ಮೋದಿ ಜಾಗತಿಕ ಮಟ್ಟದ ಮಹಾನ್ ಸುಳ್ಳುಗಾರ: ಜಿ.ಸಿ.ಸುರೇಶ್ ಬಾಬು

| Published : May 22 2024, 12:45 AM IST

ಮೋದಿ ಜಾಗತಿಕ ಮಟ್ಟದ ಮಹಾನ್ ಸುಳ್ಳುಗಾರ: ಜಿ.ಸಿ.ಸುರೇಶ್ ಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಕಮ್ಯುನಿಷ್ಟ್ ಪಕ್ಷದ ವತಿಯಿಂದ ಮಂಗಳವಾರ ಚಿತ್ರದುರ್ಗದಲ್ಲಿ ಕಾರ್ಮಿಕ ದಿನಾಚರಣೆ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಮಟ್ಟದ ಮಹಾನ್ ಸುಳ್ಳುಗಾರ ಎಂದು ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಸುರೇಶ್ ಬಾಬು ಹೇಳಿದರು.

ಭಾರತ ಕಮ್ಯೂನಿಸ್ಟ್ ಪಕ್ಷ, ಎಐಟಿಯುಸಿ, ಚಿತ್ರದುರ್ಗ ಜಿಲ್ಲಾ ಕಾರ್ಮಿಕರ ಸಾಮೂಹಿಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಮಿಕರ (ಮೇ ಡೇ) ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸ್ವಾತಂತ್ರ್ಯಾನಂತರ ಭಾರತದಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿಯೋರ್ವರು ಇಷ್ಟೊಂದು ಸುಳ್ಳುಗಳ ಹೇಳುತ್ತಾರೆಂದು ಭಾರತೀಯರು ಕನಸಿನಲ್ಲಿಯೂ ಊಹಿಸಿರಲಿಲ್ಲ. ಸುಳ್ಳುಗಳ ಹೇಳಿಕೊಂಡು ಜನರ ವಂಚಿಸುತ್ತಲೇ ಅಧಿಕಾರ ಮಾಡಬಹುದೆಂಬುದಕ್ಕೆ ಮೋದಿ ತಾಜಾ ಉದಾಹರಣೆ ಎಂದರು.

ಹಿಂದುಳಿದ ಹಾಗೂ ಶೋಷಿತ ಸಮುದಾಯದ ಬಗ್ಗೆ ಎಂದೂ ಯೋಚಿಸದ ಮೋದಿ ಇದೀಗ ಚುನಾವಣೆ ಸಮಯದಲ್ಲಿ ಈ ಸಮುದಾಯಗಳ ಬಗ್ಗೆ ವಿಪರೀತ ಕರುಣೆ ತೋರಿಸುತ್ತಿದ್ದಾರೆ. ಇದೂ ಕೂಡ ಸುಳ್ಳು ಎಂಬ ಭಾವನೆ ಜನರಲ್ಲಿ ಮೂಡಿದೆ. ಅಭಿವೃದ್ಧಿ ರಾಜಕಾರಣ ಬಿಟ್ಟು ಕೇವಲ ಧರ್ಮಾಧಾರಿತ ನೆಲೆಯಲ್ಲಿ ಕೋಮುವಾದ ಬಿತ್ತುತ್ತ ಮೋದಿ ಅಧಿಕಾರ ನಡೆಸುತ್ತಿದ್ದಾರೆ. ಇಂತಹ ರಾಜಕಾರಣ ಬಹುದಿನ ನಡೆಯುುವುದಿಲ್ಲ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದೇಶದ ಜನ ತಕ್ಕ ಪಾಠ ಕಲಿಸುವ ಎಲ್ಲ ಕುರುಹುಗಳು ಮೂಡಿವೆ ಎಂದರು.

ಎಪಿಎಂಸಿ ಹಮಾಲರ ಸಂಘದ ಅಧ್ಯಕ್ಷ ಬಿ.ಬಸವರಾಜಪ್ಪ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಮತ್ತು ಕಾರ್ಮಿಕರ ವಿರುದ್ಧ ಕಾನೂನುಗಳನ್ನು ಜಾರಿ ಮಾಡುವುದರ ಮೂಲಕ ಜನ ವಿರೋಧಿಗಳಾಗಿವೆ. ಕೇಂದ್ರ ಸರ್ಕಾರ ಕಾರ್ಮಿಕರ ಹಿತ ಕಾಯುವ ಬದಲು ಕಾರ್ಪೋರೇಟ್ ಸಂಸ್ಧೆಗಳ ಉಳಿಸುವ ಕೆಲಸ ಮಾಡುತ್ತಿದೆ. ಶ್ರೀಮಂತರ ಪರವಾಗಿ ಕಾನೂನುಗಳನ್ನು ಜಾರಿ ಮಾಡಿ ಅವರ ನೆರವಿಗೆ ನಿಂತಿದೆ ಎಂದು ದೂರಿದರು.

ಬಾಪೂಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಕೆ.ಎಂ.ವೀರೇಶ್, ಮಾತನಾಡಿ ತಮ್ಮ ವಿದ್ಯಾ ಸಂಸ್ಥೆಯಲ್ಲಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಾಧ್ಯವಾದಷ್ಟು ಉಚಿತ ಶಿಕ್ಷಣ ನೀಡಲಾಗುವುದು. ಕಟ್ಟಡ ಕಾರ್ಮಿಕ ಕುಟುಂಬದವರು ತಮ್ಮ ಮಕ್ಕಳನ್ನು ಓದಿಸಲು ಸಂಕಷ್ಟ ಎದುರಿಸಬಾರದೆಂದರು.

ಒಬ್ಬ ವ್ಯಕ್ತಿ ಹೆಚ್ಚು ಅವಮಾನಗಳನ್ನು ಎದುರಿಸಿದರೆ ಭವಿಷ್ಯದಲ್ಲಿ ಆತನಿಗೆ ಸನ್ಮಾನಗಳು ಕಾದಿರುತ್ತವೆ. ಕಷ್ಟಗಳು, ಅವಮಾವ ಮೆಟ್ಟಿ ನಿಲ್ಲಬೇಕು. ತಾವು ವಿದ್ಯಾ ಸಂಸ್ಥೆ ಕಟ್ಟಿದಾಗ ಸಾಕಷ್ಟು ಸಂಕಷ್ಟ ಪರಿಸ್ಥಿತಿ ಎದುರಿಸಿದೆ. ಇದೀಗ ಎಲ್ಲವೂ ಸುಧಾರಣೆ ಹಂತದಲ್ಲಿದೆ. ನಮ್ಮ ವಿದ್ಯಾ ಸಂಸ್ಥೆಯಲ್ಲಿ 1 ರಿಂದ 10ನೇ ತರಗತಿ ಸೇರಿದಂತೆ ಇತರೆ ಶಿಕ್ಷಣ ಸಂಸ್ಥೆಗಳನ್ನು ನಡೆಸಲಾಗುತ್ತದೆ. ಇದರಲ್ಲಿ 1 ರಿಂದ 10ನೇ ತರಗತಿವರೆಗೂ ಕಾರ್ಮಿಕ ಮಕ್ಕಳಿಗೆ ಸಾಧ್ಯವಾದಷ್ಟು ಉಚಿತ ಶಿಕ್ಷಣ ನೀಡಲಾಗುವುದು ಎಂದರು.

ಸರ್ಕಾರಗಳು ಶಿಕ್ಷಣ ನೀತಿ ಜಾರಿ ಮಾಡಿದಾಗ ಎಲ್ಲರನ್ನು ಒಳಗೊಳ್ಳುವಂತಿರಬೇಕು. ವಿದ್ಯಾಭ್ಯಾಸ ಕೈಗೆಟುಕುವಂತಿದ್ದರೆ ಎಲ್ಲ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಬಡವರ ಮಕ್ಕಳು ಸಹ ಡಾಕ್ಟರ್, ಇಂಜಿನಿಯರ್‌ಗಳಾಗುತ್ತಾರೆ. ಕಾರ್ಮಿಕ ಸಂಘಟನೆಗಳು ಉತ್ತಮ ಕೆಲಸ ಮಾಡುವುದರ ಮೂಲಕ ಕಾರ್ಮಿಕರ ಹಿತ ಕಾಯಬೇಕು. ಈಗ ಕೈಗಾರಿಕೆಗಳು ಇಲ್ಲವಾಗಿ ಕಾರ್ಮಿಕರು ಸಹಾ ಬೀದಿಪಾಲಾಗಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಮೈಸೂರು ಮುಕ್ತ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದ ಬಾಪೂಜಿ ಸಮೂಹ ಸಂಸ್ಥೆಗಳು ಹಾಗೂ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಡಾ.ಕೆ.ಎಂ.ವಿರೇಶ್ ರವರನ್ನು ಗೌರವಿಸಲಾಯಿತು. ಸಿಪಿಐ ರಾಜ್ಯ ಮಂಡಳಿ ನಾಯಕ ಅಮ್ಜದ್, ಎಐಟಿಯುಸಿಯ ಜಿಲ್ಲಾ ಮಂಡಳಿಯ ಗೌರವಾಧ್ಯಕ್ಷ ಸಿ.ವೈ.ಶಿವರುದ್ರಪ್ಪ, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಎಐಟಿಯುಸಿಯ ರಾಜ್ಯ ಉಪಾಧ್ಯಕ್ಷ ಟಿ.ಆರ್.ಉಮಾಪತಿ, ತಾಲೂಕು ಸಹ ಕಾರ್ಯದರ್ಶಿಗಳಾದ ಜಯದೇವ ಮೂರ್ತಿ, ಜಾಫರ್ ಷರೀಫ್, ಕುಮಾರಸ್ವಾಮಿ, ದುರುಗೇಶ್, ನಾಗಮ್ಮ, ಲಕ್ಷ್ಮಮ್ಮ, ಚೌಡಪ್ಪ, ನಾಗರಾಜ್, ಸತ್ಯಕೀರ್ತಿ ಇದ್ದರು.