂ ಸದೃಢವಾಗಿದೆ ಎಂದು ಪ್ರತಿ ಗ್ಯಾರಂಟಿ ಕಾರ್ಯಕ್ರಮಗಳ ಜಾರಿ ಕುರಿತು ವಿವರಿಸಿದರು.

ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುವ ನೈತಿಕ ಹಕ್ಕು ಬಿಜೆಪಿ ಗೆ ಇಲ್ಲ. ಏಕೆಂದರೆ ದೇಶದಲ್ಲಿರುವ ಎಲ್ಲಾ ಪ್ರತಿಷ್ಠಿತ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಅಣೆಕಟ್ಟುಗಳು ಆಗಿದ್ದು ಬಿಜೆಪಿಯೇತರ ಕಾಂಗ್ರೆಸ್ ಮತ್ತು ಇತರೆ ಸರ್ಕಾರಗಳ ಅವಧಿಯಲ್ಲಿ. ನಿಮ್ಮ ಅವಧಿಯಲ್ಲಿ ಏನು ಮಾಡಿದಿರಿ ಹೇಳಿ ಎಂದು ಪ್ರದಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದರು.

ಯಾವ ಭರವಸೆ ಈಡೇರಿಸಿದ್ರಿ?: ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ರಲ್ಲಾ ಮೋದಿಯವರೇ. ಮಾಡಿದ್ರಾ ? ಎಲ್ಲಿ 20 ಕೋಟಿ ಉದ್ಯೋಗ ? ಅಡುಗೆ ಅನಿಲ, ಪೆಟ್ರೋಲ್ ಡೀಸೆಲ್, ಗೊಬ್ಬರ, ಕಾಳು ಬೇಳೆ, ಅಡುಗೆ ಎಣ್ಣೆ ಬೆಲೆ ಕಡಿಮೆ ಆಗುತ್ತೆ ಅಂದ್ರಲ್ಲಾ , ಕಡಿಮೆ ಮಾಡಿದ್ರಾ ಮೋದಿಯವರೇ? ಎಂದು ಪ್ರಶ್ನಿಸಿದರು.

ಮಂಡಲ್ ಕಮಿಷನ್ ವರದಿ ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದ್ದು ಪ್ರಧಾನಿಗಳಾಗಿದ್ದ ವಿ.ಪಿ. ಸಿಂಗ್ ಮತ್ತು ನರಸಿಂಹರಾಯರು. ನೀವೇನು ಮಾಡಿದೀರಿ ಹೇಳಿ ಮೋದಿಯವರೇ ಎಂದು ಪ್ರಶ್ನಿಸಿದರು. ಸಾಮಾಜಿಕ ನ್ಯಾಯ, ಸಂವಿಧಾನ, ಜಾತ್ಯತೀತತೆ, ಮೀಸಲಾತಿ ಪರವಾಗಿ ಯಾವತ್ತೂ ಮಾತನಾಡದ ನೀವು, ಈ ಬಗ್ಗೆ ಏನೂ ಕಾರ್ಯಕ್ರಮಗಳನ್ನು ನಿಮ್ಮ ಅವಧಿಯಲ್ಲಿ ಕೊಡಲಿಲ್ಲ ಏಕೆ ಎಂದರು. ಬಿಜೆಪಿಯವರು ತಮ್ಮ ಪ್ರಣಾಳಿಕೆಗಳಲ್ಲಿ ಕೊಟ್ಟ ಆಶ್ವಾಸನೆಗಳಲ್ಲಿ ಶೇ.10ರಷ್ಟನ್ನೂ ಜಾರಿ ಮಾಡಲೇ ಇಲ್ಲ. ನಾವು ನುಡಿದಂತೆ ನಡೆದಿದ್ದೇವೆ. ಕೊಟ್ಟ ಮಾತಿನಂತೆ ನಡೆದುಕೊಂಡು ಜನರ ಋಣ ತೀರಿಸಿದ್ದೇವೆ. ಇದನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು. ನಾಡಿನ ಯುವಕರಿಗೆ ಉದ್ಯೋಗ ನೀಡದೆ, ಕೇವಲ ಯುವ ಸಮೂಹವನ್ನು, ವಿದ್ಯಾರ್ಥಿ ಸಮೂಹವನ್ನು ಭಾವನಾತ್ಮಕವಾಗಿ ಕೆರಳಿಸಿ ಅವರ ಬದುಕಿನ ಜತೆ ಚೆಲ್ಲಾಟ ಆಡಿದ್ದೀರಿ ಎಂದು ಹೇಳಿ ಬಿಜೆಪಿಯನ್ನು ತಿರಸ್ಕರಿಸುವಂತೆ ಕರೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಮಾತನಾಡಿ ಕೊಡಗಿನಲ್ಲಿ ಮುಂದಿನ ದಿನಗಳಲ್ಲಿ ಏರ್ ಸ್ಟ್ರಿಪ್ ಸ್ಥಾಪನೆ ಮಾಡಬೇಕು. ಕಾನೂನು ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯನ್ನು ಆರಂಭಿಸಲು ನಮ್ಮ ಸರ್ಕಾರ ಕೆಲಸ ಮಾಡಲಿದೆ ಎಂದು ತಿಳಿಸಿದರು.

ಗೃಹ ಸಚಿವರಾದ ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್, ರೇಷ್ಮೆ ಸಚಿವರಾದ ಕೆ.ವೆಂಕಟೇಶ್, ಮಾಜಿ ಸಚಿವ ಎಂ.ಸಿ.ನಾಣಯ್ಯ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಶಾಸಕರಾದ ಮಂಥರ್ ಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೆಹರೂಸ್ ಖಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.5 ವರ್ಷದಲ್ಲಿ ಕೆಲಸ ಮಾಡಿ ತೋರಿಸುತ್ತೇನೆ: ಮಂತರ್

ಮಡಿಕೇರಿ : ಕಳೆದ 25 ವರ್ಷಗಳಿಂದ ಕೊಡಗಿನಲ್ಲಿ ಹಲವು ಅಭಿವೃದ್ಧಿ ಕಾರ್ಯ ಆಗಿಲ್ಲ. ಹಲವು ಕಾಮಗಾರಿಗಳು ಹಾಗೆಯೇ ಉಳಿದಿದೆ. ನಾನು 5 ವರ್ಷದಲ್ಲಿ ಕೆಲಸ ಮಾಡಿ ತೋರಿಸುತ್ತೇನೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.

ಮಡಿಕೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಸಾವಿರ ಕಿ.ಮೀ ರಸ್ತೆ, ಕಾಫಿ ಬೆಳೆಗಾರರಿಗೆ ಉಚಿತ ಪಂಪ್ ಸೆಟ್ ಸೇರಿದಂತೆ ಅಭಿವೃದ್ಧಿ ಕೆಲಸಕ್ಕೆ ಅನುದಾನ ನೀಡುವಂತೆ ಇದೇ ಸಂದರ್ಭ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಮಡಿಕೇರಿ ಕ್ಷೇತ್ರದಲ್ಲಿ ರು.87 ಕೋಟಿ ಐದು ಗ್ಯಾರೆಂಟಿಗಳ ಮೂಲಕ ಫಲಾನುಭವಿಗಳಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಸುಮಾರು ರು.300 ಕೋಟಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರು ಕಳೆದ ಬಾರಿ ಕೊಡಗಿಗೆ ಆಗಮಿಸಿದ್ದ ಸಂದರ್ಭ ನಡೆದ ಘಟನೆಯಿಂದ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು. ಡ್ರಗ್ಸ್‌ ಮುಕ್ತ ಕರ್ನಾಟಕಕ್ಕೆ ಪಣ: ಗೃಹ ಸಚಿವಮಡಿಕೇರಿ: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಾತನಾಡಿ ಡ್ರಗ್ ಮುಕ್ತ ಕರ್ನಾಟಕಕ್ಕೆ ಪಣ ತೊಡಲಾಗುವುದು ಹಾಗೂ ರಾಜ್ಯದಲ್ಲಿ ಸೈಬರ್ ಕ್ರೈಮ್ ಹೆಚ್ಚಳವಾಗುತ್ತಿದ್ದು, ಇದಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ 1986ರ ನಂತರ ಎರಡೂ ವಿಧಾನಸಭಾ ಕ್ಷೇತ್ರದಲ್ಲಿ ಕೂಡ ಕಾಂಗ್ರೆಸ್ ಶಾಸಕನ್ನು ಆಯ್ಕೆ ಮಾಡಿದ್ದಾರೆ. ಇದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಬಡವರ ಪರ, ಶೋಷಿತರ ಪರ ಕಾಂಗ್ರೆಸ್ ನಿಲ್ಲುತ್ತದೆ ಎಂದು ಹೇಳಿತ್ತು. 138 ವರ್ಷ ಕಳೆದರೂ ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ನುಡಿದಂತೆ ನಡೆಯುವ ಪಕ್ಷ ಕಾಂಗ್ರೆಸ್ ಎಂದು ಹೇಳಿದರು.