ಯುವಕರಿಗೆ ನಿರುದ್ಯೋಗದ ನಾಮ ಹಾಕಿದ ಮೋದಿ: ಸಿಎಂ ಸಿದ್ದರಾಮಯ್ಯ

| Published : May 04 2024, 12:32 AM IST

ಯುವಕರಿಗೆ ನಿರುದ್ಯೋಗದ ನಾಮ ಹಾಕಿದ ಮೋದಿ: ಸಿಎಂ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನಿರುದ್ಯೋಗ ಸಮಸ್ಯೆ ಬಗೆಹರಿಸಲು ಹೊಸ ಕಾರ್ಖಾನೆ ಸ್ಥಾಪಿಸಲಿಲ್ಲ. ಬಂಡವಾಳ ಹೂಡಿಕೆಗೆ ಅವಕಾಶವನ್ನೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿಕೊಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮುಂಡಗೊಡ: ಮೋದಿ ಮೋದಿ ಎಂದು ಜೈಕಾರ ಹಾಕಿದ ಯುವಕರಿಗೆ ಅವರು ತಿರುಪತಿ ತಿಮ್ಮಪ್ಪನ ನಾಮ ಹಾಕಿದರು. ನರೇಂದ್ರ ಮೋದಿ ಸುಳ್ಳಿನ ಸರದಾರ, ಬಿಜೆಪಿ ಸುಳ್ಳು ಉತ್ಪಾದನಾ ಕೇಂದ್ರ. ಸುಳ್ಳೇ ಅವರ ಮನೆ ದೇವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಶುಕ್ರವಾರ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪ್ರಜಾಧ್ವನಿ- ೨ ಸಮಾವೇಶ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಸುಳ್ಳಿನ ಕಾರ್ಖಾನೆ ಇದ್ದಂತೆ. ಯುವಕರು ಕೆಲಸ ಕೊಡಿ ಎಂದರೆ ಪಕೋಡಾ ಮಾರಲು ಹೋಗಿ ಎಂದು ಪ್ರಧಾನಿ ಮೋದಿ ವಿದ್ಯಾವಂತ ಯುವಜನರಿಗೆ ಬೇಜವಾಬ್ದಾರಿ ಹೇಳಿಕೆ ಕೊಟ್ಟರು.

ನಿರುದ್ಯೋಗ ಸಮಸ್ಯೆ ಬಗೆಹರಿಸಲು ಹೊಸ ಕಾರ್ಖಾನೆ ಸ್ಥಾಪಿಸಲಿಲ್ಲ. ಬಂಡವಾಳ ಹೂಡಿಕೆಗೆ ಅವಕಾಶವನ್ನೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿಕೊಟ್ಟಿಲ್ಲ. ಮೋದಿ ಬಹಳ ಸೊಗಸಾಗಿ ಮಾತನಾಡುತ್ತಾರೆ. ಇವತ್ತಿನವರೆಗೆ ಸುಳ್ಳುಗಳನ್ನೇ ಹೇಳಿ ಅವರು ಜನರನ್ನು ತಪ್ಪುದಾರಿಗೆ ಎಳೆದು, ಜನರ ಭಾವನೆ ಕೆರಳಿಸಿ, ಜಾತಿ- ಧರ್ಮದ ಹೆಸರಿನಲ್ಲಿ ದ್ವೇಷ ಹರಿಬಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ಇದನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ಸುಳ್ಳು ಹೇಳುವ ಇಂಥವರನ್ನು ಮತ್ತೆ ನಂಬುತ್ತೀರಾ? ದಯಮಾಡಿ ನಂಬಬೇಡಿ ಎಂದು ಮನವಿ ಮಾಡಿದರು.

ಹಸಿವು ಮುಕ್ತ ರಾಜ್ಯ: ಬಡವರು ಹಸಿವಿನಿಂದ ಮಲಗಬಾರದು, ಕರ್ನಾಟಕ ಹಸಿವು ಮುಕ್ತ ಮಾಡಬೇಕೆಂದು ಹಿಂದೆ ನಮ್ಮ ಸರ್ಕಾರವಿದ್ದಾಗ ಅನ್ನಭಾಗ್ಯದಲ್ಲಿ ೭ ಕೆಜಿ ಅಕ್ಕಿ ಕೊಟ್ಟೆ. ಬಿಜೆಪಿ ಸರ್ಕಾರ ಬಂದಾಗ ಯಡಿಯೂರಪ್ಪ ಅದರಲ್ಲಿ ೨ ಕೆಜಿ ಕಡಿತಗೊಸಿದರು. ಅಧಿಕಾರಕ್ಕೆ ಬಂದ ತಕ್ಷಣವೇ ಕ್ಯಾಬಿನೆಟ್‌ನಲ್ಲಿ ನಿರ್ಧಾರ ಮಾಡಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು. ಆದರೆ ಆಗಲೂ ಹಣ ನೀಡಿದರೂ ಕೇಂದ್ರ ಸರ್ಕಾರದವರು ಅನ್ನಭಾಗ್ಯಕ್ಕೆ ಅಕ್ಕಿ ಕೊಡದೆ ಜನರಿಗೆ ದ್ರೋಹ ಮಾಡಿದರು ಎಂದು ಆಕ್ರೋಶ ಹೊರ ಹಾಕಿದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಆಶೀರ್ವಾದ ಮಾಡಬೇಕು. ನಿಮ್ಮೆಲ್ಲರ ಧ್ವನಿಯಾಗಿ ಕರ್ನಾಟಕದ ಪರವಾಗಿ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ಮಾಡಿಕೊಡಿ. ಈ ಜಿಲ್ಲೆಯ ಜನ ರಾಜಕೀಯವಾಗಿ ಬುದ್ಧಿವಂತರು. ಪ್ರಬುದ್ಧರು. ದೇಶದ ರಾಜಕೀಯ ವಿಶ್ಲೇಷಣೆ ಮಾಡಬಲ್ಲರು. ಕೊಟ್ಟ ಮಾತನ್ನು ಉಳಿಸಿಕೊಂಡಿರುವವರು ಯಾರು, ನೀಡಿರುವ ಭರವಸೆ ಈಡೇರಿಸದ ಪಕ್ಷ ಯಾವುದೆಂದು ಗುರುತಿಸುವ ಸಾಮರ್ಥ್ಯ ನಿಮಗಿದೆ ಎಂದು ಭಾವಿಸಿದ್ದೇನೆ ಎಂದರು.

ಸಮಬಾಳು ನಮ್ಮ ಧ್ಯೇಯ: ಸರ್ವರಿಗೂ ಸಮಪಾಲು ಸಮಬಾಳು ನಮ್ಮ ಧ್ಯೇಯ. ಸಂವಿಧಾನ ರಕ್ಷಣೆಗೆ, ಪ್ರಜಾಪ್ರಭುತ್ವ ಉಳಿಸಲು ಕಾಂಗ್ರೆಸ್ ಬೆಂಬಲಿಸಬೇಕು. ಕಾಂಗ್ರೆಸ್ ಉಳಿಯದಿದ್ದರೆ ನಾವ್ಯಾರೂ ಉಳಿಯಲು ಸಾಧ್ಯವಿಲ್ಲ ಎಂದರು.

ಕ್ಷೇತ್ರದ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಇದೇ ಉತ್ತರ ಕನ್ನಡದವರು. ಮರಾಠ ಹೆಣ್ಣುಮಗಳಿಗೆ ಟಿಕೆಟ್ ಕೊಡಬೇಕೆಂದು ಈ ಬಾರಿ ಅವರಿಗೆ ಟಿಕೆಟ್ ನೀಡಿದ್ದೇವೆ. ಅವರ ಕೈಹಿಡಿದು ತಾವೆಲ್ಲ ಆಶೀರ್ವಾದ ಮಾಡಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ರಾಜ್ಯ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಹಾನಗಲ್ ಶಾಸಕ ಶ್ರೀನಿವಾಸ ಮಾನೆ, ಗುಬ್ಬಿ ಶಾಸಕ ಶ್ರೀನಿವಾಸ, ಕಾರವಾರ ಶಾಸಕ ಸತೀಶ ಸೈಲ್, ಮಾಜಿ ಶಾಸಕ ವಿ.ಎಸ್. ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ, ಐವಾನ್‌ ಡಿಸೋಜಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜ್ಞಾನದೇವ ಗುಡಿಯಾಳ, ಶ್ರೀನಿವಾಸ ಭಟ್ ದಾತ್ರಿ, ಕೃಷ್ಣ ಹಿರೇಹಳ್ಳಿ, ಎಂ.ಎನ್. ದುಂಡಸಿ, ಎಚ್.ಎಂ. ನಾಯ್ಕ, ಧರ್ಮರಾಜ ನಡಗೇರಿ, ಬಸವರಾಜ ನಡುವಿನಮನಿ, ಭಾರತಿ ಮಾಯಣ್ಣವರ, ಶಾರದಾ ರಾಥೋಡ, ವೆಂಕಟೇಶ ಹೆಗಡೆ ಹೊಸಬಾಳೆ ಮುಂತಾದವರು ಉಪಸ್ಥಿತರಿದ್ದರು.