ಮೋದಿ ಸರ್ಕಾರ ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟಿದೆ: ಸಚಿವ ತಂಗಡಗಿ

| Published : Apr 30 2024, 02:00 AM IST

ಮೋದಿ ಸರ್ಕಾರ ಕರ್ನಾಟಕಕ್ಕೆ ಖಾಲಿ ಚೊಂಬು ಕೊಟ್ಟಿದೆ: ಸಚಿವ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಕೇವಲ ಖಾಲಿ ಚೊಂಬು ಕೊಟ್ಟಿದೆ.

ಕನ್ನಡಪ್ರಭ ವಾರ್ತೆ ಕುಷ್ಟಗಿ

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕರ್ನಾಟಕದ ಅಭಿವೃದ್ಧಿಗೆ ಅನುದಾನ ನೀಡಿಲ್ಲ. ಕೇವಲ ಖಾಲಿ ಚೊಂಬು ಕೊಟ್ಟಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಟೀಕಿಸಿದರು.

ಪಟ್ಟಣದ ತಾವರಗೇರಾ ರಸ್ತೆಯಲ್ಲಿರುವ ಟಿಎಪಿಸಿಎಮ್ಎಸ್ ಮೈದಾನದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಕುಷ್ಟಗಿ ಹಾಗೂ ಹನಮಸಾಗರದ ವತಿಯಿಂದ ನಡೆದ ಪ್ರಜಾಧ್ವನಿ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ನರೇಂದ್ರ ಮೋದಿ ಸರ್ಕಾರವು ಹತ್ತು ವರ್ಷ ಆಡಳಿತದಲ್ಲಿ ಕೇವಲ ಸುಳ್ಳುಗಳನ್ನು ಹೇಳುತ್ತಾ ಕಾಲಹರಣ ಮಾಡಿದೆ. ನಮ್ಮ ಕರ್ನಾಟಕದಿಂದ ತೆರಿಗೆಯ ಸಂಗ್ರಹವನ್ನು ಪಡೆದುಕೊಂಡು ಮರಳಿ ನಮ್ಮ ಕರ್ನಾಟಕಕ್ಕೆ ನ್ಯಾಯವಾಗಿ ನೀಡಬೇಕಾದ ಪಾಲು ಕೊಡುತ್ತಿಲ್ಲ. ಇದರಿಂದ ಕರ್ನಾಟಕದಲ್ಲಿ ಯಾವ ಅಭಿವೃದ್ಧಿ ಕಾರ್ಯ ಮಾಡಲು ಆಗುತ್ತಿಲ್ಲ. ನಿಮಗೆ ನಾಚಿಕೆ, ಮಾನ, ಮರ್ಯಾದೆ ಇದ್ದರೆ ಕರ್ನಾಟಕಕ್ಕೆ ಮತವನ್ನು ಕೇಳೋಕೆ ಬರಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಬರಗಾಲ ಬಂದು ರೈತರು ತತ್ತರಿಸುತ್ತಿದ್ದಾರೆ. ₹18 ಸಾವಿರ ಕೋಟಿ ಪರಿಹಾರ ಕೊಡಿ ಎಂದರೆ, ಕೊಟ್ಟಿದ್ದು ಕೇವಲ ₹3400 ಕೋಟಿ. ಅದು ಹೋರಾಟ ಹಾಗೂ ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ. ಇನ್ನುಳಿದ ಹಣ ಕೊಡಬೇಕು, ಇಲ್ಲವಾದರೆ ಮತ್ತೆ ಹೋರಾಟ ಹಾಗೂ ಕೋರ್ಟ್‌ ಮೊರೆ ಹೋಗಬೇಕಾಗುತ್ತದೆ ಎಂದರು.

ಗಂಗಾವತಿಯ ಶಾಸಕ ಜನಾರ್ದನ ರೆಡ್ಡಿಯು ಈಗ ಮೋದಿಗಿಂತಲೂ ಸುಳ್ಳು ಹೇಳುವುದನ್ನು ಕಲಿತಿದ್ದಾನೆ. ನಾನು ಮೋದಿ ಕೊಟ್ಟ ಭರವಸೆಗಳನ್ನು ಕೇಳಿದರೆ ಇವರಿಗೆ ಸಿಟ್ಟು ಬರುತ್ತದೆ ಎಂದರು.

ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಮಾತನಾಡಿ, ಈ ಲೋಕಸಭಾ ಚುನಾವಣೆಯು ಶಿಷ್ಟರ ಹಾಗೂ ದುಷ್ಟರ ನಡುವೆ ನಡೆಯುವ ಚುನಾವಣೆ. ಕಾಂಗ್ರೆಸ್ ಶಿಷ್ಟರ ರಕ್ಷಣೆಗೆ ಮುಂದಾದರೆ ಬಿಜೆಪಿಯವರು ದುಷ್ಟರ ರಕ್ಷಣೆಗೆ ಮುಂದಾಗಿದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಸೋತಿದ್ದರು. ಅಂದು ಗೆದ್ದ ಅಭ್ಯರ್ಥಿ ಕರಡಿ ಸಂಗಣ್ಣ ನಮ್ಮ ಜೊತೆಗೆ ಕೈ ಜೋಡಿಸಿದ್ದಾರೆ. ಹಾಗಾಗಿ ಈ ಬಾರಿ ಗೆಲುವು ನಮ್ಮದೇ ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕಾಂಗ್ರೆಸ್ ಈ ದೇಶದ ಪ್ರಜಾಪ್ರಭುತ್ವ ಕಾಪಾಡುವ ಪಕ್ಷ. ಟಿಕೆಟ್ ಸಿಗದಿದ್ದಕ್ಕೆ ನಾನು ಕಾಂಗ್ರೆಸ್ ಸೇರಿಲ್ಲ. ನಾನು ಸಂತೋಷವಾಗಿ ಪಾರ್ಟಿ ಸೇರಿದ್ದೇನೆ. ಶಾಸಕ ಲಕ್ಷ್ಮಣ ಸವದಿ ಅವರೇ ನನಗೆ ಕಾಂಗ್ರೆಸ್ ಸೇರಲು ಪ್ರೇರಣೆ. ನಾನು ಸುಮ್ಮನೇ ಸಿಎಂ ಗುಣಗಾನ ಮಾಡಲ್ಲ. ಕಾಂಗ್ರೆಸ್ ಯೋಜನೆಗಳನ್ನು ಈ ರಾಜ್ಯದ ಪ್ರತಿಯೊಬ್ಬರೂ ಮೆಚ್ಚಿದ್ದಾರೆ.

ಮುನಿರಾಬಾದ ಮೆಹಬೂಬನಗರ ಟ್ರೇನ್ ಆಗಲು ಮಾಜಿ ಪ್ರಧಾನಿ ದೇವೇಗೌಡ, ಶಾಸಕ ರಾಯರೆಡ್ಡಿ ಕಾರಣ. ಕುಷ್ಟಗಿಗೆ ರೈಲು ಆಗಲು ಅಮರೇಗೌಡ ನಾನು ಕಾರಣ. ಇನ್ನು ಹೊಸ ಲೈನ್ ದರೋಜಿ-ಬಾಗಲಕೋಟೆ ಟ್ರಂಕ್ ಲೈನ್ ಆಗುತ್ತೆ. ಇದಕ್ಕೆ ನಮ್ಮ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಅನುದಾನ ನೀಡಿ ಯೋಜನೆಗಳು ಜಾರಿಯಾಗುವಂತೆ ಮಾಡಬೇಕು ಎಂದರು.

ಕಾಡಾ ನಿಗಮದ ಅಧ್ಯಕ್ಷ ಹಸನಸಾಬ ದೋಟಿಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪೂರ ಸ್ವಾಗತಿಸಿದರು.

ಪಕ್ಷ ಸೇರ್ಪಡೆ: ಜಿಪಂ ಮಾಜಿ ಸದಸ್ಯರಾದ ವಿಜಯನಾಯಕ ಹಾಗೂ ನೇಮಣ್ಣ ಮೇಲಸಕ್ರಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ವಿಪ ಸದಸ್ಯ ಶರಣಗೌಡ ಬಯ್ಯಾಪುರ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ, ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ, ಮಾಜಿ ಸಭಾಪತಿ ವಿ.ಆರ್. ಸುದರ್ಶನ. ವೆಂಕಟರಾವ ಕನಕಪ್ಪಗೌಡ, ಬಸನಗೌಡ ಸಿಂಧನೂರು, ಮಾಲತಿ ನಾಯಕ, ಅಮರೇಶ ಕರಡಿ, ಗ್ಯಾರಂಟಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.