ಸಾರಾಂಶ
ಬಿಜೆಪಿ ಮುಖಂಡರು ಪದೇ ಪದೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಲಿದೆ ಎಂದು ಹೇಳುತ್ತಿದ್ದು, ಇದೀಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬೀಳಲಿದೆ ಎಂಬುದನ್ನು ತಿಳಿದುಕೊಳ್ಳಲಿ ಎಂದು ಸಂತೋಷ ಲಾಡ್ ಟಾಂಗ್ ನೀಡಿದ್ದಾರೆ.
ಧಾರವಾಡ:
ಜಮ್ಮು-ಕಾಶ್ಮಿರ, ಹರಿಯಾಣ, ಮಹಾರಾಷ್ಟ್ರ ರಾಜ್ಯಗಳ ಚುನಾವಣೆ ನಂತರ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಪತನವಾಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಡೆದ ಚುನಾವಣೆ ಸಮೀಕ್ಷೆಗಳು ಬಿಜೆಪಿ ಸೋಲಲಿದೆ ಎಂದು ಹೇಳಿವೆ. ಬಿಜೆಪಿ ಮುಖಂಡರು ಪದೇ ಪದೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಲಿದೆ ಎಂದು ಹೇಳುತ್ತಿದ್ದು, ಇದೀಗ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬೀಳಲಿದೆ ಎಂಬುದನ್ನು ತಿಳಿದುಕೊಳ್ಳಲಿ. ಅದರಲ್ಲೂ ಬಿಜೆಪಿ ಮುಖಂಡ ಸಿ.ಟಿ. ರವಿ ತಿಳಿದುಕೊಳ್ಳಲಿ ಎಂದು ಟಾಂಗ್ ನೀಡಿದರು. ಬಿಜೆಪಿ ಮುಖಂಡರಿಗೆ ಬೇರೆ ಕೆಲಸವಿಲ್ಲ. ಬರೀ ಇಂತಹ ಹೇಳಿಕೆ ನೀಡುತ್ತಿದ್ದು, ಈ ಬಗ್ಗೆ ನಾವು ಗಮನ ಹರಿಸುವುದಿಲ್ಲ ಎಂದರು.
ವಿವಿಧ ಹರಗಣಗಳ ತನಿಖೆಗಳ ಸಮನ್ವಯ ಸಮಿತಿ ರಚಿಸಿದ ಕುರಿತು, ನಾನೂ ಈ ಸಮಿತಿ ಸದಸ್ಯನಾಗಿದ್ದು, ಸಮಿತಿಗೆ ಅಧ್ಯಕ್ಷರಾಗಿ ಡಾ. ಜಿ. ಪರಮೇಶ್ವರ ಹಾಗೂ ಎಚ್.ಕೆ. ಪಾಟೀಲ ಇದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಸಮಿತಿಯಲ್ಲಿ ಏನೇನು ಚರ್ಚೆ ಮಾಡಬೇಕು ಎಂಬುದನ್ನು ತೀರ್ಮಾನಿಸಲಾಗುವುದು. ಬಿಜೆಪಿ ಹಗರಣಗಳ ಬಗ್ಗೆ ತನಿಖೆ ಮಾಡುವ ವಿಚಾರವಾಗಿ ಸಮಿತಿಯು ಎರಡು ತಿಂಗಳಲ್ಲಿ ಸ್ಪಷ್ಟ ಮಾಹಿತಿ ನೀಡಲಿದೆ ಎಂದರು.ಅಮೆರಿಕದಲ್ಲಿ ರಾಹುಲ್ ಗಾಂಧಿ ಹಾಗೂ ಡಿ.ಕೆ. ಶಿವಕುಮಾರ ಭೇಟಿಯಾಗಿದ್ದು, ರಾಜಕಾರಣದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದ ಲಾಡ್, ನಾವು 136 ಶಾಸಕರು ಇದ್ದೇವೆ. ಐದು ವರ್ಷ ಪೂರ್ತಿ ಕೈ ಸರ್ಕಾರ ಆಡಳಿತದಲ್ಲಿ ಇರಲಿದೆ. ಪಕ್ಷದ ಎಲ್ಲ ಶಾಸಕರು, ಸಂಪುಟ ಸಭೆಯ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಇದ್ದಾರೆ. ಅವರ ಬದಲಾವಣೆ ವಿಷಯವನ್ನು ಪದೇ ಪದೇ ಪ್ರಸ್ತಾಪ ಮಾಡಬೇಡಿ ಎಂದರು.