ಸಾರಾಂಶ
ಚಳ್ಳಕೆರೆ: ದೇಶದ ಆಂತರಿಕ ಭದ್ರತೆಗೆ ಸವಾಲಾಗಿರುವ ಉಗ್ರರ ಸದೆಬಡಿಯಲು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಅಗತ್ಯವೆಂದು ಚಿತ್ರದುರ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.
ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿ ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಉಗ್ರರ ಮಟ್ಟ ಹಾಕುವಲ್ಲಿ ಮೋದಿ ಅವರು ಈಗಾಗಲೇ ಹಲವು ಕ್ರಮ ಕೈಗೊಂಡಿದ್ದು, ಜನ ಮನ್ನಣೆಗೆ ಪಾತ್ರರಾಗಿದ್ದಾರೆ. ಸಂಕಷ್ಟ ಸಂದರ್ಭ ಸೃಷ್ಟಿಯಾದಾಗ ದೇಶವನ್ನು ಪಾರು ಮಾಡಲು ಮೋದಿ ಆಡಳಿತ ಅತ್ಯಗತ್ಯವೆಂದರು.ಕಳೆದ 10 ವರ್ಷಗಳಿಂದ ಉತ್ತಮ ಆಡಳಿತದ ಮೂಲಕ ವಿಶ್ವಮನ್ನಣೆಗಳಿಸಿದ ಎನ್‍ಡಿಎ ನೇತೃತ್ವದ ನರೇಂದ್ರ ಮೋದಿ ಅವರ ಸರ್ಕಾರ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಾಮಾಣಿಕ ಸೇವೆಸಲ್ಲಿಸುತ್ತಾ ಬಂದಿದೆ. ಇಂದು ವಿಶ್ವದ ಪ್ರತಿಯೊಂದು ರಾಷ್ಟ್ರವೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಗೌರವದಿಂದ ಕಾಣುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವ ಮತ್ತಷ್ಟು ಹೆಚ್ಚಲು ಏ.26ರಂದು ನಡೆಯುವ ಲೋಕಸಭಾ ಚುನಾವಣೆಗೆ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಗೆಲ್ಲಿಸುವಂತೆ ಮನವಿ ಮಾಡಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಮೋದಿ ಅವರು ಈಗಾಗಲೇ 5300 ಕೋಟಿ ರು. ಅನುದಾನ ಘೋಷಿಸಿದ್ದಾರೆ. ಕೆಲ ತಾಂತ್ರಿಕ ಕಾರಣದಿಂದ ಅನುದಾನ ಬಿಡುಗಡೆಯಾಗಿಲ್ಲ. ಬಜೆಟ್‌ನಲ್ಲಿ ಘೋಷಣೆಯಾದ ಅನುದಾನ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ಶೀಘ್ರ ಕರ್ನಾಟಕಕ್ಕೆ ದೊರಯುತ್ತದೆ. ಭದ್ರಾ ಮೇಲ್ದಂಡೆ ಯೋಜನೆ ಸಾಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಖುದ್ದು ಆಸಕ್ತಿವಹಿಸಿ ಅನುದಾನ ಘೋಷಣೆ ಮಾಡಿದ್ದಾರೆ. ಜಿಲ್ಲೆಯ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಮೂಲಕ ಉದ್ಯೋಗ ಅವಕಾಶ ಕಲ್ಪಿಸುವ ಉದ್ದೇಶವಿದ್ದು, ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬೆಂಬಲಿಸುವಂತೆ ಕಾರಜೋಳ ವಿನಂತಿಸಿದರು.ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ, ತಳಕು ಹೋಬಳಿ ದೊಡ್ಡಉಳ್ಳಾರ್ತಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಘಟಪರ್ತಿ, ಹೊನ್ನೂರು, ದೇವರೆಡ್ಡಿಹಳ್ಳಿ, ಬೇಡರೆಡ್ಡಿಹಳ್ಳಿ, ಹನುಮಂತನಹಳ್ಳಿ ಮುಂತಾದ ಕಡೆಗಳಲ್ಲಿ ಇದೇ ಸಂದರ್ಭಧಲ್ಲಿ ಗೋವಿಂದ ಕಾರಜೋಳ ಮತಯಾಚನೆ ಮಾಡಿದರು. ಇದಕ್ಕೂ ಮುನ್ನ ತಳಕು ಗ್ರಾಮಕ್ಕೆ ಭೇಟಿ ನೀಡಿದ ಗೋವಿಂದ ಕಾರಜೋಳ ತರಾಸು ಭಾವಚಿತ್ರಕ್ಕೆ ನಮನಸಲ್ಲಿಸಿ, ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ರಾಜ್ಯದ ಮಾಜಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ಎಲ್ಲಾ ಜಿಲ್ಲೆಯ ಮಾಹಿತಿ ಇದೆ. ಈ ಹಿಂದೆ ಸಣ್ಣ ನೀರಾವರಿ ಸಚಿವನಾದಾಗ ಚಳ್ಳಕೆರೆ ತಾಲೂಕಿನ 2-3 ಬ್ಯಾರೇಜ್ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದೆ. ಚಿತ್ರದುರ್ಗ ಜಿಲ್ಲೆ ನನಗೆ ಹೊಸದಲ್ಲ, ಜಿಲ್ಲೆಯ ಬಗ್ಗೆ ಅಪಾರವಾದ ಕಾಳಜಿ ಇದೆ. ಕಾಂಗ್ರೆಸ್ಸಿಗರು ಮಾಡುತ್ತಿರುವ ಅಪಪ್ರಚಾರ ನಂಬದೆ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯಾಗಲು ಬಿಜೆಪಿಗೆ ಶಕ್ತಿ ತುಂಬಬೇಕು ಎಂದರು.ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಮಾತನಾಡಿ, ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಗೋವಿಂದ ಕಾರಜೋಳ ರಾಜ್ಯದ ಹಿರಿಯ ರಾಜಕಾರಣಿ. ಎರಡ್ಮೂರು ಬಾರಿ ಸಚಿವರಾದರೂ ಪ್ರಾಮಾಣಿಕತೆಯಿಂದ ಎಲ್ಲರ ವಿಶ್ವಾಸಗಳಿಸಿದ್ದಾರೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಬೇಕೆಂದು ಪಕ್ಷ, ಮುಖಂಡರ, ಕಾರ್ಯಕರ್ತರ ವಿಶ್ವಾಸಕ್ಕೆ ಗೌರವ ನೀಡಿ ಅಭ್ಯರ್ಥಿಯಾಗಿದ್ದಾರೆ. ಚುನಾವಣೆಯಲ್ಲಿ ಅವರನ್ನು ಜಯಶೀಲರನ್ನಾಗಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮುಖಂಡರು ಮತ್ತು ಕಾರ್ಯಕರ್ತರ ಮೇಲಿದೆ. ಕಾರ್ಯಕರ್ತರು ಇನ್ನೂ 12 ದಿನಗಳ ಕಾಲ ಮನೆಸೇರದೆ ಗೋವಿಂದ ಕಾರಜೋಳ ಅವರ ಗೆಲುವಿಗೆ ಶ್ರಮಿಸಬೇಕು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ಮುರುಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಜೆಡಿಎಸ್ ಮುಖಂಡ, ಮೊಳಕಾಲ್ಮುರು ಕ್ಷೇತ್ರದ ಪರಾಜಿತ ಅಭ್ಯರ್ಥಿ ವೀರಭದ್ರಪ್ಪ(ಭದ್ರಿ), ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮಿನಾರಾಯಣ, ಮಂಡಲಾಧ್ಯಕ್ಷ ಈ.ರಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ ಚನ್ನಗಾನಹಳ್ಳಿ ಮಲ್ಲೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಎನ್.ಓಬಳೇಶ್, ಜಯಪಾಲಯ್ಯ, ಮುಖಂಡರಾದ ಕುಪೇಂದ್ರರೆಡ್ಡಿ, ಕಾಲುವೇಹಳ್ಳಿ ಶ್ರೀನಿವಾಸ್, ರಂಗಸ್ವಾಮಿ, ಬಾಬು, ವೆಂಕಟಪ್ಪ ಮುಂತಾದವರು ಉಪಸ್ಥಿತರಿದ್ದರು.