ವಿಕಸಿತ ಭಾರತಕ್ಕಾಗಿ ಮೂರನೇ ಬಾರಿ ಮೋದಿ ಪ್ರಧಾನಿಯಾಗಿ ಆಯ್ಕೆ: ಬಿ.ವೈ ರಾಘವೇಂದ್ರ

| Published : Jun 20 2024, 01:03 AM IST

ವಿಕಸಿತ ಭಾರತಕ್ಕಾಗಿ ಮೂರನೇ ಬಾರಿ ಮೋದಿ ಪ್ರಧಾನಿಯಾಗಿ ಆಯ್ಕೆ: ಬಿ.ವೈ ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ರಟ್ಟೀಹಳ್ಳಿ ತಾಲೂಕಿನ ಮಾಸೂರ ಗ್ರಾಮದ ಜಗಜ್ಯೋತಿ ಸಾಂಸ್ಕೃತಿಕ ಭವನದಲ್ಲಿ ನೂತನ ಸಂಸದರಾದ ಬಿ.ವೈ. ರಾಘವೇಂದ್ರ ಹಾಗೂ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ರಟ್ಟೀಹಳ್ಳಿ

ವಿಕಸಿತ ಭಾರತಕ್ಕಾಗಿ, ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ವಿಶ್ವಮಟ್ಟದಲ್ಲಿ ಭಾರತದ ಕೀರ್ತಿ ಹಾಗೂ ಸರ್ವಾಂಗೀಣ ಅಭಿವೃದ್ದಿಯ ದೃಷ್ಟಿಯಿಂದ ಬಿಜೆಪಿಗೆ ಮತ ನೀಡುವ ಮೂಲಕ ರಟ್ಟೀಹಳ್ಳಿ, ಹಿರೇಕೆರೂರ ತಾಲೂಕಿನ ಮತದಾರರು ಪ್ರಬುದ್ಧತೆ ಮೆರೆದಿದ್ದಾರೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ನೂತನ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ತಾಲೂಕಿನ ಮಾಸೂರ ಗ್ರಾಮದ ಜಗಜ್ಯೋತಿ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಲಾಗಿದ್ದ ಹಾವೇರಿ-ಗದಗ ಹಾಗೂ ಶಿವಮೊಗ್ಗ ಲೋಕಸಭಾ ನೂತನ ಸಂಸದರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿರೋಧಿಗಳು ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ ಹಾಗೂ ಶಿವಮೊಗ್ಗದಲ್ಲಿ ನನ್ನನ್ನು ಕಟ್ಟಿ ಹಾಕಲು ನೂರೆಂಟು ಷಡ್ಯಂತ್ರಗಳನ್ನು ಮಾಡಿದರೂ ಮತದಾರರು ಕಾಂಗ್ರೆಸ್‌ನ ಬಿಟ್ಟಿ ಭಾಗ್ಯಗಳಿಗೆ ಮಣೆ ಹಾಕದೇ ಕೇವಲ ಅಭಿವೃದ್ಧಿಯ ಹಿತ ದೃಷ್ಟಿಯಿಂದ ಬಿಜೆಪಿಗೆ ಮತ ನೀಡಿದ್ದಾರೆ. ಸರ್ವಾಂಗೀಣ ಅಭಿವೃದ್ಧಿ ಪಡಿಸುವ ಮೂಲಕ ತಮ್ಮ ಋಣ ತೀರಿಸುತ್ತೇನೆ ಎಂದು ಹೇಳಿದರು.

ಕೇವಲ ಬಿಟ್ಟಿ ಭಾಗ್ಯಗಳಿಗೆ ಹಣ ಹೊಂದಿಸಲು ಅಗತ್ಯ ವಸ್ತುಗಳ ಬೆಲೆಯೇರಿಸಲಾಗಿದೆ. ಸರಕಾರದ ಬೊಕ್ಕಸವನ್ನು ಖಾಲಿ ಮಾಡಿ ರಾಜ್ಯವನ್ನು ದೀವಾಳಿತನಕ್ಕೆ ನೂಕಿದ ಸಿದ್ದರಾಮಯ್ಯನವರ ಸರಕಾರ ಇನ್ನೇನು ಹೆಚ್ಚು ದಿನ ಉಳಿಯುವುದಿಲ್ಲ. ಸದ್ಯದರಲ್ಲೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದರೂ ಅಚ್ಚರಿ ಪಡುವಂತಿಲ್ಲ ಎಂದು ಭವಿಷ್ಯ ನುಡಿದರು.

ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಬಿಟ್ಟಿ ಭಾಗ್ಯಗಳಿಗೆ ಹಣ ಹೊಂದಿಸಲು ಪೆಟ್ರೋಲ್ ₹3, ಡೀಸೆಲ್ ₹3.50 ಪೈಸೆ ಹೆಚ್ಚು ಮಾಡಿದ ಪರಿಣಾಮ ನೇರವಾಗಿ ಸಾಮಾನ್ಯ ವರ್ಗದ ಜನ ಹಾಗೂ ರೈತರ ಮೇಲೆ ಬರೆ ಎಳೆದಂತಾಗಿದೆ. ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ, ಎಸ್ಸಿ, ಎಸ್ಟಿ ನಿಗಮದ ₹180 ಕೋಟಿ ಹಣದ ಅಕ್ರಮ ವರ್ಗಾವಣೆ ನಡೆದಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಅಭಿವೃದ್ದಿ ಕಾರ್ಯಗಳು ನಿಂತುಹೋದ ಪರಿಣಾಮ ಕಾಂಗ್ರೆಸ್ ಶಾಸಕರು, ಸಚಿವರು ತಮ್ಮ ಕ್ಷೇತ್ರದ ಮತದಾರರಿಗೆ ಮುಖ ತೋರಿಸದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ನೂತನ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಲೋಕಸಭಾ ಚುನಾವಣೆ ಗೆಲುವಿನ ಹುಮ್ಮಸ್ಸಿನಿಂದ ಮೈಮರೆಯದೆ ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಎದುರಿಸಲು ಈಗಿನಿಂದಲೇ ಪಕ್ಷ ಸಂಘಟನೆ ಮಾಡುವ ಮೂಲಕ ಬೇರು ಮಟ್ಟದಿಂದ ಬಿಜೆಪಿ ಭದ್ರ ಪಡಿಸಿ ಎಲ್ಲ ಸ್ಥಳೀಯ ಚುನಾವಣೆಗಳಲ್ಲಿ ಕಮಲವನ್ನು ಅರಳಿಸುವ ಮೂಲಕ ಹಾವೇರಿ ಜಿಲ್ಲೆಯನ್ನು ಬಿಜೆಪಿಯ ಭದ್ರಕೋಟೆ ಎಂದು ಸಾಬೀತು ಪಡಿಸಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ, ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರ ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ ಇರುವ ಕಾರಣ ನಮ್ಮ ತಾಲೂಕಿಗೆ ಇಬ್ಬರು ಸಂಸದರು ಎಂಬ ಮನೋಭಾವ ನಮ್ಮದು. ಇಬ್ಬರು ಸಂಸದರಿಂದ ಎರಡೂ ತಾಲೂಕಿನ ಅಭಿವೃದ್ಧಿಗೆ ಇನ್ನಷ್ಟು ಭರವಸೆಯನ್ನು ಹೆಚ್ಚಿಸಿದೆ. ಅದೇ ರೀತಿ ಕೇಂದ್ರ ಸರಕಾರದ ಅನುದಾನಗಳ ಸದುಪಯೋಗವನ್ನು ರಾಘವೇಂದ್ರ ಅವರನ್ನು ನೋಡಿ ಕಲಿಯುವುದು ತುಂಬ ಇದೆ. ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಸರಕಾರದಿಂದ ಆಗುಂಬೆ ಸುರಂಗ ಮಾರ್ಗಕ್ಕೆ ಮೂರು ಸಾವಿರ ಕೋಟಿ ಹಣ ಮಂಜೂರು, ರಾಣಿಬೆನ್ನೂರ, ರಟ್ಟೀಹಳ್ಳಿ, ಶಿವಮೊಗ್ಗ ರೈಲ್ವೆ ಯೋಜನೆ, ರಟ್ಟೀಹಳ್ಳಿ ನ್ಯಾಷನಲ್ ಹೈವೆ ನಿರ್ಮಾಣ ಸೇರಿದಂತೆ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ತಂದು ಅದನ್ನು ಸಮರ್ಪಕವಾಗಿ ಬಳಕೆ ಮಾಡುವ ಮೂಲಕ ಮಾದರಿ ಸಂಸದರಾಗಿ ಹೊರಹೊಮ್ಮಿದ್ದಾರೆ ಎಂದು ಸಂತಸ ವ್ಯಕ್ತ ಪಡಿಸಿದರು.

ಇದೇ ಸಂದರ್ಭದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಶಿವರಾಜ ಸಜ್ಜನ, ಪಾಲಕ್ಷಗೌಡ ಪಾಟೀಲ್, ರವಿಸಿದ್ದಣ್ಣ ದ್ಯಾವಣ್ಣನವರ, ಎಸ್.ಎಸ್. ಪಾಟೀಲ್, ಸೃಷ್ಟಿ ಪಾಟೀಲ್, ಬಿ.ಎನ್. ಬಣಕಾರ, ನಾಗರಾಜ ಚಳಗೇರಿ, ಆರ್.ಎನ್. ಗಂಗೋಳ, ಸಿದ್ದರಾಜ ಕಲಕೋಟಿ, ದೇವರಾಜ ನಾಗಣ್ಣನವರ, ಶಿವಕುಮಾರ ತಿಪ್ಪಶೆಟ್ಟಿ, ಶಂಕರಗೌಡ ಚನ್ನಗೌಡ್ರ, ವೀರನಗೌಡ ಮಕರಿ, ಹನುಮಂತಪ್ಪ ಗಾಜೇರ ಮುಂತಾದವರು ಇದ್ದರು.

ಪೆಟ್ರೋಲ್‌ ಬೆಲೆಯೇರಿಸಿ ಕಾಂಗ್ರೆಸ್‌ನಿಂದ ಸೇಡು

ರಟ್ಟೀಹಳ್ಳಿ: ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆಯಂತೆ ಜನರು ಮತ ಹಾಕಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ಸಿನವರು ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮಾಡಿ ಮತದಾರರ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.ತಾಲೂಕಿನ ಮಾಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನವರಿಗೆ ಲೋಕಸಭೆಯಲ್ಲಿ 20 ಸೀಟ್ ಗೆಲ್ಲುವ ನಿರೀಕ್ಷೆ ಇತ್ತು. ಆದರೆ, ಜನರು ಕಾಂಗ್ರೆಸ್‌ನ ದುರಾಡಳಿತದಿಂದ ಬೇಸತ್ತು ಮತ ಹಾಕಲಿಲ್ಲ. ಅದಕ್ಕಾಗಿ ರಾಜ್ಯ ಸರ್ಕಾರ ಜನರ ಮೇಲೆ ಸೇಡು ತೀರಿಸಿಕೊಳ್ಳುತ್ತಿದೆ. ಸರ್ಕಾರ ನಡೆಸಲು ಅವರಿಂದ ಆಗುತ್ತಿಲ್ಲ. ಅಭಿವೃದ್ಧಿಗೆ ಅನುದಾನ ನೀಡದ್ದರಿಂದ ಕಾಂಗ್ರೆಸ್‌ ಶಾಸಕರೇ ಬೇಸತ್ತು ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಜನರು ಉತ್ತರ ಕೊಡುತ್ತಾರೆ ಎಂದು ಹೇಳಿದರು.ರಾಜ್ಯದಲ್ಲಿ ವರ್ಷದೊಳಗೆ ಚುನಾವಣೆ-ಬೊಮ್ಮಾಯಿ

ಕನ್ನಡಪ್ರಭ ವಾರ್ತೆ ಹಿರೇಕೆರೂರುರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವದ ಗೊಂದಲವಿದೆ. ಒಂದು ವರ್ಷದೊಳಗಾಗಿ ವಿಧಾನಸಭಾ ಚುನಾವಣೆ ನಡೆದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಾಸೂರಿನಲ್ಲಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಮತದಾರರಿಗೆ ಕೃತಜ್ಞತಾ ಸಮಾರಂಭದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಜನರು ಸರ್ಕಾರದ ಮೇಲೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಅದನ್ನು ತೋರಿಸಿದ್ದಾರೆ. ಕಾಂಗ್ರೆಸ್ ಶಾಸಕರು ಹತಾಶರಾಗಿದ್ದಾರೆ. ಮುಖ್ಯಮಂತ್ರಿ ಬಳಿ ಹೋದರೆ ಅವರ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ, ಅವರಿಗೆ ಜನರ ಬಳಿ ಹೋಗಲು ಆಗುತ್ತಿಲ್ಲ. ರಾಜಕಾರಣ ಮತ್ತು ಜನರ ಕಾರಣದಿಂದ ಸರ್ಕಾರದ ಆಯುಷ್ಯ ಬಹಳ ಕಡಿಮೆ ಇದೆ. ಒಂದು ವರ್ಷದಲ್ಲಿ ವಿಧಾನಸಭೆ‌ ಚುನಾವಣೆ ನಡೆದು ಹೊಸ ಸರ್ಕಾರ ಬರಲಿದೆ. ಈ ಬಾರಿ ಸರ್ಕಾರವನ್ನು ಜನರೇ ಆಪರೇಷನ್ ಮಾಡುತ್ತಾರೆ ಎಂದು ಹೇಳಿದರು.