ಉದ್ಯೋಗಕ್ಕಾಗಿ ರಷ್ಯಾಗೆ ಹೋದ ಭಾರತೀಯರ ಸಾವು, ಮೋದಿ ಪ್ರಶ್ನಿಸಿ

| Published : Aug 16 2024, 12:47 AM IST

ಉದ್ಯೋಗಕ್ಕಾಗಿ ರಷ್ಯಾಗೆ ಹೋದ ಭಾರತೀಯರ ಸಾವು, ಮೋದಿ ಪ್ರಶ್ನಿಸಿ
Share this Article
  • FB
  • TW
  • Linkdin
  • Email

ಸಾರಾಂಶ

70 ವರ್ಷಗಳ ಇತಿಹಾಸದಲ್ಲಿ ಬೇರೆ ಬೇರೆ ದೇಶಗಳಿಗೆ ಭಾರತೀಯರು ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಹೋಗಿದ್ದಾರೆ. ಇತಿಹಾಸದಲ್ಲಿಯೇ ಇಂತಹ ಸಂಗತಿಗಳು ನಡೆದಿಲ್ಲ. ಆದರೆ, ಮೋದಿ ಅವರ ಕಾಲದಲ್ಲಿ ಉದ್ಯೋಗಕ್ಕಾಗಿ ಹೋಗಿ ಯುದ್ಧದಲ್ಲಿ ಮಡಿದು ಬರುವುದು ದುರಂತದ ಸಂಗತಿ.

ಧಾರವಾಡ:

ಉದ್ಯೋಗಕ್ಕಾಗಿ ರಷ್ಯಾಕ್ಕೆ ಹೋದ ಭಾರತೀಯರನ್ನು ಯುದ್ಧದ ಕಾರ್ಯಕ್ಕೆ ಬಳಸಿಕೊಂಡ ಪರಿಣಾಮ ಎಂಟು ಭಾರತೀಯರು ಮೃತಪಟ್ಟಿದ್ದು, ಈ ಬಗ್ಗೆ ಮಾಧ್ಯಮಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನೆ ಮಾಡಲಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್‌ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 70 ವರ್ಷಗಳ ಇತಿಹಾಸದಲ್ಲಿ ಬೇರೆ ಬೇರೆ ದೇಶಗಳಿಗೆ ಭಾರತೀಯರು ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಹೋಗಿದ್ದಾರೆ. ಇತಿಹಾಸದಲ್ಲಿಯೇ ಇಂತಹ ಸಂಗತಿಗಳು ನಡೆದಿಲ್ಲ. ಆದರೆ, ಮೋದಿ ಅವರ ಕಾಲದಲ್ಲಿ ಉದ್ಯೋಗಕ್ಕಾಗಿ ಹೋಗಿ ಯುದ್ಧದಲ್ಲಿ ಮಡಿದು ಬರುವುದು ದುರಂತದ ಸಂಗತಿ. ರಷ್ಯಾ ಜತೆಗೆ ಭಾರತ ಸಂಬಂಧ ಮೊದಲಿನಂತೆ ಮುಂದುವರಿಸಲಿದೆಯೇ ಎಂದು ಪ್ರಶ್ನಿಸಿದ ಅವರು, ಯುದ್ಧವನ್ನು ನಿಲ್ಲಿಸುವಷ್ಟು ಶಕ್ತಿ ಹೊಂದಿರುವ ಮೋದಿ ಅವರು ಕೂಡಲೇ ರಷ್ಯಾದಿಂದ ಉಳಿದ ಭಾರತೀಯರನ್ನು ಕರೆಯಿಸಿಕೊಳ್ಳಬೇಕು. ಜತೆಗೆ ಈ ವಿಷಯವನ್ನು ಸದನದಲ್ಲಿ ಕೇಂದ್ರ ಬಿಜೆಪಿ ಚರ್ಚೆ ಮಾಡಿ ರಷ್ಯಾ ಸರ್ಕಾರದ ಜತೆಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ಗಂಭೀರವಾಗಿ ಚಿಂತಿಸಬೇಕು ಎಂದರು.

ಹು-ಧಾ ಅವಳಿ ನಗರದಲ್ಲಿ ಡ್ರಗ್ಸ್‌ ಹಾವಳಿ ಜಾಸ್ತಿಯಾಗಿದ್ದು ನಿಯಂತ್ರಣ ಕುರಿತು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಆಂಧ್ರಪ್ರದೇಶದಿಂದ ಡ್ರಗ್ಸ್‌ ಬರುತ್ತಿದೆ ಎಂಬ ಮಾಹಿತಿ ಇದೆ. ಡ್ರಗ್ಸ್‌ ನಿಯಂತ್ರಣಕ್ಕೆ ತರಲು ನಾವೆಲ್ಲರೂ ಸೇರಿ ಕಾರ್ಯ ಮಾಡಬೇಕು. ಆಕಸ್ಮಿಕ ದಾಳಿಯಲ್ಲಿ 500 ಜನರನ್ನು ತಪಾಸಣೆಗೆ ಒಳಪಡಿಸಿದ್ದು ಶೇ. 50ರಷ್ಟು ಯುವಕರು ಡ್ರಗ್ಸ್‌ ತೆಗೆದುಕೊತಂಡಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಡ್ರಗ್ಸ್‌ ವಿಚಾರವಾಗಿ ಮಾಹಿತಿ ಇದ್ದರೆ ಸಾರ್ವಜನಿಕರು ಪೊಲೀಸ ಇಲಾಖೆ ಗಮನಕ್ಕೆ ತರಬೇಕೆಂದು ಮನವಿ ಮಾಡಿದರು.ಇಸ್ಮಾಯಿಲ್‌ ತಮಟಗಾರ ಮೇಲೆ ಕೊಲೆ ಬೆದರಿಕೆ ಪ್ರಕರಣವನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ವಹಿಸಲಾಗುವುದು ಎಂದರು.

23 ಸಮುದಾಯಗಳ ಭದ್ರತೆಗೆ ವಿಶೇಷ ಯೋಜನೆ ಜಾರಿ:

ಕಾರ್ಮಿಕ ವಲಯದಲ್ಲಿ ಶ್ರಮಿಸುತ್ತಿರುವ 23 ಸಮುದಾಯಗಳ ಜೀವನ ಭದ್ರತೆಯ ದೃಷ್ಟಿಯಿಂದ ರಾಜ್ಯ ಸರ್ಕಾರ 78ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ವಿಶೇಷ ಯೋಜನೆ ಜಾರಿಗೊಳಿಸಿದೆ ಎಂದು ಲಾಡ್‌ ಹೇಳಿದರು.ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಈ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ. ಹಮಾಲರು, ಚಿಂದಿ ಆಯುವವರು, ದರ್ಜಿಗಳು, ಮೆಕ್ಯಾನಿಕಲ್‌, ಅಗಸರು, ಕ್ಷೌರಿಕರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಭಟ್ಟಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಹೋಟೆಲ್‌ ಕಾರ್ಮಿಕರು, ಫೋಟೋಗ್ರಾಫರ, ಸ್ವತಂತ್ರ ಲೇಖನ ಬರಹಗಾರರು, ಬೀಡಿ ಕಾರ್ಮಿಕರು, ಡೆಲಿವರಿ ಕಾರ್ಮಿಕರು ಸೇರಿದಂತೆ 23 ಅಸಂಘಟಿತ ಕಾರ್ಮಿಕರಿಗೆ ₹ 1 ಲಕ್ಷ ಅಪಘಾತ ಪರಿಹಾರ ಸೌಲಭ್ಯ, ಶಾಶ್ವತ, ಭಾಗಶಃ ದುರ್ಬಲತೆಗೆ ₹ 50 ಸಾವಿರ, ಆಸ್ಪತ್ರೆ ವೆಚ್ಚ ₹ 50 ಸಾವಿರ ಹಾಗೂ ಸಹಜ ಮರಣವಾದರೆ ₹ 10 ಸಾವಿರ ನೀಡಲಾಗುತ್ತಿದೆ ಎಂದರು. ಗ್ಯಾರಂಟಿ ಯೋಜನೆಗಳಲ್ಲಿ ಬದಲಾವಣೆ ತರುವ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಾರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ ಅವರನ್ನು ಕೈ ಬಿಡುವ ವಿಚಾರ ತಮ್ಮ ಗಮನಕ್ಕೆ ಬಂದಿಲ್ಲ. ಕ್ಯಾಬಿನೆಟ್‌ನಲ್ಲಿ ಈ ವಿಷಯವಾಗಿ ಚರ್ಚೆ ಮಾಡುವ ಸಾಧ್ಯತೆಗಳಿವೆ ಎಂದು ಹೇಳಿದರು.