ತುಘಲಕ್ ದರ್ಬಾರ ನೆನಪಿಸಿದ ಮೋದಿ ಅವಧಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ

| Published : Apr 30 2024, 02:09 AM IST

ತುಘಲಕ್ ದರ್ಬಾರ ನೆನಪಿಸಿದ ಮೋದಿ ಅವಧಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಸೊರಬ ಪಟ್ಟಣದ ಬಂಗಾರಧಾಮದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಲೋಕಸಭಾ ಚುನಾವಣೆಯ ಹಿನ್ನೆಲೆ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸೊರಬ

ರಾಷ್ಟ್ರದ ೧೪೦ ಕೋಟಿ ಜನರನ್ನು ಪ್ರತಿನಿಧಿಸುವ ಪ್ರಧಾನಿ ನರೇಂದ್ರ ಮೋದಿ, ಕಳೆದ ೧೦ ವರ್ಷಗಳ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡದೇ ೮೦೦ ವರ್ಷಗಳ ಹಿಂದಿನ ತುಘಲಕ್ ದರ್ಬಾರಿನ ಆಡಳಿತ ನೆನಪಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಹೇಳಿದರು.

ಸೋಮವಾರ ಪಟ್ಟಣದ ಬಂಗಾರಧಾಮದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದರು.

ಬಿಜೆಪಿಗೆ ಕೇವಲ ೬೦ ತಿಂಗಳು ಅಧಿಕಾರ ನೀಡಿ, ರಾಷ್ಟ್ರ ಬಲಿಷ್ಟವಾಗಿ ಕಟ್ಟುತ್ತೇನೆ. ಅಭಿವೃದ್ಧಿ ಮಹಾಪೂರವನ್ನೇ ಹರಿಸುತ್ತೇನೆ. ಭ್ರಷ್ಟತೆ ತೊಲಗಿಸುತ್ತೇನೆ. ಮತ್ತು ದೇಶದಲ್ಲಿನ ಕಪ್ಪು ಹಣ ತಂದು ಬಡವರಿಗೆ ಹಂಚುತ್ತೇನೆ ಎಂದು ಜನತೆ ಎದುರು ವಾಗ್ದಾನ ಮಾಡಿದ್ದ ನರೇಂದ್ರ ಮೋದಿ, ಅಧಿಕಾರಕ್ಕೆ ಬಂದು ೧೦ ವರ್ಷಗಳು ಕಳೆದಿವೆ. ಆದರೆ ಯಾವ ಅಭಿವೃದ್ಧಿ ಮಾಡಿದ್ದಾರೆ. ಪೆಟ್ರೋಲ್, ಸಿಲಿಂಡರ್ ಬೆಲೆ ಏರಿಕೆಯಾಗಿದೆ. ವಶಪಡಿಸಿಕೊಂಡು ಕಪ್ಪು ಹಣ ಎಲ್ಲಿದೆ ಎನ್ನುವ ಲೆಕ್ಕ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು. ದೇಶದ ಜನರಲ್ಲಿ ಮತೀಯ ಭಾವನೆ ಕೆರಳಿಸಿ, ಮನುಷ್ಯ ಸಂಬಂಧಗಳ ನಡುವೆ ದ್ವೇಷದ ಕಿಚ್ಚು ಹಚ್ಚುವ ಮೂಲಕ ಮತದಾರರ ಗಮನ ಬೇರೆಡೆಗೆ ಸೆಳೆಯುವಂತೆ ಮಾಡುತ್ತಿದ್ದಾರೆ. ೨೦೪೭ಕ್ಕೆ ದೇಶ ವಿಕಾಸ ಮಾಡುತ್ತೇನೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.

ದ್ವೇಷದ ರಾಜಕಾರಣ ನಡೆಸುವ ಮೋದಿ ಒಂದು ಪಕ್ಷ ಒಬ್ಬ ನಾಯಕ ಎನ್ನುವ ಪಾಲಿಸಿಯಲ್ಲಿದ್ದಾರೆ. ಈ ಕಾರಣದಿಂದ ಅಬಕಾರಿ ನೀತಿ ಸರಿ ಇಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜೈಲಿಗೆ ಅಟ್ಟಿದ್ದಾರೆ. ಆದರೆ ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ ನೀತಿ ಉತ್ತಮವಾಗಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ಆದ್ದರಿಂದ ಪ್ರಧಾನಿ ಮೋದಿ ಅವರನ್ನು ಯಾವ ಜೈಲಿಗೆ ಕಳುಹಿಸಬೇಕು ಎಂದು ಪ್ರಶ್ನಸಿದ ಅವರು, ಕಾಂಗ್ರೆಸ್ ಭ್ರಷ್ಟತೆ ಬಗ್ಗೆ ಮಾತನಾಡುವ ಮೋದಿ ಭ್ರಷ್ಟರ ಸಾಲಿನಲ್ಲಿರುವ ಅಜಿತ್ ಪವಾರ್, ಪ್ರಫುಲ್ ಪಾಟೀಲ್ ಮೊದಲಾದವರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಮತದಾನಕ್ಕೂ ಮೊದಲು ೪೦೦ ಸ್ಥಾನ ಪಡೆದು ಮೋದಿ ಮತ್ತೆ ಪ್ರಧಾನಿ ಆಗುತ್ತೇನೆ ಎಂದು ಹೇಳುತ್ತಿದ್ದ ಬಿಜೆಪಿಯವರು, ದೇಶದ ೧೧೧ ಕ್ಷೇತ್ರಗಳಲ್ಲಿ ಈಗಾಗಲೇ ನಡೆದ ಚುನಾವಣೆಯ ಇಂಡಿಯಾ ಕೂಟಕ್ಕೆ ಅಭೂತಪೂರ್ವ ಜನಬೆಂಬಲ ವ್ಯಕ್ತವಾದ ಹಿನ್ನೆಲೆ ಮನಸ್ಥಿತಿ ಕಳೆದುಕೊಂಡಿರುವ ಬಿಜೆಪಿಗರು ಮತ್ತು ಪ್ರಧಾನಿ, ಅಂಬೇಡ್ಕರ್ ಸಂವಿಧಾನ, ಓಬಿಸಿ, ಮುಸ್ಲಿಂ ಮೀಸಲಾತಿ ಬಗ್ಗೆ ಮಾತನಾಡುವ ಮೂಲಕ ಮತದಾರರ ಗಮನ ಬೇರೆಡೆಗೆ ಸೆಳೆಯುವ ಯತ್ನ ಮಾಡುತ್ತಿದ್ದಾರೆ. ಆದರೆ ದೇಶದಲ್ಲಿ ೧೫೦ ಸ್ಥಾನ ದಾಟದ ಎನ್‌ಡಿಎ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತದೆ. ರಾಜ್ಯದಲ್ಲಿ ೨೮ ಕ್ಷೇತ್ರಗಳನ್ನೂ ಕಾಂಗ್ರೆಸ್ ಗೆಲ್ಲುತ್ತದೆ. ಶಿವಮೊಗ್ಗದಲ್ಲಿ ಎಸ್.ಬಂಗಾರಪ್ಪ ಪುತ್ರಿ ಗೀತಾ ಅವರು ಸಮಾಜ ಸೇವೆಯಲ್ಲಿ ಎಲೆಮರೆಯ ಕಾಯಾಗಿ ದುಡಿಯುತ್ತಿದ್ದಾರೆ. ತಂದೆ ರಾಜಕೀಯ ಪಟ್ಟು ಬಲ್ಲವರಾಗಿದ್ದಾರೆ. ಹಾಗಾಗಿ ಗೆಲುವು ಶತಸಿದ್ದ ಎಂದು ವಿಶ್ವಾಸವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಸದಾನಂದಗೌಡ ಬಿಳಗಲಿ, ಮುಖಂಡರಾದ ಹೆಚ್. ಗಣಪತಿ, ತಬಲಿ ಬಂಗಾರಪ್ಪ, ಕೆ. ಮಂಜನಾಥ, ರುದ್ರಗೌಡ, ಚಿಕ್ಕಸವಿ ನಾಗರಾಜ, ಶಿವಲಿಂಗೇಗೌಡ, ಲಕ್ಷ್ಮೀಕಾಂತ ಚಿಮಣೂರು, ಸುಜಾತ ಜೋತಾಡಿ, ಪ್ರಭಾಕರ ಶಿಗ್ಗಾ, ರಶೀದ್ ಸಾಬ್, ಬಿಳವಾಣಿ ಸುರೇಶ್, ಎಂ.ಡಿ. ಶೇಖರ್, ಶ್ರೀಕಾಂತ್, ಪ್ರಶಾಂತ್ ಮೇಸ್ತ್ರಿ ಮೊದಲಾದವರು ಹಾಜರಿದ್ದರು.