ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಮೋದಿ ಅವರಿಂದ ಜಾಸ್ತಿ ಆಗಿದೆ, ಈ ಕಾರಣಕ್ಕೆ ಅವರಿಗೆ ಭಾರತ ಭಾಗ್ಯ ವಿಧಾತ ಬಿರುದು ನೀಡಿದ್ದೇವೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಸ್ಪಷ್ಟಪಡಿಸಿದ್ದಾರೆ.

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಭಾಗ್ಯವನ್ನು ಬೆಳಗಿದವರು, ಜಾಗತಿಕ ಮಟ್ಟದಲ್ಲಿ ಭಾರತದ ಘನತೆ ಮೋದಿ ಅವರಿಂದ ಜಾಸ್ತಿ ಆಗಿದೆ, ಈ ಕಾರಣಕ್ಕೆ ಅವರಿಗೆ ಭಾರತ ಭಾಗ್ಯ ವಿಧಾತ ಬಿರುದು ನೀಡಿದ್ದೇವೆ ಎಂದು ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಸ್ಪಷ್ಟಪಡಿಸಿದ್ದಾರೆ.

ಪುತ್ತಿಗೆ ಮಠದ ವತಿಯಿಂದ ನಡೆದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿಗೆ ಶ್ರೀಗಳು ಭಾರತ ಭಾಗ್ಯವಿಧಾತ ಬಿರುದು ನೀಡಿ ಸನ್ಮಾನ ಮಾಡಿದ್ದರು. ಈ ಬಿರುದಿನ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಪರ- ವಿರೋಧ ಚರ್ಚೆಯಾಗುತ್ತಿದೆ.ಈ ಬಿರುದು ನೀಡುವ ಮೊದಲು ವಕೀಲರ ಬಳಿಯು ವಿಚಾರ ಮಾಡಿದ್ದೆವು. ಮೋದಿ ಅವರಿಗೆ ಸರಿಯಾಗಿ ಅನ್ವಯವಾಗುತ್ತದೆ ಎಂದು ಈ ಬಿರುದು ಕೊಟ್ಟಿದ್ದೇವೆ. ರಾಮಮಂದಿರ ನಿರ್ಮಾಣ, ಕಾಶ್ಮೀರದ ಸಮಸ್ಯೆಗೆ ಪರಿಹಾರ, ಉಗ್ರಗಾಮಿಗಳಿಗೆ ಸಮರ್ಥ ಪ್ರತ್ಯುತ್ತರ, ದೇಶ ರಕ್ಷಣೆ, ಪ್ರಬಲ ಆರ್ಥಿಕತೆ ಇತ್ಯಾದಿಗಳ ಮೂಲಕ ಮೋದಿ ಅವರು ದೇಶಕ್ಕೆ ನೀಡಿದ ಕೊಡುಗೆ ಮಹತ್ವದ್ದು, ಅವರು ಭಾರತದ ಭಾಗ್ಯದ ಬಾಗಿಲನ್ನು ತೆರೆದಿದ್ದಾರೆ ಎಂಬುದು ನಮ್ಮ ಭಾವನೆ ಎಂದು ಶ್ರೀಗಳು ಹೇಳಿದ್ದಾರೆ.ನಾನು 25 ವರ್ಷಗಳಿಂದ ವಿಶ್ವ ಸಂಚಾರ ಮಾಡುತ್ತಿದ್ದೇನೆ, ಮೋದಿ ಅವರು ಪ್ರದಾನಿಯಾಗಿ ವಿಶ್ವ ನಾಯಕರಾಗಿ ಗುರುತಿಸಿಕೊಂಡಿದ್ದಾರೆ, ವಿದೇಶಗಳಲ್ಲಿ ಅವರಿಂದಾಗಿ ಭಾರತದ ಗೌರವ ಹೆಚ್ಚಾಗಿದೆ, ವಿದೇಶದವರು ಭಾರತವನ್ನು ನೋಡುವ ದೃಷ್ಟಿಯ ಬದಲಾಗಿದೆ. ಆದ್ದರಿಂದ ಅರ್ಹವಾಗಿದೆ ಅವರಿಗೆ ಈ ಬಿರುದು ನೀಡಿದ್ದೇವೆ ಎಂದು ಶ್ರೀಗಳು ಹೇಳಿದ್ದಾರೆ.