ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುದೇಶದ ಸ್ಥಿರತೆ, ಅಭ್ಯುದಯ, ಒಗ್ಗಟ್ಟಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬದ್ಧವಾಗಿದ್ದಾರೆ. ಪಹಲ್ಗಾಮ್ ಹತ್ಯೆ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಯಾವ ರೀತಿಯ ಶಿಕ್ಷೆ ಆಗಬೇಕು ಎಂಬುದರ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.ಭಾನುವಾರ ನಗರದ ಸಂಸದರ ಕಚೇರಿಯಲ್ಲಿ ಮುಖಂಡರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಮನ್‌ಕಿ ಬಾತ್ ವೀಕ್ಷಣೆ ಮಾಡಿದ ಸಚಿವರು ನಂತರ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡಿದರು. ದೇಶದ ರಕ್ಷಣೆ ಎಲ್ಲರ ಜವಾಬ್ದಾರಿ. ದೇಶಕ್ಕಿಂತ ದೊಡ್ಡವರು ಯಾರೂ ಇಲ್ಲ, ದೇಶವಿದ್ದರೆ ಮಾತ್ರ ನಾವು ಇರಲು ಸಾಧ್ಯ ಎಂದು ತಿಳಿಸಿದರು. ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರ ಕೃತ್ಯವನ್ನು ಜಗತ್ತೇ ಖಂಡಿಸುತ್ತಿದೆ. ಪಾಕಿಸ್ತಾನ ಪ್ರಚೋದಿತ ಭಯೋತ್ಪಾದಕರಿಗೆ ತಕ್ಕ ಪಾಠ ಕಲಿಸಲು ಭಾರತ ಸರ್ಕಾರ ಸಮರ್ಥವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಮೇಲೆ ಯುದ್ಧ ಬೇಡ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ದೇಶವಾಸಿಗಳೇ ತಕ್ಕಉತ್ತರ ನೀಡುತ್ತಾರೆ. ಪಾಕಿಸ್ತಾನದ ವಿರುದ್ಧ ಪ್ರತಿಕಾರ ಅನ್ನುವುದಕ್ಕಿಂಥಾ ನಮ್ಮ ದೇಶದ ಸಂರಕ್ಷಣೆಗೆ, ಸಾರ್ವಭೌಮತೆ ರಕ್ಷಣೆಗೆ ನಾವೆಲ್ಲಾ ಬದ್ಧರಾಗಿದ್ದೇವೆ ಎಂದರು.
ಸಿದ್ದರಾಮಯ್ಯನವರು ಈ ದೇಶಕ್ಕಿಂತ ದೊಡ್ಡವರಾದರೆ ನಾವೇನೂ ಮಾಡಲಾಗದು. ಸಿದ್ದರಾಮಯ್ಯನವರು ತಾವು ಆಡಿದ ಮಾತಿಗೆ ತಕ್ಕ ಬೆಲೆ ತೆರಬೇಕಾಗುತ್ತದೆ.ಇಂತಹ ಸಂದರ್ಭದಲ್ಲಿ ಮಾತಿನ ಮೇಲೆ ನಿಗಾ ಇಡಬೇಕು, ನಾಲಿಗೆ ಹರಿಬಿಡುವುದು ಸರಿಯಲ್ಲ. ನಮ್ಮದೇಶ ನಡೆದು ಬಂದ ಹಾದಿ ಯಾವ ರೀತಿ ಇದೆ ಅನ್ನೋದನ್ನು ಸಿದ್ದರಾಮಯ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.ಮೋದಿಯವರು ಪ್ರಧಾನಿಯಾದ ಮೇಲೆ ಕಾಶ್ಮೀರದ ಮೇಲಿನ 370ನೇ ವಿಧಿ ತೆಗೆದ ಮೇಲೆ ಅಲ್ಲಿನ ಜನ ಜೀವನ ಸಹಜವಾಗಿತ್ತು. ಪ್ರವಾಸೋದ್ಯಮ ವೃದ್ಧಿಯಾಗಿತ್ತು.ಪ್ರವಾಸೋದ್ಯಮದಿಂದ ಆ ರಾಜ್ಯಕ್ಕೆ 8 ಸಾವಿರ ಕೋಟಿ ರು. ಆದಾಯ ಬಂದಿತ್ತು. ನಮ್ಮ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ ಎಂದು ಸಚಿವ ಸೋಮಣ್ಣ ಹೇಳಿದರು.ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಅನೇಕ ಹಳ್ಳಿಗಳಲ್ಲಿ ಫ್ಲೋರೈಡ್‌ಯುಕ್ತ ನೀರನ್ನು ಕುಡಿಯುವ ಪರಿಸ್ಥಿತಿ ಇದೆ. ಜಿಲಜೀವನ್ ಯೋಜನೆಯಡಿ ಯಾವ ಹಳ್ಳಿಯನ್ನೂ ಬಿಡದೆ ಎಲ್ಲಾ ಊರಿನ ಜನರಿಗೂ ವಿವಿಧ ಹಂತಗಳಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಮಾಸ್ಟರ್ ಪ್ಲಾನ್ ರೂಪಿಸಲಾಗುವುದು ಎಂದರು.ದಿ. 30 ರಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಸವ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಬಸವ ಜಯಂತಿಯನ್ನು ಆಚರಣೆ ಮಾಡಲಾಗುತ್ತಿದ್ದು, ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಸವಣ್ಣನ ಅನುಯಾಯಿಗಳು ಭಾಗಹಿಸಬೇಕು ಎಂದು ಅವರು ಮನವಿ ಮಾಡಿದರು.ಮಾಜಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಸೇರಿದಂತೆ ವಿವಿಧ ಮುಖಂಡರು ಈ ವೇಳೆ ಹಾಜರಿದ್ದರು.