ಸಾರಾಂಶ
ಕಾರವಾರ: ನರೇಂದ್ರ ಮೋದಿ ಅವರು ಶಿರಸಿಗೆ ಬಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಗೇರಿ ಅವರ ಪರವಾಗಿ ಪ್ರಚಾರ ಮಾಡಿರುವುದು ಕಾಗೇರಿ ಅವರಿಗೆ ಭಾರಿ ಬಲ ಬಂದಂತಾಗಿದೆ.
ಲಕ್ಷದಷ್ಟು ಸಂಖ್ಯೆಯಲ್ಲಿ ಭಾರಿ ಜನಸ್ತೋಮ ಸುಡು ಬಿಸಿಲಿನಲ್ಲಿಯೂ ಉತ್ಸಾಹದಿಂದ ಸೇರಿದ್ದಲ್ಲದೆ, ಮೇಲಿಂದ ಮೇಲೆ ಮೋದಿ ಮೋದಿ ಎಂದು ಘೋಷಣೆ ಕೂಗುತ್ತಿದ್ದುದು ಬಿಜೆಪಿಗರಲ್ಲಿ ಉತ್ಸಾಹ ಇಮ್ಮಡಿಸಿತು.ಕಾಗೇರಿ ಸೇರಿದಂತೆ ಬಿಜೆಪಿ ಮುಖಂಡರು ನರೇಂದ್ರ ಮೋದಿ ಅವರ ಸಾಧನೆಗಳನ್ನು ಬಣ್ಣಿಸಿ, ಕೇಂದ್ರ ಸರ್ಕಾರದ ಯೋಜನೆಗಳನ್ನು ಮುಂದಿಟ್ಟುಕೊಂಡೇ ಪ್ರಚಾರ ಆರಂಭಿಸಿದ್ದರು. ಮೋದಿ ವರ್ಚಸ್ಸನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದರು. ಭಾನುವಾರ ಸ್ವತಃ ನರೇಂದ್ರ ಮೋದಿ ಶಿರಸಿಗೆ ಆಗಮಿಸಿ ಕಾಗೇರಿ ಅವರ ಪರವಾಗಿ ಪ್ರಚಾರ ನಡೆಸಿರುವುದು ಬಿಜೆಪಿಯಲ್ಲಿ ಸಂಚಲನವನ್ನು ಹುಟ್ಟಿಸಿದೆ. ಜತೆಗೆ ಕಾಗೇರಿ ಅವರಿಗೆ ಬಲ ಬಂದಂತಾಗಿದೆ.
ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಈ ಎರಡೂ ಪಕ್ಷಗಳಿಗೆ ಅದರದ್ದೇ ಆದ ವೋಟ್ ಬ್ಯಾಂಕ್ ಇದೆ. ಯಾರೇ ಬಂದರೂ ಈ ವೋಟ್ ಗಳು ಅಲುಗಾಡದು. ಆದರೆ ಎರಡೂ ಪಕ್ಷಕ್ಕೆ ಸೇರಿರದ ಲಕ್ಷಾಂತರ ವೋಟುಗಳಿವೆ. ಅಂತಹ ಜನರನ್ನು ಮೋದಿ ಆಕರ್ಷಿಸಿದ್ದಾರೆ ಎನ್ನುವುದು ಬಿಜೆಪಿಗರ ಅಭಿಪ್ರಾಯವಾಗಿದೆ.ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸಲಿದ್ದಾರೆ. ಜಿಲ್ಲೆಯ ಎರಡು ಕಡೆ ಪ್ರಚಾರ ಮಾಡುವ ಮೂಲಕ ಕಾಂಗ್ರೆಸ್ಸಿಗೆ ಬಲ ತುಂಬಲಿದ್ದಾರೆ. ಡಿ.ಕೆ. ಶಿವಕುಮಾರ್ ಸಹ ಆಗಮಿಸಲಿರುವುದು ಕಾಂಗ್ರೆಸ್ಸಿನಲ್ಲಿ ಉತ್ಸಾಹ ಮೂಡಿಸಲಿದೆ.
ಸದ್ಯ ಕಾಂಗ್ರೆಸ್ಸಿನಲ್ಲಿ ಆರ್.ವಿ. ದೇಶಪಾಂಡೆ, ಮಂಕಾಳು ವೈದ್ಯ ಮತ್ತಿತರರು ಚುನಾವಣೆಯ ಸಾರಥ್ಯ ವಹಿಸಿದ್ದಾರೆ. ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಪ್ರಚಾರ ಕಾರ್ಯಕ್ಕೆ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರನ್ನೇ ಅವಲಂಬಿಸಿದ್ದಾರೆ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಆಗಮಿಸುತ್ತಿರುವುದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಸಂತಸಕ್ಕೆ ಕಾರಣವಾಗಲಿದೆ.ಮೇ 7ರಂದು ಚುನಾವಣೆ ನಡೆಯುತ್ತಿರುವುದರಿಂದ ಈಗ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರದ ಭರಾಟೆ ಜೋರಾಗಿದೆ. ಈ ಹಿಂದೆ ಕೇವಲ ಸ್ಥಳೀಯ ಮುಖಂಡರು ಮಾತ್ರ ಪ್ರಚಾರದಲ್ಲಿ ನಿರತರಾಗಿದ್ದರೆ ಈಗ ರಾಷ್ಟ್ರ, ರಾಜ್ಯ ನಾಯಕರು ಆಗಮಿಸಿ ಪ್ರಚಾರಕ್ಕೆ ಚುರುಕು ಮುಟ್ಟಿಸಿದ್ದಾರೆ.ಜನರ ಉತ್ಸಾಹ: ಶಿರಸಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ನಭೂತೋ ಎಂಬಂತಾಗಿದ್ದು, ಕಾರ್ಯಕ್ರಮಕ್ಕೆ ಜನರ ಪ್ರೋತ್ಸಾಹ, ಬೆಂಬಲ ಗಮನಿಸಿದರೆ ದಾಖಲೆಯ ಗೆಲುವು ನಮ್ಮದಾಗಲಿದೆ. ಜೆಡಿಎಸ್‌ನೊಂದಿಗೆ ಎಲ್ಲರೂ ಒಟ್ಟಾಗಿ ಹಾಲುಸಕ್ಕರೆಯ ಫಲವನ್ನು ನೀಡಲಿದ್ದೇವೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.