ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ, ಕ್ಷೇತ್ರದಲ್ಲಿ ಈ ಬಾರಿ ಕಾಗೇರಿ: ರೂಪಾಲಿ ಎಸ್. ನಾಯ್ಕ

| Published : Apr 01 2024, 12:47 AM IST

ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ, ಕ್ಷೇತ್ರದಲ್ಲಿ ಈ ಬಾರಿ ಕಾಗೇರಿ: ರೂಪಾಲಿ ಎಸ್. ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಚುಕ್ಕಾಣಿ ಹಿಡಿಯಬೇಕು. ಕೇವಲ ದೇಶದ ಆಂತರಿಕ ಅಭಿವೃದ್ಧಿ ಅಷ್ಟೇ ಅಲ್ಲ. ಜಾಗತಿಕವಾಗಿಯೂ ಭಾರತವನ್ನು ಬಲಿಷ್ಠವನ್ನಾಗಿ ರೂಪಿಸಿ ಭಾರತ ಜಾಗತಿಕ ನಾಯಕನಾಗಬೇಕು ಎಂದು ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಮನವಿ ಮಾಡಿದರು.

ಕಾರವಾರ: ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಿ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಗೆಲ್ಲಿಸಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಶಾಸಕಿ ರೂಪಾಲಿ ನಾಯ್ಕ ವಿನಂತಿಸಿದರು.

ಭಾನುವಾರ ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೊಂದಿಗೆ ಚುರುಕಿನ ಪ್ರಚಾರ ಕೈಗೊಂಡರು.

ರೂಪಾಲಿ ಎಸ್. ನಾಯ್ಕ ಪ್ರತಿಯೊಂದು ಸಭೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸಿದ ಜನಪ್ರಿಯ ಯೋಜನೆಗಳನ್ನು ವಿವರಿಸಿ, ಅಪಾರ ಸಂಖ್ಯೆಯ ಜನರು ವಿವಿಧ ಯೋಜನೆಗಳ ಫಲಾನುಭವಿಗಳಾಗಿದ್ದಾರೆ ಎಂದರು.

ದೇಶದಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಚುಕ್ಕಾಣಿ ಹಿಡಿಯಬೇಕು. ಕೇವಲ ದೇಶದ ಆಂತರಿಕ ಅಭಿವೃದ್ಧಿ ಅಷ್ಟೇ ಅಲ್ಲ. ಜಾಗತಿಕವಾಗಿಯೂ ಭಾರತವನ್ನು ಬಲಿಷ್ಠವನ್ನಾಗಿ ರೂಪಿಸಿ ಭಾರತ ಜಾಗತಿಕ ನಾಯಕನಾಗಬೇಕು. ಈ ಸಂಕಲ್ಪದೊಂದಿಗೆ ಹಗಲಿರುಳು ದೇಶಕ್ಕಾಗಿ ದುಡಿಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾವು ಈ ಕ್ಷೇತ್ರದಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಇನ್ನಷ್ಟು ಶಕ್ತಿ ತುಂಬಬೇಕಾಗಿದೆ. ಪ್ರತಿಯೊಬ್ಬರೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮತ ನೀಡುವ ಮೂಲಕ ಅವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವಂತೆ ವಿನಂತಿಸಿದರು.

ಕ್ಷೇತ್ರದ ವಿವಿಧ ಸಮಾಜದ ಮುಖಂಡರೊಂದಿಗೆ ಮಾತುಕತೆ ನಡೆಸಿದ ರೂಪಾಲಿ ಎಸ್. ನಾಯ್ಕ ಪಕ್ಷಕ್ಕೆ ಬೆಂಬಲಿಸುವಂತೆ ಕೋರಿದರು. ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಕಾರವಾರ ಕೋಡಿಬಾಗ ರಸ್ತೆಗೆ ಒಂದೇ ವಾರದಲ್ಲಿ ಚಕಮಕ್ ಜಂಗ್ ಹೆಂಜಾ ನಾಯ್ಕ ಹೆಸರನ್ನು ನಾಮಕರಣ ಮಾಡಲು ಸಾಧ್ಯವಾಯಿತು ಎಂದರು.

ಕಾರವಾರ ಹಾಗೂ ಅಂಕೋಲಾ ಎರಡೂ ತಾಲೂಕುಗಳಲ್ಲಿ ರೂಪಾಲಿ ಎಸ್. ನಾಯ್ಕ ಪಕ್ಷದ ಪರವಾಗಿ ಸಕ್ರಿಯವಾಗಿ ತೊಡಗಿಕೊಂಡು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಸಹಕಾರದಿಂದ ಪಕ್ಷಕ್ಕೆ ಅತಿ ಹೆಚ್ಚಿನ ಬೆಂಬಲ ದೊರಕಿಸಿಕೊಡುವಲ್ಲಿ ಶ್ರಮಿಸುತ್ತಿದ್ದಾರೆ.

ಅಂಕೋಲಾದ ಶಾಂತಾದುರ್ಗಾ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಕೋಡ್ಸಣಿ ಹಾಲಕ್ಕಿ ಸಮಾಜದ ಮುಖಂಡ ಮಂಕಾಳು ಗೌಡ ಅವರ ನಿವಾಸದಲ್ಲಿ ಸಭೆಯಲ್ಲಿ ಪಾಲ್ಗೊಂಡರು.

ಬೆಳಂಬರ ಉತ್ತರ ಖಾರ್ವಿವಾಡ, ಅವರ್ಸಾದಲ್ಲಿ ಸಭೆಯಲ್ಲಿ ಭಾಗಿಯಾದರು. ಕಾರವಾರದಲ್ಲಿ ಕೋಮಾರಪಂತ ಹಾಗೂ ದೈವಜ್ಞ ಸಮಾಜದ ಮುಖಂಡರು, ನಂತರ ಭಂಡಾರಿ ಸಮಾಜದ ಸಂತೋಷ ಕಲ್ಗುಟಕರ ನಿವಾಸದಲ್ಲಿ ಸಭೆಯಲ್ಲಿ ಭಾಗವಹಿಸಿದರು. ಚಿತ್ತಾಕುಲ ವಾಗವಾಡದಲ್ಲಿ ಸಭೆ ಹಾಗೂ ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ ನಿವಾಸದಲ್ಲಿ ಮೀನುಗಾರ ಮುಖಂಡರೊಂದಿಗೆ ಸಭೆಯಲ್ಲಿ ಪಾಲ್ಗೊಂಡು ಪಕ್ಷದ ಪರವಾಗಿ ಬೆಂಬಲ ಕೋರಿದರು.

ಪಕ್ಷದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸದಸ್ಯ ಗಣಪತಿ ಉಳ್ವೇಕರ, ರಾಜ್ಯ ಮಾಧ್ಯಮ ವಕ್ತಾರರಾದ ಹರಿಪ್ರಕಾಶ ಕೋಣೆಮನೆ, ಜಿಲ್ಲಾಧ್ಯಕ್ಷರಾದ ಎನ್‌.ಎಸ್. ಹೆಗಡೆ, ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯಕ, ಕಾರವಾರ ನಗರ ಮಂಡಲದ ನಾಗೇಶ ಕುರ್ಡೇಕರ ಮತ್ತು ಅಂಕೋಲಾ ಮಂಡಲದ ಗೋಪಾಲಕೃಷ್ಣ ವೈದ್ಯ, ಪಕ್ಷದ ಪ್ರಮುಖರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.