ಈ ಬಾರಿಯೂ ಮೋದಿ‌ ಸರ್ಕಾರ ಬರುತ್ತದೆ: ನಟ, ಹೋರಾಟಗಾರ ಚೇತನ್

| Published : Jun 04 2024, 12:31 AM IST

ಈ ಬಾರಿಯೂ ಮೋದಿ‌ ಸರ್ಕಾರ ಬರುತ್ತದೆ: ನಟ, ಹೋರಾಟಗಾರ ಚೇತನ್
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿಯೂ ಮೋದಿ ಸರ್ಕಾರ ಬರುತ್ತದೆ ಎಂದು ನಟ ಚೇತನ್‌ ಅಭಿಪ್ರಾಯಪಟ್ಟಿದ್ದಾರೆ. ಎಕ್ಸಿಟ್‌ ಪೋಲ್‌ ಫಲಿತಾಂಶ ಎಲ್ಲರೂ ಒಪ್ಪಲೇಬೇಕು ಎಂದು ಸುದ್ದಿಗಾರರಿಗೆ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತೆ ಎಂಬ ಕಾಂಗ್ರೆಸ್ ಆರೋಪಗಳ ಬಗ್ಗೆ ನಟ, ಹೋರಾಟಗಾರ ಚೇತನ್ ಅಹಿಂಸಾ ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಸಿಎಂ ಸೂಚನೆಗೆ ಮೊದಲೇ ಸಚಿವ ನಾಗೇಂದ್ರ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತೆ ಎಂಬ ಕಾಂಗ್ರೆಸ್ ಆರೋಪಗಳ ಬಗ್ಗೆ ಮಡಿಕೇರಿಯಲ್ಲಿ ಪ್ರತಿಕ್ರಿಯಿಸಿ, ಕೇಂದ್ರದಲ್ಲಿ ಮತ್ತೊಮ್ಮೆ ಎನ್‌ಡಿಎ ಸರ್ಕಾರ ಬರುತ್ತದೆ ಎಂದು ಎಕ್ಸಿಟ್ ಪೋಲ್ ಫಲಿತಾಂಶದಲ್ಲಿ ತಿಳಿದುಬಂದಿದೆ. ಆದ್ದರಿಂದ ಎಲ್ಲರೂ ಇದನ್ನು ಒಪ್ಪಬೇಕಾಗುತ್ತದೆ. ಈ ಬಾರಿಯೂ ಮೋದಿ‌ ಸರ್ಕಾರ ಬರುತ್ತದೆ ಎಂದು ತಿಳಿಸಿದ್ದಾರೆ.

ಬಿಜೆಪಿಯನ್ನು ಸೈದ್ಧಾಂತಿಕವಾಗಿ ನಾನು ಒಪ್ಪುವುದಿಲ್ಲ. ಅವರು ಮಾಡಿರುವ ಸಿಎಎ, ಒನ್ ನೇಷನ್ ಒನ್ ಎಲೆಕ್ಷನ್ ಒಪ್ಪಲ್ಲ. ಅವರು ಮಾಡಿರುವ ಜಿಎಸ್ ಟಿ, ನೋಟ್ ಬ್ಯಾನ್ ನಿಂದ ದೇಶಕ್ಕೆ ಒಳ್ಳೆಯದಾಗಿಲ್ಲ. ಆದರೆ ಬಿಜೆಪಿ ಮೂಲ ಸಂವಿಧಾನವನ್ನು ಬದಲಾಯಿಸುತ್ತೆ ಎನ್ನುವುದನ್ನು ನಾನು ಒಪ್ಪಲ್ಲ ಎಂದು ಹೇಳಿದರು.

ಬಿಜೆಪಿ ಸಂವಿಧಾನ ಬದಲಾವಣೆ ಮಾಡುತ್ತದೆ ಎಂಬುವುದು ಬಿಜೆಪಿ ವಿರೋಧಿ ಪಕ್ಷಗಳ ಗುಮ್ಮ. ಅದನ್ನು ನಾನೂ ಒಪ್ಪಲ್ಲ. ಬಿಜೆಪಿ ಎಷ್ಟೋ ವಿಚಾರದಲ್ಲಿ ಸಂವಿಧಾನ ವಿರೋಧಿ ಇದೆ, ಅದೇ ರೀತಿ ಕಾಂಗ್ರೆಸ್ ಕೂಡ. ಆದರೆ, ಸಂವಿಧಾನ ಉಳಿಸುತ್ತಿರುವವರು ನಮ್ಮಂತಹ ಸಮಾನತವಾದಿಗಳು. ಸಂವಿಧಾನ ಹೈಜಾಕ್ ಮಾಡಲು ಕಾಂಗ್ರೆಸ್‌ಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಕಿಡಿಕಾರಿದರು.

ಸಂವಿಧಾನ ಬದಲಾವಣೆ ಹಿಂದುತ್ವದ ರೀತಿ ಬೇಕಾಗಿಲ್ಲ. ಕಾಂಗ್ರೆಸ್ ರೀತಿ ಸಂವಿಧಾನ ಹಾಗೆ ಇಟ್ಟುಕೊಂಡು ದುರ್ಬಳಕೆ ಸರಿಯಲ್ಲ. ಅಂಬೇಡ್ಕರ್ ವಾದದ ಮೂಲಕ ಸಂವಿಧಾನವನ್ನು ಉತ್ತಮಗೊಳಿಸಬೇಕು. ಇನ್ನೂ ಸಮಾನತೆ ಬಡವರ ಪರ ಸಂವಿಧಾನ ಮಾಡಬೇಕಾಗಿದೆ. ಸಂವಿಧಾನ ಪೀಠಿಕೆಯ ತತ್ವಗಳನ್ನು ಯಾವ ಪಕ್ಷಗಳು ಉಳಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಸೂಚನೆಗೆ ಮೊದಲೇ ಸಚಿವ ನಾಗೇಂದ್ರ ರಾಜೀನಾಮೆ ಕೊಡಬೇಕು, ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆ ಆಗಬೇಕು. ಸಚಿವ ನಾಗೇಂದ್ರ ಮೈನಿಂಗ್ ಮಾಫಿಯದಲ್ಲಿದ್ದವರು, ಸಚಿವರಾಗಲು ಅವರಿಗೇನು ಯೋಗ್ಯತೆ ಇದೆ? ಭ್ರಷ್ಟಾಚಾರದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಏನೂ ಕಡಿಮೆಯಿಲ್ಲ. ಪ್ರಕರಣವನ್ನು ಸಿಬಿಐಗೆ ಕೊಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.