ಬಸವಣ್ಣನ ತತ್ವ ಸಿದ್ಧಾಂತದ ಮೇಲೆ ಮೋದಿ ಆಡಳಿತ

| Published : Jan 27 2025, 12:48 AM IST

ಸಾರಾಂಶ

ವಿಪ ಸದಸ್ಯ ಕೆ.ಎಸ್.ನವೀನ್ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೌರ ಕಾರ್ಮಿಕರ ಸನ್ಮಾನ ಕಾರ್ಯಕ್ರಮ, ಸಹ ಪಂಕ್ತಿ ಭೋಜನ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ ಪಾಲ್ಗೊಂಡಿದ್ದರು.

ಪೌರ ಕಾರ್ಮಿಕರಿಗೆ ಸನ್ಮಾನ, ಸಹ ಪಂಕ್ತಿ ಭೋಜನ ಕಾರ್ಯಕ್ರಮದಲ್ಲಿ ಸಂಸದ ಗೋವಿಂದ ಕಾರಜೋಳ ಅಭಿಮತ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬಸವಣ್ಣನವರ ತತ್ವ ಸಿದ್ಧಾಂತಗಳ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ ಎಂದು ಸಂಸದ ಗೋವಿಂದ ಎಂ.ಕಾರಜೋಳ ಹೇಳಿದರು.

ಗಣರಾಜ್ಯೋತ್ಸವದ ಅಂಗವಾಗಿ ಸಂವಿಧಾನ ಗೌರವ ಅಭಿಯಾನ ಪ್ರಯುಕ್ತ ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್‌ರವರ ನಿವಾಸದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಪೌರ ಕಾರ್ಮಿಕರಿಗೆ ಸನ್ಮಾನ ಹಾಗೂ ಸಹ ಪಂಕ್ತಿ ಭೋಜನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಶೋಷಿತ ಸಮುದಾಯಗಳ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದಾರೆ. ಪೌರ ಕಾರ್ಮಿಕರ ಪಾದ ತೊಳೆದು ಯಾರು ಮೇಲು, ಕೀಳಲ್ಲ ಎನ್ನುವ ಸಂದೇಶವನ್ನು ಇಡಿ ವಿಶ್ವಕ್ಕೆ ಸಾರಿದ್ದಾರೆ ಎಂದು ಹೇಳಿದರು.

ಗಣತಂತ್ರ ವ್ಯವಸ್ಥೆ ಸ್ವೀಕರಿಸಿದ 75 ವರ್ಷಗಳ ನಂತರ ದೇಶದಲ್ಲಿ ಭೀಮ ಸಂಗಮ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸಂವಿಧಾನಕ್ಕೆ ನಿಜವಾದ ಗೌರವ ಕೊಟ್ಟಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಡಿ ದೇಶದ ಪ್ರತಿಯೊಬ್ಬರಿಗೂ ಸಮಾನತೆ ನೀಡಿದ ಫಲವಾಗಿ ಚಹ ಮಾರುತ್ತಿದ್ದ ವ್ಯಕ್ತಿ ದೇಶದ ಪ್ರಧಾನಿಯಾಗಲು ಅವಕಾಶ ಸಿಕ್ಕಿತು. ಜಾತಿ ಬೇಧ, ಮೇಲು-ಕೀಳೆಂಬ ತಾರತಮ್ಯ ನಿವಾರಣೆಯಾಗಬೇಕೆಂಬ ಉದ್ದೇಶದಿಂದ ದೇಶಾದ್ಯಂತ ಪೌರ ಕಾರ್ಮಿಕರನ್ನು ಸನ್ಮಾನಿಸಲಾಗುತ್ತಿದೆ ಎಂದು ಹೇಳಿದರು.ಬಿ.ಎಸ್.ಯಡಿಯೂರಪ್ಪ, ಬಸವರಾಜ್‌ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ 24 ಸಾವಿರ ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಿ ಜೀವನ ಭದ್ರತೆ ಒದಗಿಸಿ ಕೊಟ್ಟಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಭಾರತಕ್ಕೆ ಭದ್ರವಾದ ಸಂವಿಧಾನ ನೀಡಿರುವ ಡಾ.ಬಿ.ಆರ್.ಅಂಬೇಡ್ಕರ್‌ರವರನ್ನು ಗೌರವಿಸಬೇಕೆಂಬ ಉದ್ದೇಶದಿಂದ ಪ್ರಧಾನಿ ನರೇಂದ್ರಮೋದಿ ಅವರು ಭೀಮ ಸಂಗಮದ ಮೂಲಕ ಪೌರ ಕಾರ್ಮಿಕರ ಜೊತೆ ಸಹ ಪಂಕ್ತಿ ಭೋಜನ ಸವಿಯುವಂತೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ನಿವಾಸದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಅವರೊಂದಿಗೆ ಊಟ ಮಾಡುತ್ತಿದ್ದೇವೆ. ಇಡೀ ವಿಶ್ವದಲ್ಲಿ ಪೌರ ಕಾರ್ಮಿಕರ ಪಾದ ತೊಳೆದ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂದು ಶ್ಲಾಘಿಸಿದರು.

ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ, ನಮ್ಮ ದೇಶಕ್ಕೆ ಅಂಬೇಡ್ಕರ್ ಅವರು ಸಂವಿಧಾನವೆಂಬ ಪವಿತ್ರವಾದ ಗ್ರಂಥ ನೀಡಿದ್ದಾರೆ. ಅದರಡಿ ಎಲ್ಲಾ ಜಾತಿ, ಧರ್ಮದವರು ಸಮಾನವಾಗಿ ಬದುಕುತ್ತಿದ್ದೇವೆ. ದಿನ ಬೆಳಗಾದರೆ ನಗರವನ್ನು ಸ್ವಚ್ಛಗೊಳಿಸುವ ಪೌರ ಕಾರ್ಮಿಕರನ್ನು ಕೇವಲವಾಗಿ ನೋಡದೆ ಗೌರವದಿಂದ ನಡೆಸಿಕೊಳ್ಳಬೇಕೆನ್ನುವ ಉದ್ದೇಶದಿಂದ ಪ್ರಧಾನಿ ಮೋದಿರವರು ಪಾದ ತೊಳೆಯುವ ಮೂಲಕ ಸಂವಿಧಾನ ಗೌರವ ಅಭಿಯಾನ ಭೀಮ ಸಂಗಮಕ್ಕೆ ಕರೆ ನೀಡಿದ್ದಾರೆ ಎಂದರು.

ಮೊಳಕಾಲ್ಮುರು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪೌರ ಕಾರ್ಮಿಕರ ಸೇವೆಯನ್ನು ಗೌರವಿಸಿ ಖಾಯಂಗೊಳಿಸಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ ಅನೇಕ ಸೌಲಭ್ಯಗಳನ್ನು ಕೊಟ್ಟರೂ ಚುನಾವಣೆಯಲ್ಲಿ ಆಸೆ ಆಮಿಷಗಳಿಗೆ ಬಲಿಯಾಗಿ ನಮ್ಮ ಪಕ್ಷದ ಅಭ್ಯರ್ಥಿ ವಿರುದ್ಧ ಮತ ಚಲಾವಣೆ ಮಾಡಲಾಯಿತು. ಪ್ರತಿ ಮಂಡಲ ಮಟ್ಟದಲ್ಲಿ ಭೀಮ ಸಂಗಮ ನಡೆಯಬೇಕು ಎಂದು ಹೇಳಿದರು.

ಈ ವೇಳೆ ಪೌರ ಕಾರ್ಮಿಕ ಮೋಹನ್, ಬಿಜೆಪಿ ಯುವ ಮುಖಂಡ ಜಿ.ಎಂ.ಅನಿತ್, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ವಕ್ತಾರ ನಾಗರಾಜ್‌ಬೇದ್ರೆ, ಹನುಮಂತೆಗೌಡ, ಕೆ.ಟಿ.ಕುಮಾರಸ್ವಾಮಿ, ಜಯಪಾಲಯ್ಯ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ಮೋಹನ್ ಉಪಸ್ಥಿತರಿದ್ದರು.