ಹೊಸ ಹೊಸ ಸುಳ್ಳು ಹೊತ್ತು ಪ್ರಚಾರಕ್ಕೆ ಬರುವ ಮೋದಿ: ಸಿದ್ದರಾಮಯ್ಯ ವಾಗ್ದಾಳಿ

| Published : May 05 2024, 02:00 AM IST

ಹೊಸ ಹೊಸ ಸುಳ್ಳು ಹೊತ್ತು ಪ್ರಚಾರಕ್ಕೆ ಬರುವ ಮೋದಿ: ಸಿದ್ದರಾಮಯ್ಯ ವಾಗ್ದಾಳಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ 10 ವರ್ಷದಲ್ಲಿ ಮಾಡಿದ್ದೇನೆಂಬುದನ್ನು ದೇಶದ ಜನತೆಗೆ ತಿಳಿಸಿ ಮತ ಕೇಳದೇ, ಹೊಸ ಹೊಸ ಸುಳ್ಳುಗಳನ್ನು ಹೊತ್ತುಕೊಂಡು ಬರುತ್ತಿದ್ದಾರಷ್ಟೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

- 10 ವರ್ಷದ ಸಾಧನೆ ಹೇಳಿಕೊಳ್ಳದೇ, ಸುಳ್ಳು ಹೇಳುವ ಪ್ರಧಾನಿ: ಸಮಾವೇಶದಲ್ಲಿ ಸಿಎಂ ಆರೋಪ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ, ಮೇ.4ಪ್ರಧಾನಿ ನರೇಂದ್ರ ಮೋದಿ 10 ವರ್ಷದಲ್ಲಿ ಮಾಡಿದ್ದೇನೆಂಬುದನ್ನು ದೇಶದ ಜನತೆಗೆ ತಿಳಿಸಿ ಮತ ಕೇಳದೇ, ಹೊಸ ಹೊಸ ಸುಳ್ಳುಗಳನ್ನು ಹೊತ್ತುಕೊಂಡು ಬರುತ್ತಿದ್ದಾರಷ್ಟೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ನಗರದ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ದಾವಣಗೆರೆ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನರ ಪರ ಮತಯಾಚಿಸಿ ಮಾತನಾಡಿದ ಅವರು, ಬಡವರು, ರೈತರು, ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರಿಗೆ, ಯುವ ಜನರಿಗೆ 10 ವರ್ಷದಲ್ಲಿ ಏನು ಮಾಡಿದ್ದೀರೇಂಬುದನ್ನು ಮೋದಿ ಹೇಳದೇ, ಸುಳ್ಳು ಹೇಳಿ ಪ್ರಚಾರ ಮಾಡುತ್ತಿದ್ದಾರೆ ಎಂದರು.

ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಗೆದ್ದರೆ ಅದು ನಾನೇ ಗೆದ್ದಂತೆ. ಆದರೆ, ಇಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡಲು ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಸ್ಪರ್ಧಿಸಿದ್ದಾರೆ. ನೀವು ಇಲ್ಲಿ ಒಂದೇ ಒಂದು ಮತವನ್ನು ವಿನಯ್‌ಗೆ ಹಾಕಿದರೂ ಅದು ಬಿಜೆಪಿಗೆ ಮತ ನೀಡಿದಂತೆ. ನೀವೆಲ್ಲರೂ ಡಾ.ಪ್ರಭಾ ಮಲ್ಲಿಕಾರ್ಜುನಗೆ ಮತ ನೀಡಿ, ಆ ಮತ ನನಗೆ ನೀಡಿದಂತೆ. ನಾನೇ ಇಲ್ಲಿ ಕಾಂಗ್ರೆಸ್ ಅಭ್ಯ್ರಥಿಯಾಗಿ ಕಣದಲ್ಲಿದ್ದೇನೆಂದು ಮತ ಹಾಕಿ, ಭಾರಿ ಮತಗಳ ಅಂತರದಿಂದ ಕಾಂಗ್ರೆಸ್ಸನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ತಾವು ಪ್ರಧಾನಿಯಾದರೆ ವಿದೇಶದ ಬ್ಯಾಂಕ್‌ಗಳಲ್ಲಿರುವ ಕಪ್ಪು ಹಣವನ್ನು ತಂದು, ದೇಶದ ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಣ ಹಾಕುವುದಾಗಿ ನಂಬಿಸಿದ್ದ ಮೋದಿ 10 ವರ್ಷವಾದರೂ ₹15 ಸಹ ಜನರ ಖಾತೆಗೆ ಹಾಕಲಿಲ್ಲ. ವರ್ಷಕ್ಕೆ ₹2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ, ಜನರಿಗೆ ನಂಬಿಸಿದ್ದರು. 10 ವರ್ಷಕ್ಕೆ 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ಕೆಲಸ ಕೇಳಿದವರಿಗೆ ಪಕೋಡ ಮಾರಾಟ ಮಾಡಿಯೆನ್ನುವ ಮೂಲಕ ನಂಬಿಕೆ ದ್ರೋಹ ಮಾಡಿದರು. ಇಂತಹ ನಂಬಿಕೆ ದ್ರೋಹಿಗಳಿಗೆ ಮತ ಹಾಕಬೇಡಿ ಎಂದು ಅವರು ತಿಳಿಸಿದರು.

ರೈತರ ಆದಾಯ ದ್ವಿಗುಣಗಳಿಸುವುದಾಗಿ ನಂಬಿಸಿ, ಕೃಷಿ ಖರ್ಚು ಮೂರು ಪಟ್ಟು ಹೆಚ್ಚಾಗುವಂತೆ ಮಾಡಿದರು. ಬೆಲೆ ಏರಿಕೆಗೆ ಬ್ರೇಕ್ ಹಾಕುವುದಾಗಿ ನಂಬಿಸಿ, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ, ರಸಗೊಬ್ಬರ, ಬೇಳೆ, ಕಾಳು, ಅಡುಗೆ ಎಣ್ಣೆ ಹೀಗೆ ಎಲ್ಲದರ ಬೆಲೆ ಗಗನಮುಖಿಯಾಗುವಂತೆ ಮಾಡಿದರು. ಹೀಗೆ ನಿರಂತರ ಭಾರತೀಯರಿಗೆ ಮೋದಿ ಸರ್ಕಾರ ದ್ರೋಹ ಬಗೆಯುತ್ತಲೇ ಬಂದಿದೆ. ನಿಮ್ಮ ಪ್ರತಿಯೊಂದು ಮತಕ್ಕೂ ದ್ರೋಹ ಬಗೆದಿದ್ದಾರೆ. ಇದೇ ದ್ರೋಹಿಗಳಿಂದ ಮತ್ತೆ ಮತ್ತೆ ಜನ ಮೋಸ ಹೋಗಬಾರದು ಎಂದು ಅವರು ಎಚ್ಚರಿಸಿದರು.

ನುಡಿದಂತೆ ನಡೆದವರು ಮತ್ತು ನಂಬಿಕೆ ದ್ರೋಹಿಗಳ ಮಧ್ಯೆ ಚುನಾವಣೆ ನಡೆಯುತ್ತಿದೆ. ನೀವು ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಮತ ಹಾಕಿ. ನುಡಿದಂತೆ ನಡೆದು, 5ಕ್ಕೆ ಐದೂ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದೇವೆ. ನಿಮ್ಮ ಮತದ ಘನತೆ ಹೆಚ್ಚಿಸಿದವರಿಗೆ ನಿಮ್ಮ ಮತ ನೀಡಿ. ನಮ್ಮ ಗ್ಯಾರಂಟಿ ಯೋಜನೆಗಳನ್ನು ತೆಲಂಗಾಣದಲ್ಲೂ ಜಾರಿಗೊಳಿಸಲಾಗಿದೆ. ರಾಷ್ಟ್ರೀಯ

ಕಾಂಗ್ರೆಸ್ ಸಹ ಗ್ಯಾರಂಟಿ ಭರವಸೆ ಘೋಷಿಸಿದ್ದು, ನಾವು ನುಡಿದಂತೆ ನಡೆಯುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತಂದಂತೆ ಕೇಂದ್ರದಲ್ಲೂ ತರಬೇಕು. ರಾಜ್ಯದಲ್ಲಿ ಅತೀ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ಸನ್ನು ಗೆಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡಿ, ಬಿಜೆಪಿ ಸರ್ಕಾರವು ರಾಜ್ಯದ ಜನತೆಗೆ ಖಾಲಿ ಚೊಂಬು ಕೊಟ್ಟಿದೆ. ಈಗ ಮತ್ತೆ ಬಿಜೆಪಿ ನಾಯಕರು ರಾಜ್ಯಕ್ಕೆ ಅವೇ ಖಾಲಿ ಚೊಂಬು ಹಿಡಿದುಕೊಂಡು ಬಂದು ಮತ ಕೇಳುತ್ತಿದ್ದಾರೆ. ಬಸವಣ್ಣನ ನಾಡಿನಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ ಐದೂ ಗ್ಯಾರಂಟಿ ಯೋಜನೆ ತಂದು, ರಾಜ್ಯದ ಜನತೆಗೆ ಸ್ಪಂದಿಸಿದ್ದೇವೆ. ಹಿಂದೆ ದಾವಣಗೆರೆ ಮತದಾರರು ಶಾಮನೂರು ಶಿವಶಂಕರಪ್ಪನವರಿಗೆ ಲೋಕಸಭೆಗೆ ಆಯ್ಕೆ ಮಾಡಿ ಕಳಿಸಿದ್ದರು. ಈಗ ಅದೇ ಶಾಮನೂರು ಕಿರಿಯ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನರನ್ನು ಭಾರೀ ಮತಗಳ ಅಂತರದಿಂದ ಗೆಲ್ಲಿಸಿ, ಸಂಸದೆಯಾಗಿ ಮಾಡಿ ಲೋಕಸಭೆಗೆ ಕಳಿಸುವಂತೆ ಮತದಾರರಿಗೆ ಕೋರಿದರು.

ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜಿವಾಲಾ, ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಡಿ.ಜಿ.ಶಾಂತನಗೌಡ, ಎಂ.ಪಿ.ಲತಾ ಮಲ್ಲಿಕಾರ್ಜುನ, ಶಿವಗಂಗಾ ವಿ.ಬಸವರಾಜ, ಕೆ.ಎಸ್.ಬಸವಂತಪ್ಪ, ಬಿ.ದೇವೇಂದ್ರಪ್ಪ, ಮಾಜಿ ಸಚಿವರಾದ ಎಚ್.ಆಂಜನೇಯ, ಎಚ್.ಎಂ.ರೇವಣ್ಣ, ಪಿ.ಟಿ.ಪರಮೇಶ್ವರ ನಾಯ್ಕ, ಕೆ.ಸಿ.ಕೊಂಡಯ್ಯ, ಎಸ್.ರಾಮಪ್ಪ, ವಕೀಲ ಪ್ರಕಾಶ ಪಾಟೀಲ, ಎಚ್.ಎಸ್.ನಾಗರಾಜ, ಸೈಯದ್ ಸೈಫುಲ್ಲಾ, ಡಿ.ಬಸವರಾಜ, ನಂದಿಗಾವಿ ಶ್ರೀನಿವಾಸ, ಶ್ರೀಕಾಂತ ಬಗರೆ, ಕೆ.ಜಿ.ಶಿವಕುಮಾರ, ಎಸ್.ಮಲ್ಲಿಕಾರ್ಜುನ, ದಿನೇಶ ಕೆ.ಶೆಟ್ಟಿ, ಅಯೂಬ್ ಪೈಲ್ವಾನ್ ಇತರರು ಇದ್ದರು.

ಇದೇ ವೇಳೆ ಸಿಎಂ ಸಿದ್ದರಾಮಯ್ಯಗೆ ಬೆಳ್ಳಿ ಗಧೆ, ಪ್ರಿಯಾಂಕ ಗಾಂಧಿಗೆ ಬೆಳ್ಳಿ ಹೂಕುಂಡಲದ ಮಾದರಿ, ಡಿ.ಕೆ.ಶಿವಕುಮಾರ, ಸುರ್ವೀವಾಲಾಗೆ ಬೆಳ್ಳಿ ಸ್ಮರಣಿಕೆ ನೀಡಿ, ಸನ್ಮಾನಿಸಲಾಯಿತು.

- - - ಬಾಕ್ಸ್‌

ಪಕ್ಷೇತರ ವಿನಯಗೆ ನನ್ನ ಬೆಂಬಲವಿಲ್ಲ: ಸಿಎಂ - ಡಾ.ಪ್ರಭಾ ಗೆದ್ದರೆ ನಾನೇ ಗೆದ್ದಂತೆ: ಸಿದ್ದರಾಮಯ್ಯ ಘೋಷಣೆ ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರಗೆ ನನ್ನ ಬೆಂಬಲ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ನಗರದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ದಾವಣಗೆರೆ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನರ ಪರ ಮತಯಾಚಿಸಿ ಮಾತನಾಡಿದ ಅವರು, ವಿನಯ್ ಕಾಂಗ್ರೆಸ್ಸಿಗೆ ಬಂದು 6 ತಿಂಗಳಷ್ಟೇ ಆಗಿತ್ತು ಎಂದರು.

ಶಾಮನೂರು ಶಿವಶಂಕರಪ್ಪ, ಎಸ್ಸೆಸ್ ಮಲ್ಲಿಕಾರ್ಜುನ ಕುಟುಂಬ ಆರಂಭದಿಂದಲೂ ಕಾಂಗ್ರೆಸ್ಸಿನಲ್ಲೇ ಇದೆ. ಡಾ.ಪ್ರಭಾ ಮಲ್ಲಿಕಾರ್ಜುನ ಅತ್ಯಂತ ಉತ್ತಮ ಅಭ್ಯರ್ಥಿಯಾಗಿದ್ದು, ಡಾ.ಪ್ರಭಾರನ್ನು ಗೆಲ್ಲಿಸಿದರೆ ನನ್ನನ್ನೇ ಗೆಲ್ಲಿಸಿ ಎಂದು ಅವರು ಮನವಿ ಮಾಡಿದರು. - - - -4ಕೆಡಿವಿಜಿ10, 11, 12:

ದಾವಣಗೆರೆಯಲ್ಲಿ ಶನಿವಾರ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಳ್ಳಿಗದೆ ನೀಡಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಸನ್ಮಾನಿಸಿದರು. -4ಕೆಡಿವಿಜಿ13, 14:

ದಾವಣಗೆರೆಯಲ್ಲಿ ಶನಿವಾರ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಎಐಸಿಸಿ ನಾಯಕಿ ಪ್ರಿಯಾಂಕ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ರಣದೀಪ ಸಿಂಗ್ ಸುರ್ಜೀವಾಲಾ, ಶಾಮನೂರು ಶಿವಶಂಕರಪ್ಪ, ಎಸ್ಸೆಸ್ ಮಲ್ಲಿಕಾರ್ಜುನ ಇತರರು ಇದ್ದರು.