ಮತ್ತೆ ಮೋದಿಗೇ ಗಾದಿ, ತಡೆರ್‍ಯಾರು?: ವಿಜಯೇಂದ್ರ

| Published : Mar 01 2024, 02:16 AM IST

ಸಾರಾಂಶ

ಈ ಬಾರಿಯ ಲೋಕಸಭಾ ಚುನಾವಣೆಯು ದೇಶದ ಭವಿಷ್ಯ ರೂಪಿಸುವ ಬಹು ನಿರ್ಣಾಯಕ ಚುನಾವಣೆಯಾಗಿದ್ದು, ದೇಶ ಮಾತ್ರವಲ್ಲ ಜಗತ್ತು ಕೂಡ ಕಾತುರದಿಂದ ನೋಡುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ನರೇಂದ್ರ ಮೋದಿ 3ನೇ ಬಾರಿ ಪ್ರಧಾನಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಶಾಸಕ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಗುರುವಾರ ಪಟ್ಟಣದ ಮಾರಿಕಾಂಬ ಬಯಲು ರಂಗಮಂದಿರದಲ್ಲಿ ನಡೆದ ಬಿಜೆಪಿ ಹಿಂದುಳಿದ ವರ್ಗದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಈ ಬಾರಿಯ ಲೋಕಸಭಾ ಚುನಾವಣೆಯು ದೇಶದ ಭವಿಷ್ಯ ರೂಪಿಸುವ ಬಹು ನಿರ್ಣಾಯಕ ಚುನಾವಣೆಯಾಗಿದ್ದು, ದೇಶ ಮಾತ್ರವಲ್ಲ ಜಗತ್ತು ಕೂಡ ಕಾತುರದಿಂದ ನೋಡುತ್ತಿದೆ ಸತತ 3 ನೇ ಬಾರಿ ಪುನಃ ಮೋದಿ ಪ್ರಧಾನಿ ಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಬಗ್ಗೆ ಖುದ್ದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ 400 ಅಧಿಕ ಸ್ಥಾನ ಗಳಿಸಿ ಅಧಿಕಾರಕ್ಕೇರಲಿದೆ ಎಂದು ಭವಿಷ್ಯ ನುಡಿದಿದ್ದು, ತಾಲೂಕಿನಲ್ಲಿ ರಾಘಣ್ಣನನ್ನು 1 ಲಕ್ಷ ಅಧಿಕ ಮತ ದೊರಕಿಸುವಂತೆ ಮನವಿ ಮಾಡಿದರು.

ಯಡಿಯೂರಪ್ಪನವರಿಗೆ ತಾಲೂಕು ರಾಜಕೀಯ ಜನ್ಮ ನೀಡಿದ್ದು, ಕ್ಷೇತ್ರದ ಮತದಾರರು ನನ್ನನ್ನು ಶಾಸಕನಾಗಿಸಿ ನಿರೀಕ್ಷಿಸದಂತೆ ರಾಜ್ಯಾಧ್ಯಕ್ಷನಾಗಿಸಿ ಪಕ್ಷ ಮುನ್ನಡೆಸುವ ಜತೆಗೆ ಭದ್ರ ಬುನಾದಿ ಹಾಕಲು ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಜವಾಬ್ದಾರಿ ವಹಿಸಿದ್ದಾರೆ ಎಂದ ಅವರು, ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಜತೆ ಹೋರಾಟದ ಮೂಲಕ ಎಲ್ಲ 28 ಕ್ಷೇತ್ರವನ್ನು ಜಯಿಸುವ ಮೂಲಕ ರಾಜ್ಯ ರಾಜಕೀಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆಯುವ ದಿನ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದೇಶದ ಭವಿಷ್ಯ ರೂಪಿಸುವ ಈ ಚುನಾವಣೆಯಲ್ಲಿ ಕಾರ್ಯಕರ್ತರ ಜವಾಬ್ದಾರಿ ಬಹು ಮುಖ್ಯವಾಗಿದ್ದು, ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ರಾಘಣ್ಣ ಮಾಡಿದ ಅಭಿವೃದ್ದಿ ಕಾರ್ಯಕ್ಕಿಂತ ಹೆಚ್ಚು ಯಾರಿಗೂ ಮಾಡಲು ಸಾಧ್ಯವಿಲ್ಲ. ಈ ವಿಷಯ ಎಲ್ಲೆಡೆ ಚರ್ಚಿಸಿ ವಿರೋಧಿಗಳ ಮನಪರಿವರ್ತಿಸಿ, ಪ್ರತಿ ಬೂತ್ ನಲ್ಲಿ 100-150 ಹೆಚ್ಚು ಮತ ದೊರಕಿಸುವ ಶಕ್ತಿ ಕಾರ್ಯಕರ್ತರಿಗಿದೆ. ಇದರಿಂದ ಮಾತ್ರ 1 ಲಕ್ಷ ಅಧಿಕ ಮತಗಳಿಸಲು ಸಾಧ್ಯ ಎಂದು ತಿಳಿಸಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ದೀವರು, ಈಡಿಗರು,ಬಿಲ್ಲವರು, ನಾಮಧಾರಿಗಳ ಬೃಹತ್‌ ಸಮಾವೇಶ ಮಾ.5ರಂದು ಸಾಗರದಲ್ಲಿ ಆಯೋಜಿಸಲಾಗಿದ್ದು, 40 ಸಾವಿರ ಅಧಿಕ ಜನರು‘ಶಕ್ತಿಸಾಗರ ಸಂಗಮ’ಕಾರ್ಯಕ್ರಮದಲ್ಲಿ ಮುತ್ಸದ್ದಿ ರಾಜಕಾರಣಿ ಬಿಎಸ್ ಯಡಿಯೂರಪ್ಪರವರನ್ನು ಸನ್ಮಾನ ಮಾಡಲಿದ್ದೇವೆ ಎಂದರು.ನನ್ನ ಕೆಲಸಕ್ಕೆ ಕೂಲಿ ಕೊಡಿ: ರಾಘವೇಂದ್ರ

ಶಿಕಾರಿಪುರ: ತಾಲೂಕಿಗೆ ನೀರಾವರಿ, ರೈಲ್ವೆ ಯೋಜನೆ ಜಿಲ್ಲಾ ಕೇಂದ್ರದಲ್ಲಿ ವಿಮಾನ ನಿಲ್ದಾಣ, ರೈಲ್ವೆ ಮೇಲ್ ಸೇತುವೆ ಸಹಿತ ಸಾಕಷ್ಟು ಕಾರ್ಯಕ್ರಮಗಳನ್ನು ತಾಲೂಕು ಜಿಲ್ಲೆಯ ಅಭಿವೃದ್ಧಿಗಾಗಿ ಮಾಡಿದ್ದೇನೆ. ನಾನು ಈಗ ನಿಮ್ಮ ಮುಂದೆ ಕೈಜೋಡಿಸಿ ಮಾಡಿದ ಕೆಲಸಕ್ಕೆ ಕೂಲಿಯನ್ನು ಕೇಳುತ್ತಿದ್ದೇನೆ. ಮುಂಬರುವ ಚುನಾವಣೆಯಲ್ಲಿ ನೀವು ನನಗೆ ನಿಮ್ಮ ಆಶೀರ್ವಾದ ಪೂರ್ವಕ ಮತ ನೀಡುವ ಮೂಲಕ ನನಗೆ ಕೂಲಿಯನ್ನು ಸಂದಾಯ ಮಾಡಿ ಎಂದು ಸಂಸದ ರಾಘವೇಂದ್ರ ಮನವಿ ಮಾಡಿದರು.

ದೇಶವನ್ನು 60 ವರ್ಷ ಆಳಿದ ಕಾಂಗ್ರೆಸ್ಸಿಗರು, ರೈತರು ದೇಶದ ಬೆನ್ನೆಲುಬು ಎಂದು ಹೇಳುತ್ತಾ ಬಂದರು ಆದರೆ ರೈತರಿಗಾಗಿ ಯಾವುದೇ ಹೊಸ, ವಿಶಿಷ್ಟ ಕಾರ್ಯಕ್ರಮಗಳನ್ನು ಕೊಡಲಿಲ್ಲ ಆದರೆ ನರೇಂದ್ರ ಮೋದಿಜಿ ಅವರು ಕೃಷಿ ಸಮ್ಮಾನ್ ಯೋಜನೆ ಜಾರಿಗೆ ತಂದು ಅವರ ಖಾತೆಗೆ ₹6 ಸಾವಿರ ನೇರ ಜಮಾ ಮಾಡುತ್ತಿದ್ದಾರೆ.ಸ್ವಾತಂತ್ರ್ಯ ನಂತರದ 75 ವರ್ಷ ಕಾಂಗ್ರೆಸ್ಸಿಗರು ಕೇವಲ ಅಂಬೇಡ್ಕರ್‌ ಭಾವಚಿತ್ರ ಹಿಡಿದು ಹಿಂದುಳಿದವರ ಮತದಿಂದ ಅಧಿಕಾರ ಚಲಾಯಿಸಿದ್ದು, ಅಂಬೇಡ್ಕರ್‌ ಬದುಕಿದ್ದಾಗ ಅವರಿಗೆ ನ್ಯಾಯ ದೊರಕಿಸಲಿಲ್ಲ ಎಂದು ತಿಳಿಸಿದರು.