ಸಂವಿಧಾನದಲ್ಲಿ ಬರೆದಂತೆ ಮೋದಿ ಆಡಳಿತ: ಗೌರವ್‌ ಭಾಟಿಯಾ

| Published : Apr 22 2024, 02:20 AM IST

ಸಾರಾಂಶ

ಮೋದಿಯವರು ನವಭಾರತದ ನಿರ್ಮಾತೃವಾಗಿದ್ದಾರೆ. ದೇಶವನ್ನು ವಿಶ್ವಗುರುವನ್ನಾಗಿ ಮಾಡಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶ ಪಾತಾಳಕ್ಕೆ ಇಳಿಯಲಿದೆ ಎಂದು ಭಾಟಿಯಾ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ನರೇಂದ್ರ ಮೋದಿಯವರು ಅಸಾಧ್ಯವೆನಿಸಿದ್ದನ್ನು ಸಾಧ್ಯವಾಗಿಸಿದ್ದಾರೆ. ಅವೆಲ್ಲವನ್ನೂ ಸಂವಿಧಾನದಲ್ಲಿ ಬರೆದಿರುವಂತೆಯೇ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಹೇಳಿದ್ದಾರೆ. ಶುಕ್ರವಾರದಂದು ನಗರದಲ್ಲಿ ಬಿಜೆಪಿ ಕಾನೂನು ಪ್ರಕೋಷ್ಠದ ವಕೀಲರ ಸಮಾವೇಶದಲ್ಲಿ ಅವರು ಮಾತನಾಡಿದರು.

ಜಮ್ಮು ಕಾಶ್ಮೀರದ ೩೭೦ನೇ ವಿಧಿ ರದ್ದು, ರಾಮಮಂದಿರ ನಿರ್ಮಾಣ, ಏಕರೂಪ ನಾಗರಿಕ ಸಂಹಿತೆ ಮೊದಲಾದವುಗಳನ್ನು ಮಾಡಿ ತೋರಿಸಿದ್ದಾರೆ. ಟೀಕಿಸುತ್ತಿದ್ದ ಕಾಂಗ್ರೆಸ್‌ನವರಿಗೆ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ಸ್ವಾತಂತ್ರ್ಯ ಅನಂತರ ೫೫ ವರ್ಷಗಳ ಕಾಲ ಆಳ್ವಿಕೆ ನಡೆಸಿದರೂ ತುಷ್ಟೀಕರಣ ರಾಜಕಾರಣದಿಂದಾಗಿ ೩೭೦ನೇ ವಿಧಿ ರದ್ದು ಮಾಡಿರಲಿಲ್ಲ. ಸಂವಿಧಾನವನ್ನು ಈ ಹಿಂದೆ ಹಲವು ಕಾರಣಗಳಿಗಾಗಿ ಕಾಂಗ್ರೆಸ್‌ನವರು ಅವರ ಆಡಳಿತ ಅವಧಿಯಲ್ಲಿ ಅವರಿಗೆ ಬೇಕಾಗಿ ತಿದ್ದುಪಡಿ ಮಾಡಿಸಿದ್ದರು. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಡಳಿತ ಅವಧಿಯಲ್ಲಿ ಜಿಎಸ್‌ಟಿ, ಆರ್ಥಿಕ ದುರ್ಬಲರಿಗೆ ರಿಯಾಯಿತಿ, ನಾರಿಶಕ್ತಿ ಮೊದಲಾದ ಉದ್ದೇಶಕ್ಕೆ ಮಾತ್ರವೇ ತಿದ್ದುಪಡಿ ಮಾಡಲಾಗಿದೆ. ಮೋದಿಯವರು ಯಾವುದೇ ತಪ್ಪು ಮಾಡಿಲ್ಲ. ನರೇಂದ್ರ ಮೋದಿಯವರು ಪ್ರಧಾನಿಯಾದ ಅನಂತರ ದೇಶವು ಜಗತ್ತಿನಲ್ಲಿ ಆರ್ಥಿಕತೆಯಲ್ಲಿ ೧೧ನೇ ಸ್ಥಾನದಿಂದ ೪ನೇ ಸ್ಥಾನಕ್ಕೇರಿದೆ. ಮುಂದಿನ ದಿನಗಳಲ್ಲಿ ದೇಶ ನಂ.೧ ಸ್ಥಾನಕ್ಕೇರಲಿದೆ. ಮೋದಿಯವರು ನವಭಾರತದ ನಿರ್ಮಾತೃವಾಗಿದ್ದಾರೆ. ದೇಶವನ್ನು ವಿಶ್ವಗುರುವನ್ನಾಗಿ ಮಾಡಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶ ಪಾತಾಳಕ್ಕೆ ಇಳಿಯಲಿದೆ ಎಂದು ಭಾಟಿಯಾ ಹೇಳಿದರು.

ಶಾಸಕ ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ, ವಿಧಾನಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ, ಕಾನೂನು ಪ್ರಕೋಷ್ಠದ ಸಂಚಾಲಕ ಶಂಭು ಶರ್ಮಾ ಇದ್ದರು.