ಮೋದಿ ಪ್ರಮಾಣ; ರಾಜ್ಯಾದ್ಯಂತ ಬಿಜೆಪಿ-ಜೆಡಿಎಸ್‌ ಸಂಭ್ರಮ

| Published : Jun 10 2024, 12:48 AM IST / Updated: Jun 10 2024, 07:26 AM IST

ಮೋದಿ ಪ್ರಮಾಣ; ರಾಜ್ಯಾದ್ಯಂತ ಬಿಜೆಪಿ-ಜೆಡಿಎಸ್‌ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ನರೇಂದ್ರ ಮೋದಿಯವರು ಸತತ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಭಾನುವಾರ ರಾಜ್ಯಾದ್ಯಂತ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ಬೆಂಗಳೂರು :  ನರೇಂದ್ರ ಮೋದಿಯವರು ಸತತ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಭಾನುವಾರ ರಾಜ್ಯಾದ್ಯಂತ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ಸಂಜೆ 7.15ಕ್ಕೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿಯಾಗಿ ಮೋದಿಯವರು ಮೂರನೇ ಬಾರಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಜಿಲ್ಲಾ ಬಿಜೆಪಿ ಕಚೇರಿಗಳ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ಮೋದಿ ಪರ ಜಯಘೋಷಗಳು ಮೊಳಗಿದವು. ಬಿಜೆಪಿ ಬಾವುಟ ಬೀಸುತ್ತಾ ಭಾರತ ಮಾತಾಕಿ ಜೈ, ಮೋದಿಕಿ ಜೈ ಎಂದು ಘೋಷಣೆ ಕೂಗಿದರು. ಈ ಕಾರ್ಯಕ್ರಮವನ್ನು ಬಿಜೆಪಿ ರಾಜ್ಯಾದ್ಯಂತ ಹಬ್ಬದ ರೀತಿಯಲ್ಲಿ ಆಚರಿಸಿತು. ಪಕ್ಷದ ಕಚೇರಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಎಲ್‌ಇಡಿ ಪರದೆಗಳ ಮೂಲಕ ಪ್ರಮಾಣ ವಚನ ಸ್ವೀಕಾರ ಸಮಾರಂಭ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.

ಮಂಡ್ಯದಲ್ಲಿ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸೇರಿದ ಮೈತ್ರಿ ಪಕ್ಷದ ನೂರಾರು ಕಾರ್ಯಕರ್ತರು, ಮೋದಿ, ಕುಮಾರಸ್ವಾಮಿ ಪರ ಜೈಕಾರ ಕೂಗಿದರು. ನಗರದ ಕಾಳಿಕಾಂಬ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಾಲಯದ ಆವರಣದಲ್ಲಿ ಬಿಜೆಪಿ ಕಾರ್ಯಕರ್ತ ಶಿವಕುಮಾರ ಆರಾಧ್ಯ ಉರುಳು ಸೇವೆ ಸಲ್ಲಿಸಿದರು. ಇದೇ ವೇಳೆ, ಮೈಸೂರು ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಈ.ಸಿ.ನಿಂಗರಾಜ್ ಗೌಡ ಅವರು ನಗರದ ಮಿಮ್ಸ್ ಹೆರಿಗೆ ಆಸ್ಪತ್ರೆ ಬಳಿ ಅನ್ನದಾಸೋಹ ನಡೆಸಿದರು. ಬೆಳಗ್ಗೆ ಉಪಹಾರ ಗಂಜಿ, ಮಧ್ಯಾಹ್ನ ಮತ್ತು ರಾತ್ರಿ ಊಟ, ಹಣ್ಣಿನ ವ್ಯವಸ್ಥೆ ಮಾಡಿದರು.

ಹುಬ್ಬಳ್ಳಿಯಲ್ಲಿ ಕರವೇ ಪ್ರವೀಣ ಶೆಟ್ಟಿ ಬಣದ ಕಾರ್ಯಕರ್ತರು ಹಳೇ ಕೋರ್ಟ್‌ ಬಳಿ ಇರುವ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಬಿಜೆಪಿ ಯುವ ಮುಖಂಡ ಸಿದ್ಧಾರ್ಥ ಸಿಂಗ್ ನೇತೃತ್ವದಲ್ಲಿ ನಗರದ ಭಟ್ಟರಹಳ್ಳಿ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಬೃಹತ್‌ ಬೈಕ್‌ ರ್‍ಯಾಲಿ ನಡೆಸಲಾಯಿತು. ಮಾಜಿ ಸ್ಪೀಕರ್ ಕೆ‌.ಜಿ.ಬೋಪಯ್ಯ ಸಮ್ಮುಖದಲ್ಲಿ ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಯಾದಗಿರಿಯಲ್ಲಿ ಇಷ್ಟಸಿದ್ಧಿ ಆಂಜನೇಯ ದೇವಾಲಯದಲ್ಲಿ ಮೋದಿಗೆ ಶುಭ ಕೋರಿ ವಿಶೇಷ ಪೂಜೆ ನಡೆಸಲಾಯಿತು. ಮೈಸೂರಿನಲ್ಲಿ ಯದುವೀರ್ ಒಡೆಯರ್ ಸೇನೆ ಹಾಗೂ ನರೇಂದ್ರ ಮೋದಿ ಅಭಿಮಾನಿ ಬಳಗದವರು ನಗರದ ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಸಾರ್ವಜನಿಕರಿಗೆ ಚಹ ವಿತರಿಸಿ ಸಂಭ್ರಮಿಸಿದರು.

ಇದೇ ವೇಳೆ, ಚನ್ನಪಟ್ಟಣ, ಕಂಪ್ಲಿ, ಎಚ್‌.ಡಿ.ಕೋಟೆ, ರಾಮನಗರ, ಚನ್ನಗಿರಿ, ಬಂಗಾರಪೇಟೆ, ಶಿವಮೊಗ್ಗ, ಉಡುಪಿ, ಹರಪನಹಳ್ಳಿ ಸೇರಿ ರಾಜ್ಯದ ಇತರೆಡೆಯೂ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ಜನರಿಗೆ ಹೋಳಿಗೆ ಊಟ:

ಮೋದಿ ಪ್ರಮಾಣವಚನ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದ ವೀರೇಶ ಉಜ್ಜನಗೌಡ್ರ ಮಾಲೀಕತ್ವದ ಮೋದಿ ಹೋಟೆಲ್‌ನವರು ಜನರಿಗೆ ಹೋಳಿಗೆ ಊಟದ ವ್ಯವಸ್ಥೆ ಮಾಡಿದ್ದರು. ಮಧ್ಯಾಹ್ನ 12ರಿಂದ ಸಾರ್ವಜನಿಕರಿಗೆ ಜೋಳದ ರೊಟ್ಟಿ, ಎರಡು ಬಗೆಯ ಪಲ್ಯ, ಹೋಳಿಗೆ, ಅನ್ನ-ಸಾಂಬಾರ ಬಡಿಸಿದರು. 4 ಸಾವಿರಕ್ಕೂ ಅಧಿಕ ಜನ ಸರದಿ ಸಾಲಿನಲ್ಲಿ ನಿಂತು ಊಟ ಮಾಡಿದರು.ಮೋದಿ ಪ್ರಮಾಣವಚನಕ್ಕೆ ಪೇಜಾವರ ಶ್ರೀ ಸಾಕ್ಷಿ:

ದೆಹಲಿಯಲ್ಲಿ ಭಾನುವಾರ ನಡೆದ ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಸಾಕ್ಷಿಯಾದರು.

ಪ್ರಮಾ‍ಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಪೇಜಾವರ ಶ್ರೀಗಳಿಗೆ ಶನಿವಾರ ಸಂಜೆ ದೆಹಲಿಯಿಂದ ವಿಶೇಷ ಆಹ್ವಾನ ಬಂದಿತ್ತು. ಅದರಂತೆ ಶ್ರೀಗಳು ಭಾನುವಾರ ಬೆಂಗಳೂರು ವಿಮಾನ ನಿಲ್ದಾಣದಿಂದ ಬೆಳಗ್ಗೆ 11.30ಕ್ಕೆ ವಿಮಾನದಲ್ಲಿ ದೆಹಲಿಗೆ ತೆರಳಿದ್ದರು. ನಂತರ ಸಂಜೆ ದೇಶದ ಇತರ ಸಾಧುಸಂತರ ಜೊತೆಯಲ್ಲಿ ಆಸೀನರಾಗಿ ಪ್ರಮಾಣ ವಚನ ಸ್ವೀಕಾರವನ್ನು ವೀಕ್ಷಿಸಿದರು. ಈ ಹಿಂದೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ಸಂದರ್ಭದಲ್ಲಿ ಪೇಜಾವರ ಶ್ರೀಗಳು ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ವಹಿಸಿದ್ದರು.ಗಡಿಜಿಲ್ಲೆ ಮಹಿಳೆ ಭಾಗಿ:ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಚಾಮರಾಜನಗರ ತಾಲೂಕಿನ ಉಮ್ಮತೂರು ಗ್ರಾಮದ ವರ್ಷಾ ಅವರು ಭಾಗವಹಿಸಿದ್ದರು.ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದ ಪ್ರಗತಿಪರ ರೈತರಾದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿ ಮನ್ ಕಿ ಬಾತ್ ಮಾತುಗಳಿಂದ ಪ್ರೇರಣೆಗೊಂಡು ಬಾಳೆದಿಂಡಿನಿಂದ ವಸ್ತುಗಳನ್ನು ತಯಾರಿಸಿ ಉದ್ಯಮಿಯಾಗಿದ್ದಾರೆ.ಚಾಮರಾಜನಗರ ಕೆವಿಕೆ ಮತ್ತು ಆತ್ಮನಿರ್ಭರ ಯೋಜನೆಯ ಮೂಲಕ ಪ್ರೇರಪಣೆಗೊಂಡು ಬಾಳೆದಿಂಡಿನಿಂದ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮೌಲ್ಯವರ್ಧನೆ ಮಾಡಿ ಬದುಕು ಕಟ್ಟುಕೊಂಡಿರುವ ವರ್ಷಾ ಅವರಿಗೆ ಪ್ರಧಾನಿ ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ಕಾರ್ಯಾಲಯದಿಂದ ಆಹ್ವಾನಿಸಿದ್ದು ತುಂಬಾ ಖುಷಿ ತಂದಿದೆ ಎಂದು ವರ್ಷಾ ಸಂತಸ ವ್ಯಕ್ತಪಡಿಸಿದರು.

ಅಕ್ಕಿಕಾಳು ಗಾತ್ರದ ಮೋದಿ ಚಿತ್ರ ರಚಿಸಿದ ಕಲಾವಿದ:

ಭಾರತದ ಪ್ರಧಾನಿಯಾಗಿ ಭಾನುವಾರ ನರೇಂದ್ರ ಮೋದಿಯವರು ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗಡಿನಾಡು ಕಾಸರಗೋಡಿನ ಸೂಕ್ಷ್ಮ ಕುಸುರಿಯ ಕಲಾವಿದರೊಬ್ಬರು ಅಕ್ಕಿಕಾಳು ಗಾತ್ರದಲ್ಲಿ ಮೋದಿಯ ಕಲಾಕೃತಿ ರಚಿಸಿ ಗಮನ ಸೆಳೆದಿದ್ದಾರೆ. ಈ ಚಿತ್ರವನ್ನು ಪ್ರಧಾನಿ ಮೋದಿಗೆ ಅರ್ಪಿಸುತ್ತಿರುವುದಾಗಿ ಅವರು ಹೇಳಿದ್ದಾರೆ.

ಕಾಸರಗೋಡಿನ ವೆಂಕಟೇಶ್‌ ಆಚಾರ್ಯ ಎಂಬುವರೇ ಈ ಗಮನಾರ್ಹ ಸಾಧನೆ ಮಾಡಿದ ಕಲಾವಿದ. ಕಳೆದ ಎರಡು ದಿನಗಳ ಹಿಂದೆ ಗಮ್‌ನಿಂದ ಅಕ್ಕಿಕಾಳು ಗಾತ್ರದಲ್ಲಿ ನರೇಂದ್ರ ಮೋದಿ ಚಿತ್ರ ಮೂಡಿಸಿ ಸೈ ಎನಿಸಿದ್ದಾರೆ. ಗಮ್‌ನ್ನು ಸೂಜಿಯಿಂದ ತೆಗೆದು ಅತ್ಯಂತ ಸೂಕ್ಷ್ಮವಾಗಿ ಅಕ್ಕಿಕಾಳು ಗಾತ್ರದಲ್ಲಿ ವಾಟರ್‌ ಕಲರ್‌ ಬಳಸಿ ಬಿಳಿ ಧಿರಿಸಿನ ಮೇಲೆ ಕೋಟು ಹಾಕಿದ ಮೋದಿಯನ್ನು ಚಿತ್ರಿಸಿದ್ದಾರೆ. ಇದನ್ನು ಒಂದೇ ದಿನದಲ್ಲಿ ಮಾಡಿದ್ದಾರೆ.ಈ ಹಿಂದೆ ಇವರು ಸಾಸಿವೆ ಕಾಳಿಗಿಂತ ಸಣ್ಣದಾದ ಭಾರತದ ತ್ರಿವರ್ಣ ಧ್ವಜ ರಚನೆ, ಹತ್ತು ಮಿಲಿ ಚಿನ್ನದಲ್ಲಿ ಸ್ವಚ್ಛ ಭಾರತ್ ಲಾಂಛನ, ಒಂದು ಅಕ್ಕಿ ಕಾಳಿನಲ್ಲಿ 36 ಅಕ್ಷರ, ಒಂದು ಪೋಸ್ಟ್ ಕಾರ್ಡ್‌ನಲ್ಲಿ 6,524 ಬಾರಿ ಓಂ ನಮಃ ಶಿವಾಯ, ಬೆಂಕಿ ಕಡ್ಡಿ ತುದಿಯಲ್ಲಿ ಶಬರಿಮಲೆ ಸನ್ನಿಧಾನ...ಹೀಗೆ ಹಲವಾರು ಕಲಾಕೃತಿಗಳನ್ನು ರಚಿಸಿ ಗಮನ ಸೆಳೆದಿದ್ದಾರೆ. ಮೈಕ್ರೋ ಆರ್ಟಿಸ್ಟ್ ಎಂದೇ ಪರಿಚಿತರಾಗಿದ್ದಾರೆ.

ಜೊತೆಗೆ, 2015ರಲ್ಲಿ ಹಿಂದೂಸ್ತಾನ್ ವಾಟ್ಸಪ್ ಗ್ರೂಪ್‌ನ್ನು ಸ್ಥಾಪಿಸಿ, ಅದರ ಮೂಲಕ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.