ಸಾರಾಂಶ
ಉಡುಪಿಯ ಪುರಭವನದಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟಿಸ್ ವತಿಯಿಂದ ಸಂವಿಧಾನ ಸಮ್ಮಾನ್ ಅಭಿಯಾನ ಮತ್ತು ಸಂವಿಧಾನ ಬದಲಾಯಿಸಿದ್ದು ಯಾರು? ಎಂಬ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಸಂವಿಧಾನ ಸಮ್ಮಾನ್ ಅಭಿಯಾನ, ಸಂವಿಧಾನ ಬದಲಾಯಿಸಿದ್ದು ಯಾರು? ಎಂಬ ಪುಸ್ತಕ ಲೋಕಾರ್ಪಣೆ
ಕನ್ನಡಪ್ರಭ ವಾರ್ತೆ ಉಡುಪಿಪಾರ್ಲಿಮೆಂಟ್ನಲ್ಲಿ ರೆಡ್ ಬುಕ್ ಹಿಡಿದು ಸಂವಿಧಾನ ಉಳಿಸಿ ಎನ್ನುವವರು ಅವರ ಅಜ್ಜಿ, ತಂದೆ ಸಂವಿಧಾನದ ಜೊತೆ ಏನು ಮಾಡಿದ್ದಾರೆ ಎಂದು ನೋಡಿಕೊಳ್ಳಲಿ, ಆಗ ಅವರಿಗೆ ರೆಡ್ ಬುಕ್ ತರುವ ಅಗತ್ಯ ಬರಲಿಕ್ಕಿಲ್ಲ ಎಂದು ಬಿಜೆಪಿ ತಮಿಳುನಾಡು ರಾಜ್ಯಾಧ್ಯಕ್ಷ ಅಣ್ಣಾಮಲೈ, ಪರೋಕ್ಷವಾಗಿ ರಾಹುಲ್ ಗಾಂಧಿಗೆ ಟಾಂಗ್ ನೀಡಿದರು.ಅವರು ಶನಿವಾರ ಉಡುಪಿಯ ಪುರಭವನದಲ್ಲಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟಿಸ್ ಆಯೋಜಿಸಿದ ಸಂವಿಧಾನ ಸಮ್ಮಾನ್ ಅಭಿಯಾನ ಮತ್ತು ಸಂವಿಧಾನ ಬದಲಾಯಿಸಿದ್ದು ಯಾರು? ಎಂಬ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದುವರೆಗೆ ದೇಶದ ಸಂವಿಧಾನಕ್ಕೆ ಮಾಡಲಾಗಿರುವ 106 ತಿದ್ದುಪಡಿಗಳಲ್ಲಿ ಮೋದಿಯವರು ಮಾಡಿದ ಕೇವಲ 8 ಸಂವಿಧಾನ ತಿದ್ದುಪಡಿಗಳು ಅಂಬೇಡ್ಕರ್ ಆಶಯಕ್ಕೆ ಪರವಾಗಿಯೇ ಇವೆ. ಮೋದಿ ಅವರ ಎಸ್‌ಸಿ, ಎಸ್‌ಟಿ, ಓಬಿಸಿ, ಮಹಿಳಾ ಮೀಸಲಾತಿ ಇತ್ಯಾದಿ ತಿದ್ದುಪಡಿಗಳನ್ನು ಅಂಬೇಡ್ಕರ್ ಅವರೇ ಬಯಸಿದ್ದರು. ಆದರೂ ಬಿಜೆಪಿಯವರು ಸಂವಿಧಾನವನ್ನು ತಿದ್ದುತ್ತಿದ್ದಾರೆ ಎಂದು ಕಾಂಗ್ರೆಸ್ ಚುನಾವಣೆಯ ಸಂದರ್ಭದಲ್ಲಿ ಅಪಪ್ರಚಾರ ಮಾಡುತ್ತಿದೆ ಎಂದವರು ಖಾರವಾಗಿ ನುಡಿದರು. ಉಳಿದ ತಿದ್ದುಪಡಿಗಳನ್ನು ಕಾಂಗ್ರೆಸ್ ಮತ್ತು ಇಂದಿರಾ ಗಾಂಧಿ ತನ್ನ ಸರ್ಕಾರವನ್ನು ಉಳಿಸಿಕೊಳ್ಳುವುದಕ್ಕಾಗಿಯೇ ಮಾಡಿದ್ದರು ಎಂದವರು ವಿಶ್ಲೇಷಿಸಿದರು.ಅಂಬೇಡ್ಕರ್ ಅವರ ಹೆಸರನ್ನು ವೋಟ್ ಬ್ಯಾಂಕ್ ರಾಜಕೀಯಕ್ಕೆ ಬಳಸಿಕೊಂಡು, ಅವರಿಗೆ ಅನ್ಯಾಯ ಮಾಡಿದವರು, ಇವತ್ತು ಸರ್ಕಾರಕ್ಕೆ ಕೈ ತೋರಿಸಿ ಅಂಬೇಡ್ಕರ್ ಅವರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಹಿಂದೆ ಅವರು ಸಂವಿಧಾನಕ್ಕೆ ಮತ್ತು ಅಂಬೇಡ್ಕರ್ ಅವರಿಗೆ ಮಾಡಿರುವ ಅನ್ಯಾಯ, ಅವಮಾನಗಳನ್ನು ಸರಿಪಡಿಸಲು, ಮೊರಾರ್ಜಿ ದೇಸಾಯಿ, ವಿ.ಪಿ.ಸಿಂಗ್ ಮತ್ತು ವಾಜಪೇಯಿ ಅವರ ಐದು ವರ್ಷಗಳ ಅವಧಿ ಸಾಕಾಗಲಿಲ್ಲ, ಈಗ ನರೇಂದ್ರ ಮೋದಿ ಅವರ 10 ವರ್ಷಗಳ ಅವಧಿ ಕೂಡ ಸಾಕಾಗುತ್ತಿಲ್ಲ ಎಂದವರು ಹೇಳಿದರು.ಸಂವಿಧಾನವನ್ನು ಉಳಿಸುವುದಲ್ಲ, ಬಲಪಡಿಸಬೇಕು. ಇದುವರೆಗೆ ಇತಿಹಾಸದ ಪುಸ್ತಕಗಳಲ್ಲಿ ಅಂಬೇಡ್ಕರ್ ಅವರಿಗೆ ಅನ್ಯಾಯ ಮಾಡಲಾಗಿದೆ. ಮುಂದಿನ ಪೀಳಿಗೆಗೆ ಅಂಬೇಡ್ಕರ್ ಮತ್ತು ಸಂವಿಧಾನದ ನಿಜವಾದ ಇತಿಹಾಸವನ್ನು ತಿಳಿಸುವ ಅವಶ್ಯಕತೆ ಇದೆ. ಸಂವಿಧಾನ ಬಿಟ್ಟು ಬದುಕು, ಭವಿಷ್ಯ ಇಲ್ಲ ಎಂದವರು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಚ್ಚೂರು ಶ್ರೀ ಮಾಲ್ದಿದೇವಿ ದೇವಸ್ಥಾನ - ಬಬ್ಬುಸ್ವಾಮಿ ಮೂಲಕ್ಷೇತ್ರದ ಆಡಳಿತ ಮೊಕ್ತೇಸರ ಗೋಕುಲ್ ದಾಸ್ ಬಾರಕೂರು ವಹಿಸಿದ್ದರು.ಮೈಸೂರಿನ ಡಾ.ಪ್ರಫುಲ್ಲಾ ಮಲ್ಲಾಡಿ ಅವರು ಪುಸ್ವೇತಕದ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಸಂವಿಧಾನ ಸಮ್ಮಾನ್ ಅಭಿಯಾನದ ವಿಭಾಗ ಸಂಚಾಲಕ ಕಿದಿಯೂರು ಉದಯ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ಅಭಿಯಾನದ ಜಿಲ್ಲಾ ಸಂಚಾಲಕಿ ರೇಷ್ಮಾ ಉದಯ್ ಶೆಟ್ಟಿ ಸ್ವಾಗತಿಸಿದರು. ರತ್ನಾಕರ್ ಇಂದ್ರಾಳಿ ನಿರೂಪಿಸಿದರು.