ಸಾರಾಂಶ
ಕಾರವಾರದ ವ್ಯಕ್ತಿಯೊಬ್ಬ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಲೆಂದು ತನ್ನ ಬೆರಳನ್ನೇ ಕತ್ತರಿಸಿಕೊಂಡು ಅಭಿಮಾನ ಮೆರೆದಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರವಾರ
ಪ್ರಧಾನಿ ನರೇಂದ್ರ ಮೋದಿ ಅವರಿಗಾಗಿ ಏನೆಲ್ಲ ಹರಕೆ, ಪ್ರಾರ್ಥನೆಗಳನ್ನು ಅಭಿಮಾನಿಗಳು ಹೊತ್ತುಕೊಳ್ಳುತ್ತಿದ್ದಾರೆ. ಅದರಲ್ಲೂ ಕಾರವಾರದ ವ್ಯಕ್ತಿಯೊಬ್ಬ ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಲೆಂದು ತನ್ನ ಬೆರಳನ್ನೇ ಕತ್ತರಿಸಿಕೊಂಡು ಅಭಿಮಾನ ಮೆರೆದಿದ್ದಾರೆ.ಮೋದಿ ಕಟ್ಟಾ ಅಭಿಮಾನಿಯಾಗಿರುವ ನಗರದ ಸೋನಾರವಾಡದ ಅರುಣ ವೆರ್ಣೇಕರ ತಮ್ಮ ಎಡಗೈನ ತೋರು ಬೆರಳನ್ನು ಕತ್ತರಿಸಿಕೊಂಡವರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲ್ಲಲಿ ಎಂದು ತಮ್ಮದೆ ರಕ್ತದಲ್ಲಿ ಬರೆದುಕೊಂಡು ಕಾಳಿಮಾತಾ ದೇವರಿಗೆ ಅರ್ಪಿಸಿದ್ದರು. ಈ ಬಾರಿ ಬೆರಳನ್ನು ಕತ್ತರಿಸಿಕೊಂಡು ಕಾಳಿಮಾತಾ ದೇವಿಗೆ ಅರ್ಪಿಸಿದ್ದಾರೆ.
ತಮ್ಮ ಮನೆಯಲ್ಲಿ ನರೇಂದ್ರ ಮೋದಿ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಪ್ರತಿನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮೋದಿ ಅವರ ದೇವಸ್ಥಾನ ಕಟ್ಟುವ ಇಚ್ಛೆಯನ್ನು ಹೊಂದಿದ್ದಾರೆ. ಮೋದಿಗಾಗಿ ಬೆರಳನ್ನು ಕತ್ತರಿಸಿಕೊಂಡಿರುವ ಇವರ ಅಭಿಮಾನಕ್ಕೆ ಜನತೆ ಬೆರಗಾಗಿದ್ದಾರೆ.