ಸಾರಾಂಶ
ನರಸಿಂಹರಾಜಪುರ : ಮೋದಿ ಪ್ರಧಾನಿಯಾದ ಸ್ವಲ್ಪ ದಿನದಲ್ಲೇ ಕಿಸಾನ್ ಸಮ್ಮಾನ ಯೋಜನೆಯಡಿ ಪ್ರತಿ ರೈತರಿಗೆ 2 ಸಾವಿರ ರು.ನಂತೆ 11 ಕೋಟಿ ರೈತರಿಗೆ 20 ಸಾವಿರ ಕೋಟಿ ರು. ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ಶುಕ್ರವಾರ ಅಗ್ರಹಾರದ ಉಮಾ ಮಹೇಶ್ವರ ಸಭಾ ಭವನದಲ್ಲಿ ತಾಲೂಕು ಬಿಜೆಪಿಯಿಂದ ನಡೆದ ಅಭಿನಂದನಾ ಕಾರ್ಯ ಕ್ರಮದಲ್ಲಿ ಮಾತನಾಡಿದರು. ಬತ್ತ ಸೇರಿದಂತೆ ಆಹಾರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದಾರೆ. ಆದರೆ, ಸಿದ್ದರಾಮಯ್ಯ ಸರ್ಕಾರ ಹಾಲಿಗೆ ನೀಡುತ್ತಿದ್ದ ಸಬ್ಸಿಡಿ ಹಣ ನೀಡದೆ ₹ 840 ಕೋಟಿ ಬಾಕಿ ಉಳಿಸಿಕೊಂಡಿದ್ದಾರೆ. ದಲಿತರಿಗೆ ಮೀಸಲಿಟ್ಟ ₹ 25 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗೆ ಬಳಸಲಾಗಿದೆ. ಬಹಳ ದಿನ ಕಾಂಗ್ರೆಸ್ ಸರ್ಕಾರ ಇರುವುದಿಲ್ಲ. ಮದ್ಯಂತರ ಚುನಾವಣೆ ನಡೆದರೂ ಆಶ್ಚರ್ಯವಿಲ್ಲ ಎಂದು ಭವಿಷ್ಯ ನುಡಿದರು.
ಈ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲೂ 20 ಸಾವಿರ ಕ್ಕಿಂತ ಹೆಚ್ಚು ಮತ ಬಿಜೆಪಿ ಪಡೆದಿದೆ. ಉಡುಪಿ ಜಿಲ್ಲೆಯಲ್ಲೂ 2 ಲಕ್ಷಕ್ಕಿಂತ ಹೆಚ್ಚು ಅಂತರ ಪಡೆದಿದ್ದೇವೆ. ಕೇಂದ್ರದಲ್ಲಿ 400 ಸ್ಥಾನ ಗೆಲ್ಲುತ್ತೇವೆ ಎಂಬ ನಿರೀಕ್ಷೆ ಇತ್ತು. ಎನ್.ಡಿ.ಎ.ಅಧಿಕಾರಕ್ಕೆ ಬಂದಿದ್ದು 3 ನೇ ಬಾರಿ ಮೋದಿ ಪ್ರಧಾನಿಯಾಗಿರುವುದು ನಮಗೆ ಹೆಮ್ಮೆಯಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಅಪಪ್ರಚಾರ ಮಾಡಿ ಬಿಜೆಪಿ ಸಂವಿಧಾನ ವಿರೋಧಿ ಎಂಬಂತೆ ಬಿಂಬಿಸಲು ಪ್ರಯತ್ನ ನಡೆಸಿತ್ತು. ಆದರೆ, ಕಾಂಗ್ರೆಸ್ ಪಕ್ಷವೇ ಸಂವಿಧಾನ ವಿರೋಧಿಯಾಗಿದೆ. ಕಾಂಗ್ರೆಸ್ ಭ್ರಷ್ಟಾಚಾರವನ್ನು ಮೈಮೇಲೆ ಎಳೆದುಕೊಂಡಿರುವ ಪಕ್ಷ. ಪ್ರಧಾನಿ ಮೋದಿಯವರು ಭಾರತ ಪ್ರಪಂಚದಲ್ಲೇ ತಲೆ ಎತ್ತಿ ನಿಲ್ಲಬೇಕು ಎಂದು ಬಯಸಿದವರು. ಮೋದಿ ಯುವಕರು, ಮಹಿಳೆಯರು, ಬಡವರು, ರೈತರ ಪರವಾಗಿದ್ದಾರೆ. ಆದರೆ, ಕಾಂಗ್ರೆಸ್ ಜಾತಿ, ಜಾತಿ ನಡುವೆ ಎತ್ತಿ ಕಟ್ಟುವ ಕೆಲಸ ಮಾಡಿದೆ ಎಂದು ಟೀಕಿಸಿದರು.
ಹಿಂದೆ ಲವ್ ಜಿಹಾದ್ ಮಾಡಿದವರೇ ಇಂದು ಚುನಾವಣೆ ಸಮಯದಲ್ಲಿ ಓಟ್ ಜಿಹಾದ್ ಮಾಡಿದ್ದಾರೆ. ಆದ್ದರಿಂದಲೇ ಕಾಂಗ್ರೆಸ್ ಗೆದ್ದಿದೆ. ಓಟ್ ಜಿಹಾದ್ ಎದುರಿಸಲು ದೇಶ ಭಕ್ತಿ. ಹಿಂದುತ್ವದಿಂದ ಮಾತ್ರ ಸಾಧ್ಯ. 496 ವರ್ಷಗಳ ಹಿಂದಿನ ಕನಸನ್ನು ನನಸು ಮಾಡಿದ ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ದಯಾನಂದ ಸರ್ಜಿ ಮಾತನಾಡಿ, ಕಾರ್ಯಕರ್ತರ ಪರಿಶ್ರಮದಿಂದಲೇ ನಾವು ಗೆದ್ದಿದ್ದೇವೆ. ಕಾಂಗ್ರೆಸ್ ಪಕ್ಷ ಕುತಂತ್ರಕ್ಕೆ ಹೆಸರುವಾಸಿಯಾಗಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬರೆದ ಸಂವಿಧಾನವನ್ನು ಕಾಂಗ್ರೆಸ್ ನವರು 106 ಬಾರಿ ತಿದ್ದಿದ್ದಾರೆ. ಆದರೆ, ಮೋದಿ ಸರ್ಕಾರ ಕೇವಲ ಜನರಿಗೆ ಅನುಕೂಲವಾಗಲಿ ಎಂದು 3 ಬಾರಿ ತಿದ್ದುಪಡಿ ಮಾಡಲಾಗಿದೆ. ಮುಂದಿನ ಜಿಲ್ಲಾ , ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷವ ಒಟ್ಟಾಗಿ ಜಯಗಳಿಸಬೇಕು . ಆ ಚುನಾವಣೆ ಕಾರ್ಯಕರ್ತರ ಚುನಾವಣೆಯಾಗಿದೆ ಎಂದರು.
ಮಾಜಿ ಸಚಿವ ಡಿ.ಎನ್.ಜೀವರಾಜ್ ಮಾತನಾಡಿ, ಕೋಟಾ ಶ್ರೀನಿವಾಸ ಪೂಜಾರಿ, ದಯಾನಂದ ಸರ್ಜಿ, ಭೋಜೇಗೌಡ ಚುನಾವಣೆಯಲ್ಲಿ ಗೆದ್ದಿದ್ದಾರೆ. ಸಿ.ಟಿ. ರವಿ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದಾರೆ. ಇಂದು ಸಂಭ್ರಮದ ದಿನ ವಾಗಿದೆ. ಲೋಕ ಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಬಿಜೆಪಿಗೆ ಮತಗಳ ಅಂತರ ಜಾಸ್ತಿಯಾಗಿದೆ. ವಿಧಾನ ಪರಿಷತ್ ಚುನಾವಣೆಯಲ್ಲೂ ನಾವು ಭರ್ಜರಿಯಾಗಿ ಗೆದ್ದಿದ್ದೇವೆ. ಮುಂದಿನ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ನೂತನ ಲೋಕಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರ ಸಹಾಯ ಪಡೆದು ಜಯಗಳಿಸೋಣ. ಬಿಜೆಪಿ ಪಕ್ಷದಲ್ಲಿ ಯುವಕರ ಪಡೆಯೇ ಇದೆ ಎಂದರು.
ಇದೇ ಸಂದರ್ಭದಲ್ಲಿ ಕೋಟಾ ಶ್ರೀನಿವಾಸ್ ಪೂಜಾರಿ, ದಯಾನಂದ ಸರ್ಜಿ, ಸಿ.ಟಿ.ರವಿ ಅವರನ್ನು ಮಾಜಿ ಸಚಿವ ಡಿ.ಎನ್.ಜೀವರಾಜ್ ಹಾಗೂ ಇತರ ಬಿಜೆಪಿ ಪಕ್ಷದ ಮುಖಂಡರು ಅಭಿನಂದಿಸಿದರು. ತಾ.ಬಿಜೆಪಿ ಅಧ್ಯಕ್ಷ ಅರುಣಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ವೆನಿಲ್ಲಾ ಭಾಸ್ಕರ್, ಆಶೀಶ್ ಕುಮಾರ್, ಪುಣ್ಯಪಾಲ್, ಮಾಲತೀಶ್, ಸುರಭಿ ರಾಜೇಂದ್ರ, ರಶ್ಮಿ ದಯಾನಂದ್, ಎಚ್.ಡಿ.ಲೋಕೇಶ್, ಸವಿತ ರತ್ನಾಕರ್, ಪರ್ವೀಜ್, ಪ್ರೀತಂ, ಸಜಿ, ಕೆಸುವೆ ಮಂಜುನಾಥ್,ಎನ್.ಎಂ.ಕಾಂತರಾಜ್ ಇದ್ದರು.