ಸಾರಾಂಶ
ಕುಮಟಾ: ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಬಗ್ಗೆ ಗೊತ್ತಿದ್ದೂ ಬಿಜೆಪಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡಿದೆ. ಇದೇನಾ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವ ಪ್ರಧಾನಿಯವರ ರೀತಿ? ಮೋದಿ ಒಬ್ಬ ಒಳ್ಳೆ ನಾಟಕಕಾರ; ಇವೆಂಟ್ ಮ್ಯಾನೇಜರ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಪಟ್ಟಣದ ಮಣಕಿ ಮೈದಾನದಲ್ಲಿ ಶುಕ್ರವಾರ ಪ್ರಜಾಧ್ವನಿ- ೨ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ಮಹಿಳೆಯರಿಗೆ ರಕ್ಷಣೆ ಕೊಡುತ್ತೇವೆಂದು ಪ್ರಧಾನಿ ಹಾಗೂ ಬಿಜೆಪಿಯವರು ಹೇಳುತ್ತಾರೆ. ಬಿಜೆಪಿ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ನ ಹಾಲಿ ಲೋಕಸಭಾ ಸದಸ್ಯ, ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಮಾಡಿರುವ ಅನ್ಯಾಯ ಜಗಜ್ಜಾಹೀರಾಗಿದೆ. ಈ ಬಗ್ಗೆ ಗೊತ್ತಿದ್ದೂ ಜೆಡಿಎಸ್ ಜತೆ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಟಿಕೆಟ್ ನೀಡಿದ್ದಾರೆ. ರೇಪಿಸ್ಟನಿಗೆ ಟಿಕೆಟ್ ಕೊಟ್ಟಿದ್ದಾರೆ. ಇದೇನಾ ಹೆಣ್ಣುಮಕ್ಕಳಿಗೆ ರಕ್ಷಣೆ ಕೊಡುವ ನೀತಿ ಎಂದು ಪ್ರಶ್ನಿಸಿದರು.
ಉತ್ತರ ಕನ್ನಡ ಕ್ಷೇತ್ರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗೆ ಈ ಬಾರಿ ಆಶೀರ್ವಾದ ಮಾಡಬೇಕು. ಹಿಂದೆ ಈ ಜೆಲ್ಲೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದೀರಿ. ಮಾರ್ಗರೇಟ್ ಆಳ್ವಾ ಒಮ್ಮೆ ಸಂಸದರಾಗಿದ್ದರು. ಈ ಬಾರಿ ಬದಲಾವಣೆಗೆ ಅವಕಾಶ ಇದೆ. ಹತ್ತು ವರ್ಷಗಳ ಕಾಲ ಮೋದಿಯವರು ಅಧಿಕಾರದಲ್ಲಿದ್ದರೂ ಕರ್ನಾಟಕದಲ್ಲಾಗಲಿ, ದೇಶದಲ್ಲಾಗಲಿ ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿಲ್ಲ. ಮೋದಿ ಮತ್ತು ಬಿಜೆಪಿಯವರು ಹೇಳುತ್ತಿದ್ದರು, ಎರಡೂ ಕಡೆ ಒಂದೇ ಸರ್ಕಾರವಿದ್ದರೆ ಡಬಲ್ ಎಂಜಿನ್ ಸರ್ಕಾರವಾಗುತ್ತದೆ ಎನ್ನುತ್ತಿದ್ದರು. ಮೂರು ವರ್ಷ ಹತ್ತು ತಿಂಗಳು ಎರಡೂ ಕಡೆ ಒಂದೇ ಸರ್ಕಾರವಿದ್ದರೂ ಲೂಟಿ ಹೊಡೆದರೇ ವಿನಾ ಏನೂ ಕೆಲಸ ಮಾಡಿಲ್ಲ ಎಂದರು.ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡಿ, ಇಲ್ಲಿನ ಸಚಿವ ಮಂಕಾಳು ವೈದ್ಯ ಹಾಗೂ ನಮ್ಮ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಲೇಬೇಕೆಂಬ ಸಂಕಲ್ಪ ಮಾಡಿದ್ದಾರೆ. ಪ್ರಣಾಳಿಕೆಯಲ್ಲೂ ಹೇಳಿದ್ದೇವೆ, ಕುಮಟಾದಲ್ಲಿ ಆಸ್ಪತ್ರೆ ಮಾಡೇ ಮಾಡುತ್ತೇವೆ ಎಂದು ಘೋಷಿಸಿದರು.
ಕೊಟ್ಟ ಮಾತನ್ನು ಬಿಜೆಪಿ ಉಳಿಸಿಕೊಂಡಿಲ್ಲ. ಜಾತಿ, ಧರ್ಮ ಒಡೆಯೋ ಕೆಲಸ ಮಾಡಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದರು. ನಾವು ಪ್ರಜಾಧ್ವನಿ ಯಾತ್ರೆ ಪ್ರಾರಂಭ ಮಾಡಿದ್ದೇವೆ. ನಾವು ಯಾರೂ ಮೋಸ ಮಾಡಿಲ್ಲ ಎಂದರು.ಸಮಾವೇಶದಲ್ಲಿ ಶಾಸಕ ಆರ್.ವಿ. ದೇಶಪಾಂಡೆ, ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ, ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಸತೀಶ ಸೈಲ್, ಶಾಸಕ ಭೀಮಣ್ಣ ನಾಯ್ಕ, ಶಾಸಕ ನಂಜೇಗೌಡ, ಮಾಜಿ ಶಾಸಕಿ ಶಾರದಾ ಶೆಟ್ಟಿ, ನಿವೇದಿತ್ ಆಳ್ವಾ, ಮುಖಂಡರಾದ ರಮಾನಾಥ ರೈ, ವಿನಯಕುಮಾರ ಸೊರಕೆ, ಕೆ.ಎಚ್. ಗೌಡ, ರಮಾನಂದ ನಾಯಕ, ತಾಲೂಕಾಧ್ಯಕ್ಷ ಭುವನ್ ಭಾಗ್ವತ ಇತರರು, ಪಕ್ಷದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು. ಜಿಲ್ಲಾಧ್ಯಕ್ಷ ಸಾಯಿ ಗಾಂವಕರ ಸ್ವಾಗತಿಸಿದರು.
ಜೆಡಿಎಸ್ ತೊರೆದು "ಕೈ'' ಹಿಡಿದ ಶಾಬಂದ್ರಿಭಟ್ಕಳದ ಜೆಡಿಎಸ್ ಮುಖಂಡ ಇನಾಯತ್ ಉಲ್ಲಾ ಶಾಬಂದ್ರಿ ಸಮಾವೇಶದಲ್ಲಿ ಸಿಎಂ- ಡಿಸಿಎಂ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಇನಾಯತ್ ಉಲ್ಲಾ ಶಾಬಂದ್ರಿಯವರು ಜೆಡಿಎಸ್‌ನಲ್ಲಿ ಸಕ್ರಿಯರಾಗಿದ್ದು, ಈ ಹಿಂದೆ ಚುನಾವಣೆಗೂ ಸ್ಪರ್ಧಿಸಿದ್ದರು. ಭಟ್ಕಳದ ಮುಸ್ಲಿಂ ಸಮುದಾಯದ ಸಂಸ್ಥೆ ತಂಜೀಂನ ಅಧ್ಯಕ್ಷರೂ ಆಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ ಶಾಲು ಹಾಕಿ ಪಕ್ಷಕ್ಕೆ ಬರಮಾಡಿಕೊಂಡರು.ಬೈಕ್ ರ್‍ಯಾಲಿ ಮೂಲಕ ಶಕ್ತಿ ಪ್ರದರ್ಶನ
ಪಟ್ಟಣದ ಮಣಕಿ ಮೈದಾನದಲ್ಲಿ ಶುಕ್ರವಾರ ಆಯೋಜನೆಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೂ ಪೂರ್ವ ಬೃಹತ್ ಬೈಕ್ ರ್‍ಯಾಲಿ ಮೂಲಕ ಕರಾವಳಿಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಿತು.ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರ ಪುತ್ರಿ ಬೀನಾ ವೈದ್ಯ ನೇತೃತ್ವದಲ್ಲಿ ಬೈಕ್ ರ್‍ಯಾಲಿಯು ಮುರುಡೇಶ್ವರದಿಂದ ಹೊರಟು ಹೊನ್ನಾವರ ಗೇರುಸೊಪ್ಪ ವೃತ್ತಕ್ಕೆ ಆಗಮಿಸಿದರು. ಅಲ್ಲಿಂದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ಅವರು ಬೀನಾ ವೈದ್ಯರೊಂದಿಗೆ ತೆರೆದ ವಾಹನದಲ್ಲಿ ನಿಂತು ಸಾವಿರಾರು ಅಭಿಮಾನಿ ಬೈಕ್ ಸವಾರರೊಂದಿಗೆ ರ್‍ಯಾಲಿಯನ್ನು ಕುಮಟಾಕ್ಕೆ ಕರೆತಂದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸಾರ್ವಜನಿಕರು ರ್‍ಯಾಲಿ ವೀಕ್ಷಿಸಿದರು. ರ್‍ಯಾಲಿಯಲ್ಲಿ ಜೈ ಭಜರಂಗಿ ಬಾವುಟ ಗಮನಸೆಳೆಯಿತು.