ಸದನದಲ್ಲಿ ಮೋದಿ, ಜನರ ಸಮಸ್ಯೆ ಬಗ್ಗೆ ಮಾತನಾಡಿಲ್ಲ: ಸಹಕಾರ ಸಚಿವ ಕೆ.ಎನ್.ರಾಜಣ್ಣ

| Published : Mar 25 2024, 12:57 AM IST

ಸದನದಲ್ಲಿ ಮೋದಿ, ಜನರ ಸಮಸ್ಯೆ ಬಗ್ಗೆ ಮಾತನಾಡಿಲ್ಲ: ಸಹಕಾರ ಸಚಿವ ಕೆ.ಎನ್.ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಿಟಿಷರ ವಿರುದ್ಧದ ಯುದ್ದದಲ್ಲಿ ಸೋತು,ಯುದ್ದದ ಖರ್ಚಿಗಾಗಿ ತನ್ನ ಎರಡು ಮಕ್ಕಳನ್ನು ಒತ್ತೆ ಇಟ್ಟ ಇಡೀ ವಿಶ್ವದ ಏಕೈಕ ಸ್ವಾತಂತ್ರ ಸೇನಾನಿ ಟಿಪ್ಪು, ಕನ್ನಂಬಾಡಿ ಕಟ್ಟೆಯ ಸೃಷ್ಟಿಕರ್ತ, ಈ ನಾಡಿಗೆ ರೇಷ್ಮೆ ಬೆಳೆ ಪರಿಚಯಿಸಿದವ, ಶೃಂಗೇರಿ ಸೇರಿದಂತೆ ಹಲವು ದೇವಾಲಯಗಳ ಮೇಲೆ ದೇಶದ ಬೇರೆ ಬೇರೆ ಸಂಸ್ಥಾನಗಳ ರಾಜರು ದಾಳಿ ಮಾಡಿದ ಸಂದರ್ಭದಲ್ಲಿ ಅವುಗಳಿಗೆ ರಕ್ಷಣೆ ಒದಗಿಸಿದವ ಟಿಪ್ಪು ಸುಲ್ತಾನ. ಅಧಿಕಾರಕೋಸ್ಕರ ಇತಿಹಾಸವನ್ನೇ ಮರೆ ಮಾಚಲು ಹೊರಟವರಿಗೆ ಸರಿಯಾದ ಬುದ್ದಿ ಕಲಿಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಸಾರ್ವಜನಿಕ ವೇದಿಕೆಗಳನ್ನು ಹೊರತು ಪಡಿಸಿದರೆ ಸದನದಲ್ಲಿ ಈ ದೇಶದ ಜನರ ಸಮಸ್ಯೆಗಳ ಕುರಿತು ಪ್ರಧಾನಿ ಮಾತನಾಡಿದ ಉದಾಹರಣೆಯಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.

ನಗರದ ಸ್ಟಾರ್ ಪ್ಯಾಲೇಸ್‌ನಲ್ಲಿ ತುಮಕೂರು ನಗರ ಬ್ಲಾಕ್ 1 ಮತ್ತು ಬ್ಲಾಕ್ 2 ಕಾಂಗ್ರೆಸ್ ಮುಖಂಡರ ಪ್ರಚಾರಾಂದೋಲನ ಸಭೆಯಲ್ಲಿ ಅವರು ಮಾತನಾಡಿದರು.

ವಾಡಿಕೆ ಎಂಬಂತೆ ರಾಷ್ಟ್ರಪತಿಗಳ ಭಾಷಣದ ಮೇಲೆ ವರ್ಷಕ್ಕೊಮ್ಮೆ ಮಾತನಾಡುವ ಶಾಸ್ತ್ರ ಮಾಡುತ್ತಾರೆ. ಇಂತಹ ಪ್ರಧಾನಿಯನ್ನು ಮತ್ತೊಮ್ಮೆ ಆಯ್ಕೆ ಮಾಡುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು.

ನಮ್ಮದು ಬಡವರು,ದಲಿತರು,ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಪರ ಆಡಳಿತ. ಈ ಹಿಂದೆ ಟಿಪ್ಪು ಜಯಂತಿಯನ್ನು ಆರಂಭಿಸಿದಾಗ ಅದನ್ನು ವಿರೋಧಿಸಿದ್ದ ಬಿಜೆಪಿ ಏನೆಲ್ಲಾ ಅವಾಂತರಗಳನ್ನು ಸೃಷ್ಟಿಸಿತ್ತು ಎಂಬುದನ್ನು ನಾವೆಲ್ಲರೂ ಮತ್ತೊಮ್ಮೆ ನೆನಪಿಸಿಕೊಳ್ಳಬೇಕಿದೆ. ಬ್ರಿಟಿಷರ ವಿರುದ್ಧದ ಯುದ್ದದಲ್ಲಿ ಸೋತು,ಯುದ್ದದ ಖರ್ಚಿಗಾಗಿ ತನ್ನ ಎರಡು ಮಕ್ಕಳನ್ನು ಒತ್ತೆ ಇಟ್ಟ ಇಡೀ ವಿಶ್ವದ ಏಕೈಕ ಸ್ವಾತಂತ್ರ ಸೇನಾನಿ ಟಿಪ್ಪು, ಕನ್ನಂಬಾಡಿ ಕಟ್ಟೆಯ ಸೃಷ್ಟಿಕರ್ತ, ಈ ನಾಡಿಗೆ ರೇಷ್ಮೆ ಬೆಳೆ ಪರಿಚಯಿಸಿದವ, ಶೃಂಗೇರಿ ಸೇರಿದಂತೆ ಹಲವು ದೇವಾಲಯಗಳ ಮೇಲೆ ದೇಶದ ಬೇರೆ ಬೇರೆ ಸಂಸ್ಥಾನಗಳ ರಾಜರು ದಾಳಿ ಮಾಡಿದ ಸಂದರ್ಭದಲ್ಲಿ ಅವುಗಳಿಗೆ ರಕ್ಷಣೆ ಒದಗಿಸಿದವ ಟಿಪ್ಪು ಸುಲ್ತಾನ. ಅಧಿಕಾರಕೋಸ್ಕರ ಇತಿಹಾಸವನ್ನೇ ಮರೆ ಮಾಚಲು ಹೊರಟವರಿಗೆ ಸರಿಯಾದ ಬುದ್ದಿ ಕಲಿಸಬೇಕಾಗಿದೆ ಎಂದು ಕೆ.ಎನ್.ರಾಜಣ್ಣ ತಿಳಿಸಿದರು.

ತುಮಕೂರು ಜಿಲ್ಲಾ ರಾಜಕೀಯ ಇತಿಹಾಸದಲ್ಲಿಯೇ ತುಮಕೂರಿನ ಹೊರಗಿನವರು ಗೆದ್ದ ಇತಿಹಾಸವಿಲ್ಲ. ಎ.ಕೃಷ್ಣಪ್ಪ, ಮಾಜಿ ಪ್ರಧಾನಿ ದೇವೇಗೌಡರನ್ನೇ ಮನೆಗೆ ಕಳುಹಿಸಿದ ಸ್ವಾಭಿಮಾನಿ ಮತದಾರರು ತುಮಕೂರಿನ ಜನ. ಹಾಗಾಗಿ ಶಾಸಕರಾಗಿ, ಸಂಸದರಾಗಿ ಜಿಲ್ಲೆಯ ಸಮಸ್ಯೆಗಳ ಕುರಿತು ಅಧಿವೇಶನಗಳಲ್ಲಿ ಸಮರ್ಥವಾಗಿ ಚರ್ಚೆ ಮಾಡಿ ಜಿಲ್ಲೆಯ ಮಾನ, ಮರ್ಯಾದೆ ಕಾಪಾಡಿದ ಮುದ್ದಹನುಮೇಗೌಡರನ್ನು ಗೆಲ್ಲಿಸುವ ಮೂಲಕ ಮತದಾರರ ಸ್ವಾಭಿಮಾನದ ಜೊತೆಗೆ, ಕಾಂಗ್ರೆಸ್ ಮುಖಂಡರ ಮಾರ್ಯಾದೆಯನ್ನು ಮತದಾರರು ಉಳಿಸಬೇಕೆಂದು ಕೆ.ಎನ್.ರಾಜಣ್ಣ ಮನವಿ ಮಾಡಿದರು.

ಮಾಜಿ ಸಂಸದ ಹಾಗೂ ಹಾಲಿ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಕೆಲ ಸಣ್ಣ ಪುಟ್ಟ ಗೊಂದಲಗಳಿಂದ ಕಾಂಗ್ರೆಸ್ ಪಕ್ಷ ತೊರೆದಿದ್ದು, ಇದಕ್ಕಾಗಿ ಈಗಾಗಲೇ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆಗೊಂಡ ದಿನವೇ ಬಹಿರಂಗ ಕ್ಷಮೆ ಕೇಳಿದ್ದೇನೆ. ನಾನು ಮೂರು ಬಾರಿ ಶಾಸಕ, ಒಂದು ಬಾರಿ ಸಂಸದನಾಗಿರುವುದು ಕಾಂಗ್ರೆಸ್ ಪಕ್ಷದಿಂದಲೇ. ನಾನು ನಾಮಕಾವಸ್ಥೆ ಸಂಸದನಾಗಿ ಕೆಲಸ ಮಾಡಿಲ್ಲ. ನೀವು ಕೊಟ್ಟ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ ಎಂದರು.

ಶಾಸಕ ಹಾಗೂ ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಮಾತನಾಡಿದರು. ವೇದಿಕೆಯಲ್ಲಿ ಶಾಸಕ ವಿ.ವೆಂಕಟೇಶ್, ಮಾಜಿ ಶಾಸಕರಾದ ಎಸ್.ಷಪಿ ಅಹಮದ್, ಡಾ.ರಫೀಕ್ ಅಹಮದ್, ಗಂಗಹನುಮಯ್ಯ,ಇಕ್ಬಾಲ್ ಅಹಮದ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮುರುಳೀಧರ ಹಾಲಪ್ಪ, ನಿಖೇತರಾಜ್ ಮೌರ್ಯ, ಸುಲ್ತಾನ್ ಮೊಹಮದ್, ಅಸ್ಲಾಂಪಾಷ, ರಾಮಕೃಷ್ಣ, ಗೀತಾರಾಜಣ್ಣ, ಮಾಜಿ ಮೇಯರ್‌ಗಳಾದ ಫರೀದಾ ಬೇಗಂ,ಪ್ರಭಾವತಿ,ರೂಪಾ,ಗೀತಾ ರುದ್ರೇಶ್, ನಯಾಜ್ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಫಯಾಜ್,ಹಫೀಜ್ ಸೇರಿ ಹಲವಾರು ಮುಖಂಡರು ಉಪಸ್ಥಿತರಿದ್ದರು.

ಕೋಮು ಸೃಷ್ಟಿಸುವ ಬಿಜೆಪಿಯಿಂದ ಶಾಂತಿ ನೆಲೆಸದು: ಗೃಹಸಚಿವ

ಗೃಹ ಸಚಿವರ ಡಾ.ಜಿ.ಪರಮೇಶ್ವರ್ ಮಾತನಾಡಿ, ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಎಸ್.ಪಿ.ಮದ್ದಹನುಮೇಗೌಡರು,ದೆಹಲಿಯ ಸೌತ್ ಬ್ಲಾಕ್ ಮನೆಗಷ್ಟೇ ಸಿಮೀತವಾಗಿಲ್ಲ. ಜಿಲ್ಲೆಯನ್ನು ಸಮರ್ಥವಾಗಿ ಪ್ರತಿನಿಧಿಸಿದ್ದಾರೆ. ಎಲ್ಲರ ಕೈಗೆಟುವ ಸಂಸದರಾಗಿದ್ದಾರೆ. ನಮ್ಮದು ಜಾತ್ಯಾತೀತ ತಳಹದಿಯ ಮೇಲೆ ನಿಂತಿರುವ ಪ್ರಜಾಪ್ರಭುತ್ವ ಭಾರತ. ಇದು ಉಳಿಯಬೇಕಾದರೆ ನಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಿದೆ. ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವ ಹಿಂದೂ, ಮುಸ್ಲಿಂ ಹೆಸರಿನಲ್ಲಿ ಕೋಮು ಗಲಭೆ ಸೃಷ್ಟಿಸುವ ಬಿಜೆಪಿಯಿಂದ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದರು.