ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
೫೬ ಇಂಚಿನ ಎದೆಯ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರತಿ ಭಾರತೀಯರ ಎದೆಯನ್ನು ೫೬ ಇಂಚಿನ ಎದೆಯಾಗಿ ಜಗತ್ತಿನೆದುರು ಉಬ್ಬುವಂತೆ ಮಾಡಿದ್ದಾರೆ. ಇಂತಹ ಮಹಾನ್ ಭಾರತದ ಕನಸಿನ ಸಾಕಾರಮೂರ್ತಿಯನ್ನು ಮತ್ತೆ ಪ್ರಧಾನಿಯಾಗಿಸುವಲ್ಲಿ ಪ್ರತಿ ಮನಸ್ಸುಗಳು ಒಂದಾಗಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು.ನಮೋ ಭಾರತ್ ತಂಡದ ವತಿಯಿಂದ ಗುರುವಾರ ಸಂಜೆ ನಗರದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಪಕ್ಕದಲ್ಲಿನ ಗದ್ದೆಯಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಭಾರತೀಯ ಸಂಸ್ಕೃತಿಯ ರಾಯಭಾರಿಯಾಗಿ ಮೋದಿ ಕಂಗೊಳಿಸಿದ್ದಾರೆ. ಕಳೆದ ೫೦೦ ವರ್ಷಗಳಲ್ಲಿ ಮೋದಿಯಂತಹ ನಾಯಕ ಬಂದಿಲ್ಲ. ಅಯೋಧ್ಯೆ ಸೇರಿದಂತೆ ಕಾಶಿ, ಉಜ್ಜಯಿನಿ, ಕೇದಾರನಾಥಂತಹ ಕ್ಷೇತ್ರಗಳೂ ಮೋದಿಯ ಬರುವಿಕೆಗಾಗಿ ಕಾದಿವೆ. ಅಬುದಾಬಿಯಲ್ಲೂ ವಿಶೇಷ ಹಿಂದೂ ಮಂದಿರ ನಿರ್ಮಾಣವಾಗಿದೆ. ಈ ಎಲ್ಲ ಹೆಗ್ಗಳಿಕೆ ಮೋದಿಗೆ ಸಲ್ಲುತ್ತದೆ ಎಂದು ಹೇಳಿದರು.ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟ, ಮಾಜಿ ಶಾಸಕ ಸಂಜೀವ ಮಠಂದೂರು ಮೊದಲಾದವರು ಕಾರ್ಯಕ್ರಮ ವೀಕ್ಷಿಸಿದರು. ನಮೋ ಭಾರತ್ ಕಾರ್ಯಕರ್ತ ರಾಜೇಶ್ ಬನ್ನೂರು ತಾಲೂಕು ಸಂಚಾಲಕ ಶಶಿಧರ ನಾಯಕ್, ಕಾರ್ಯಕರ್ತರಾದ ಅವಿನಾಶ್ ನಾಯ್ಕ್, ಶೇಖರ್ ಬನ್ನೂರು, ನಿವೇದಿತಾ ಬಾಳಿಗ ಮೊದಲಾದವರು ಕಾರ್ಯಕ್ರಮ ಸಂಘಟಿಸಿದರು.
---ಸ್ಪರ್ಧೆಗೆ ಅವಕಾಶ ಸಿಕ್ಕಿದರೆ ವಿರೋಧವಿಲ್ಲ: ಚಕ್ರವರ್ತಿ ಸೂಲಿಬೆಲೆ
ಪುತ್ತೂರಿನಲ್ಲಿ ನಮೋ ಬ್ರಿಗೇಡ್ ವತಿಯಿಂದ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಲು ಪುತ್ತೂರಿಗೆ ಗುರುವಾರ ಆಗಮಿಸಿದ್ದ ನಮೋ ಬ್ರಿಗೇಡ್ ಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ತೆರಳಿ ದೇವರ ದರ್ಶನ ಪಡೆದರು.ಈ ಸಂದರ್ಭದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ವಿಚಾರ ವದಂತಿಯಷ್ಟೇ. ೨೦೧೪, ೨೦೧೯ರಲ್ಲೂ ಇಂತಹ ವದಂತಿ ಹರಡಿತ್ತು. ಈಗ ೨೦೨೪ರಲ್ಲೂ ವದಂತಿ ಹರಡಿದೆ. ರಾಜಕೀಯ ಆಸಕ್ತಿಯ ಪ್ರಶ್ನೆ ಬೇರೆ. ಅದಕ್ಕೆ ನನ್ನ ವಿರೋಧವಿಲ್ಲ. ಆದರೆ ಸೀಟ್ ಕೇಳಿಕೊಂಡು ಹೋಗುವುದಿಲ್ಲ. ಅಂತಹ ಅವಕಾಶ ಬಂದರೆ ವಿರೋಧ ಇಲ್ಲ ಎಂದು ಹೇಳಿದರು.