ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮೋದಿ ಪಣ: ಅಪ್ಪಚ್ಚು ರಂಜನ್

| Published : Feb 06 2024, 01:31 AM IST

ಸಾರಾಂಶ

ಸೋಮವಾರಪೇಟೆ ಕೊಡವ ಸಮಾಜದಲ್ಲಿ ಗ್ರಾಮ ಚಲೋ ಉದ್ಘಾಟನೆ ಹಾಗೂ ನೂತನ ಬಿಜೆಪಿ ಜಿಲ್ಲಾಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಿಗೆ ಅಭಿನಂದನಾ ಸಮಾರಂಭ ನಡೆಯಿತು. ಸಮಾರಂಭದಲ್ಲಿ ಮಾಜಿ ಸಚಿವ ಅಪ್ಪಚ್ಚು ರಂಜನ್‌ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ ಎಂದು ವಿವರಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಬಿಜೆಪಿ ಸೋಮವಾರಪೇಟೆ ಮಂಡಲ ವತಿಯಿಂದ ಇಲ್ಲಿನ ಕೊಡವ ಸಮಾಜದಲ್ಲಿ ಗ್ರಾಮ ಚಲೋ ಉದ್ಘಾಟನೆ ಹಾಗೂ ನೂತನ ಬಿಜೆಪಿ ಜಿಲ್ಲಾಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಿಗೆ ಅಭಿನಂದನಾ ಸಮಾರಂಭ ನಡೆಯಿತು.ಮಾಜಿ ಸಚಿವ ಅಪ್ಪಚ್ಚು ರಂಜನ್‌ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. ಜನ್‍ಧನ್ ಯೋಜನೆಯಡಿ ಬ್ಯಾಂಕ್ ಖಾತೆ, ಉಜ್ವಲ ಯೋಜನೆಯ ಮೂಲಕ ಪ್ರತಿ ಮನೆಗೂ ಗ್ಯಾಸ್ ಸಿಲಿಂಡರ್ ವಿತರಣೆ, ದೀನ್‍ದಯಾಳ್ ಯೋಜನೆಯಡಿ ಕುಗ್ರಾಮಗಳಿಗೂ ವಿದ್ಯುತ್ ಸೌಕರ್ಯ, ರೈತ ಸಮ್ಮಾನ್ ನಿಧಿಯಡಿ ಪ್ರತಿ ರೈತನ ಖಾತೆಗೆ ವಾರ್ಷಿಕ 6 ಸಾವಿರ, ರೈಲ್ವೇ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಅನುದಾನ ಕಲ್ಪಿಸಲಾಗಿದೆ ಎಂದರು.

ಹಿಂದೂ ಸಮಾಜದ ಸ್ವಾಭಿಮಾನದ ಸಂಕೇತವಾಗಿದ್ದ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಮೋದಿ ಸರ್ಕಾರ ಪಣತೊಟ್ಟು ಪೂರ್ಣಗೊಳಿಸಿದೆ. ಆ ಮೂಲಕ ಹಿಂದು ಸಮಾಜದ ಗೌರವವನ್ನು ಎತ್ತಿ ಹಿಡಿದಿದೆ. ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರತಿ ಮನೆಗೆ ತಲುಪಿಸುವ ಮೂಲಕ ಮತ್ತೊಮ್ಮೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಕಾರ್ಯಕರ್ತರು ಪಣ ತೊಡಬೇಕು ಎಂದು ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಎಲ್ಲರನ್ನೂ ಒಂದುಗೂಡಿಸಿಕೊಂಡು ಕೊಡಗಿನಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು. ಜಿಲ್ಲೆಯಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ 1 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ ನೀಡಬೇಕಿದೆ ಎಂದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡಬೇಕು. ಹೊಸ ಮತದಾರರು ಬಿಜೆಪಿಯೊಂದಿಗಿದ್ದು, ಮೋದಿ ಮೇಲೆ ಹೆಚ್ಚಿನ ಭರವಸೆಯಿಟ್ಟಿದ್ದಾರೆ. ಅವರು ಬಿಜೆಪಿಯೊಂದಿಗೆ ಹೆಜ್ಜೆಹಾಕುತ್ತಾರೆ. ವಿಸ್ತಾರಕ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಕರೆ ನೀಡಿದರು.

ಮಂಡಲ ಅಧ್ಯಕ್ಷ ಮನುಕುಮಾರ್ ರೈ ಅಧ್ಯಕ್ಷತೆ ವಹಿಸಿದ್ದರು.ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಿ.ಕೆ. ಲೋಕೇಶ್, ಪ್ರಮುಖರಾದ ಅಭಿಮನ್ಯುಕುಮಾರ್, ಎಚ್.ಕೆ. ಮಾದಪ್ಪ, ಕೊಮಾರಪ್ಪ, ದರ್ಶನ್ ಜೋಯಪ್ಪ, ಮಹೇಶ್ ತಿಮ್ಮಯ್ಯ, ಪ್ರತಾಪ್, ಲೋಕೇಶ್ವರಿ ಗೋಪಾಲ್, ಭುವನೇಶ್ವರಿ, ಮಂಜುಳಾ, ರೂಪಾ ಸತೀಶ್, ಯಮುನ ಚಂಗಪ್ಪ ಮತ್ತಿತರರಿದ್ದರು.

ಬಿಜೆಪಿ ನೂತನ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಪ್ರಧಾನ ಕಾರ್ಯದರ್ಶಿಗಳಾದ ವಿ.ಕೆ. ಲೋಕೇಶ್, ಮಹೇಶ್ ಜೈನಿ, ಮಾಜಿ ಅಧ್ಯಕ್ಷ ಹಾಗೂ ಮೈಸೂರು ಜಿಲ್ಲಾ ಚುನಾವಣಾ ಉಸ್ತುವಾರಿ ರಾಬಿನ್ ದೇವಯ್ಯ ಅವರನ್ನು ಸನ್ಮಾನಿಸಲಾಯಿತು.