ಕೊಪ್ಪಳ: ನಗರದ ಅಶೋಕ ವೃತ್ತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಏಕಕಾಲದಲ್ಲಿಯೇ ವಿಜಯೋತ್ಸವ ನಡೆಸಿದ್ದರಿಂದ ಹೈಡ್ರಾಮಾವೇ ನಡೆಯಿತು. ಅಲ್ಲದೆ ಪೈಪೋಟಿಯಲ್ಲಿ ರಾಹುಲ್, ಮೋದಿ ಪರ ಘೋಷಣೆಗಳು ಮೊಳಗಿದವು. ಪರಸ್ಪರ ಕೂಗಾಟ ನಡೆದಿದ್ದರಿಂದ ಪರಿಸ್ಥಿತಿ ಕೈಮೀರುವ ಸಾಧ್ಯತೆ ಅರಿತ ಪೊಲೀಸರು ತಕ್ಷಣ ಜಾಗ್ರತರಾಗಿ ಪರಿಸ್ಥಿತಿ ತಿಳಿಗೊಳಿಸಿದರು.

ಆಗಿದ್ದೇನು?: ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಬಿಜೆಪಿ ಮುಖಂಡರು ವಿಜಯೋತ್ಸವ ಆಚರಿಸುತ್ತಿದ್ದರು. ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು. ಇನ್ನೇನು ಬಿಜೆಪಿ ವಿಜಯೋತ್ಸವ ಮುಗಿಯುವ ಹಂತದಲ್ಲಿತ್ತು. ಅದೇ ವೇಳೆಗೆ ಕಾಂಗ್ರೆಸ್ ನಾಯಕರು ಜಯಘೋಷಣೆಗಳನ್ನು ಕೂಗುತ್ತಾ ಅಲ್ಲಿಗೆ ಆಗಮಿಸಿದರು. ಆಗ ಎರಡೂ ಪಕ್ಷದ ಕಾರ್ಯಕರ್ತರು ಪೈಪೋಟಿಗೆ ಬಿದ್ದವರಂತೆ ರಾಹುಲ್ ಗಾಂಧಿ, ಮೋದಿ ಎಂದು ಘೋಷಣೆ ಕೂಗಿದರು. ಇದು ಗೊಂದಲಕ್ಕೆ ಕಾರಣವಾಯಿತು. ಪರಸ್ಪರ ವಾಕ್ಸಮರಕ್ಕೂ ಕಾರಣವಾಯಿತು. ಈ ಪರಿಸ್ಥಿತಿಯಲ್ಲಿ ಕೈಮೀರುವ ಸಾಧ್ಯತೆ ಇರುವುದನ್ನು ಅರಿತ ಪೊಲೀಸರು ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಕಾವಲು ನಿಂತರು. ಕಾರ್ಯಕರ್ತರನ್ನು ಪರಸ್ಪರ ದೂರ ಸರಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಬಿಜೆಪಿಗೆ ಭರ್ಜರಿ ಗೆಲವು, ಕೊಪ್ಪಳದಲ್ಲಿ ವಿಜಯೋತ್ಸವ: ಪಂಚ ರಾಜ್ಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಪುದುಚೇರಿ, ಅಸ್ಸಾಂನಲ್ಲಿ ಭರ್ಜರಿ ಗೆಲವು ಸಾಧಿಸಿದ್ದಕ್ಕೆ ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ಅಶೋಕ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ನಾಯಕರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರಲ್ಲದೆ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ದೇಶದ ಇತಿಹಾಸದಲ್ಲಿ ಹೊಸ ದಿಕ್ಸೂಚಿಯನ್ನು ಮತದಾರರು ನೀಡಿದ್ದಾರೆ. ಪಶ್ಚಿಮ ಬಂಗಾಳದ ಸರ್ಕಾರ ಕಿತ್ತೊಗೆದು ಬಿಜೆಪಿಗೆ ಅಭೂತಪೂರ್ವ ಗೆಲುವು ತಂದುಕೊಟ್ಟಿದ್ದಾರೆ. ಅಸ್ಸಾಂ ರಾಜ್ಯದಲ್ಲಿಯೂ ಭಾರಿ ಅಂತರದ ಗೆಲುವು ಆಗಿದ್ದು, ಬಿಜೆಪಿ ಆಡಳಿತ ಮೆಚ್ಚಿ ಮತದಾರರು ಮತ್ತೆ ಬೆಂಬಲಿಸಿದ್ದಾರೆ. ಪುದುಚೇರಿಯಲ್ಲಿಯೂ ಮತದಾರರು ಬಿಜೆಪಿಗೆ ಗೆಲುವು ನೀಡಿದ್ದಾರೆ ಎಂದು ಹೇಳಿದರು.


ಮತದಾರರು ದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದ್ದು, ಇದರಿಂದ ರಾಜ್ಯದಲ್ಲಿಯೂ ಮುಂದೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎನ್ನುವುದು ಸ್ಪಷ್ಟವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ದುರಾಡಳಿತದಿಂದ ಮತದಾರರು ಬೇಸತ್ತು ಹೋಗಿದ್ದಾರೆ. ಯಾವುದೇ ಅಭಿವೃದ್ಧಿಯೂ ಇಲ್ಲ. ಕೊಪ್ಪಳ ಜಿಲ್ಲೆಯಲ್ಲಿಯೂ ಅಭಿವೃದ್ಧಿ ಮರೀಚಿಕೆಯಾಗಿದ್ದು, ಇದಕ್ಕೆ ತಕ್ಕ ಪಾಠ ಕಲಿಸಲು ಮತದಾರರು ತುದಿಗಾಲ ಮೇಲೆ ನಿಂತಿದ್ದಾರೆ ಎಂದರು.

ಬಿಜೆಪಿ ರಾಜ್ಯ ಕೋರ್ ಕಮಿಟಿ ಸದಸ್ಯ ಡಾ. ಬಸವರಾಜ ಕ್ಯಾವಟರ್ ಮಾತನಾಡಿ, ದೇಶದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಮತದಾರರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ಅತ್ಯಂತ ದೊಡ್ಡ ಗೆಲವು ಸಿಕ್ಕಿರುವುದು ಮತ್ತು ಅಲ್ಲಿಯ ಸರ್ಕಾರವನ್ನು ಕಿತ್ತೊಗೆಯುವ ಮೂಲಕ ಮತದಾರರು ಬಿಜೆಪಿ ಬೆಂಬಲಿಸಿದ್ದಾರೆ ಎಂದು ಹೇಳಿದರು.

ರಾಜ್ಯದ ಮೇಲೆಯೂ ಚುನಾವಣೆ ಫಲಿತಾಂಶ ಪರಿಣಾಮ ಬೀರಲಿದೆ. ಆಡಳಿತ ಯಂತ್ರ ದುರುಪಯೋಗ ಮಾಡಿಕೊಂಡು ಈಗ ಕಾಂಗ್ರೆಸ್ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರಬಹುದು. ಆದರೆ, ಮುಂಬರುವ ಚುನಾವಣೆಯಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ ನೀಡಲು ಮತದಾರರು ಉತ್ಸುಕರಾಗಿದ್ದಾರೆ ಎಂದರು.

ರಾಜ್ಯದಲ್ಲಿ ಆಡಳಿತಯಂತ್ರ ಕುಸಿದು ಹೋಗಿದೆ. ಜನರು ರೋಸಿ ಹೋಗಿದ್ದಾರೆ. ಅಭಿವೃದ್ಧಿಯೂ ಇಲ್ಲದಂತೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೀತಾ ಮುತ್ತಾಳ, ಸುನೀಲ ಹೆಸರೂರು, ಅಮರೇಶ, ಮಹಾಲಕ್ಷ್ಮಿ ಕಂದಾರಿ ಇದ್ದರು.

ರಾಜ್ಯ ಉಪ ಚುನಾವಣೆ, ಕೇರಳ ಕೈ ಗೆಲುವಿಗೆ ಕಾಂಗ್ರೆಸ್ ಸಂಭ್ರಮಾಚರಣೆ: ರಾಜ್ಯ ಉಪಚುನಾವಣೆಯಲ್ಲಿ ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರಗಳಲ್ಲಿ ಹಾಗೂ ಕೇರಳದಲ್ಲಿ ಜಯಶಾಲಿಯಾಗಿದ್ದಕ್ಕೆ ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ರಾಹುಲ್ ಗಾಂಧಿ ಎಂದು ಘೋಷಣೆ ಕೂಗಿದ್ದು ಅಲ್ಲದೆ, ರಾಜ್ಯದಲ್ಲಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕೆ ಜಯಕಾರ ಹಾಕಲಾಯಿತು.

ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ. ಗೊಂಡಬಾಳ ಮಾತನಾಡಿ, ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಜನರಿಗೆ ವಿಶ್ವಾಸ‌ ಮೂಡಿದೆ, ಇವು ಸಾಮಾನ್ಯ ಜನರ ಬದುಕಿಗೆ ಆಸರೆಯಾಗಿದ್ದು, ಕಾಂಗ್ರೆಸ್ ಉತ್ತಮ ಆಡಳಿತವನ್ನು ನೋಡಿ ಜನರು ಬಹುಮತದಿಂದ ಗೆಲ್ಲಿಸಿದ್ದಾರೆ. ಈ ಗೆಲುವು ಮೂರು ವರ್ಷದ ಆಡಳಿತಕ್ಕೆ ಹಿಡಿದ ಕನ್ನಡಿ, ಕೇರಳ‌ ಮತ್ತೆ ಕೈ ವಶವಾಗಿದ್ದು, ವಿದ್ಯಾವಂತರು ಕಾಂಗ್ರೆಸ್ ಸಾಧನೆ ಗಮನಿಸಿ ಬೆಂಬಲಿಸಿದ್ದಾರೆ ಎಂದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣಾ ಇಟ್ಟಂಗಿ, ಮುಖಂಡರಾದ ಅಕ್ಬರ್ ಪಾಶಾ ಪಲ್ಟನ್, ಸುರೇಶ ದಾಸರಡ್ಡಿ, ಮಾನವಿ ಪಾಶಾ, ಚಿಕನ್ ಪೀರಾ, ಶ್ರೀನಿವಾಸ ಪಂಡಿತ, ಮೌನೇಶ ವಡ್ಡಟ್ಟಿ, ಮಲ್ಲಿಕಾರ್ಜುನ ಪೂಜಾರ, ಯಶೋದಾ ಮರಡಿ, ಪದ್ಮಾ‌ ಕಂಬಳಿ, ಗಂಗಮ್ಮ, ಬಸಯ್ಯಸ್ವಾಮಿ, ನಾಸೀರಹುಸೇನ, ಅಶೋಕ ಗೋರಂಟ್ಲಿ, ಆಸೀಫ್ ಇದ್ದರು.