ಮೋದಿ ಸಾಧನೆಯೇ ಬಿಜೆಪಿ ಗೆಲುವಿಗೆ ನಾಂದಿ: ಗೋವಿಂದ ಕಾರಜೋಳ

| Published : Mar 31 2024, 02:00 AM IST

ಸಾರಾಂಶ

ನಾನು ಈ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಜನಪರ ಯೋಜನೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದು ಗೋವಿಂದ ಕಾರಜೋಳ ವಿಶ್ವಾಸದಿಂದ ನುಡಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆ/ ಹೊಸದುರ್ಗ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪರ ಯೋಜನೆಗಳ ಬಗ್ಗೆ ಮತದಾರರಿಗೆ ತಿಳಿಸಿ ಅವರಿಂದ ಮತ ಪಡೆದು ಆಯ್ಕೆಯಾಗುತ್ತೇನೆಂಬ ವಿಶ್ವಾಸ ನನಗಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ತಿಳಿಸಿದರು.

ಅವರು ಬೆಂಗಳೂರು, ತುಮಕೂರು, ಹಿರಿಯೂರು ಮೂಲಕ ಚಳ್ಳಕೆರೆಗೆ ಭೇಟಿ ನೀಡಿದ ವೇಳೆಗೆ ಟಿಎಟಿ ಟಾಕೀಸ್ ಬಳಿ ನೂರಾರು ಕಾರ್ಯಕರ್ತರು ಜಮಾಯಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರಲ್ಲದೆ ಮಹಿಳೆಯರು ಆರತಿ ಎತ್ತಿ ಸ್ವಾಗತಿಸಿದರು.

ಆ ಬಳಿಕ ಮಾತನಾಡಿದ ಅವರು, ಚಿತ್ರದುರ್ಗ ಲೋಕಸಭಾ ಕ್ಷೇತ್ರ ನನಗೆ ಹೊಸದಲ್ಲ, ಕಳೆದ ಬಾರಿ ಈ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿಯೊಡನೆ ಹಲವಾರು ಕಾರ್ಯಕ್ರಮಗಳಿಗೆ ಬಂದು ಹೋಗಿದ್ದೇನೆ. ರಾಜ್ಯದ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಚಿತ್ರದುರ್ಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳನ್ನು ಸರ್ಕಾರ ಮಟ್ಟದಲ್ಲಿ ಚರ್ಚಿಸಿದ್ದೇನೆ. ಆದರೆ, ರಾಜಕೀಯ ಕ್ಷೇತ್ರದಲ್ಲಿ ವಿನಾಕಾರಣ ಸುಳ್ಳು ಆರೋಪಗಳು ಸ್ವಾಭಾವಿಕ. ನಾನು ಈ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರಮೋದಿಯವರ ಜನಪರ ಯೋಜನೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂದರು.

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾದ ನಂತರ ಇದೇ ಮೊದಲ ಭೇಟಿಯಾಗಿದೆ. ದೊಡ್ಡೇರಿಯ ಕನ್ನೇಶ್ವರ ಆಶ್ರಮ ಶ್ರೀಮಲ್ಲಪ್ಪಸ್ವಾಮೀಜಿಯವರ ಆಶೀರ್ವಾದವನ್ನು ಪಡೆದಿದ್ದೇನೆ. ಪಾವಗಡ ರಸ್ತೆಯಲ್ಲಿಯ ಸಾಯಿಬಾಬಾ ಮಂದಿರಕ್ಕೂ ಭೇಟಿ ನೀಡಿದ್ದೇನೆ. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ವಿಶೇಷವಾಗಿ ಮಹಿಳೆಯರು, ಯುವಕರು ಬಿಜೆಪಿಯ ಗೆಲುವಿನ ಬಗ್ಗೆ ಹೆಚ್ಚು ಆತ್ಮವಿಶ್ವಾಸ ತುಂಬಿದ್ದಾರೆ ಎಂದರು.

ಮಂಡಲಾಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಳೆಮಂಡಿ ರಾಮದಾಸ್, ಜಿಲ್ಲಾಧ್ಯಕ್ಷ ಎ.ಮುರುಳಿ, ಬಿ.ಎಸ್.ಶಿವಪುತ್ರಪ್ಪ, ಸಿ.ಎಸ್. ಪ್ರಸಾದ್, ಜಯಪಾಲಯ್ಯ, ಜಿ.ಕೆ.ವೀರಣ್ಣ, ಈ.ವೀರೇಶ್, ಡಿ.ಎಂ.ತಿಪ್ಪೇಶ್ವಾಮಿ, ಬಿ.ಸಿ.ವೆಂಕಟೇಶ್‌ ಮೂರ್ತಿ, ಮಾರುತಿ, ಕರೀಕೆರೆ ತಿಪ್ಪೇಸ್ವಾಮಿ, ಜಗದಾಂಭ, ಜಗದೀಶ್, ಗೋವಿಂದಪ್ಪ ಮುಂತಾದವರು ಉಪಸ್ಥಿತರಿದ್ದರು.

ಆರೋಪ ಹೊರತು ಕಾಂಗ್ರೆಸ್‌ ಸಾಧನೆ ಏನು?ಹೊಸದುರ್ಗ: ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಕಾಂಗ್ರೇಸ್‌ ನವರಿಗೆ ಆರೋಪ ಮಾಡುವುದನ್ನು ಬಿಟ್ಟರೆ ಬೇರೇನೂ ಮಾಡಲು ಸಾಧ್ಯವಾಗಿಲ್ಲ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು.ಪಟ್ಟಣದಲ್ಲಿ ಮಠಗಳಿಗೆ ಬೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಅತ್ಯಂತ ಶ್ರೇಷ್ಠ ರಾಜಕಾರಣಿ ನಿಜಲಿಂಗಪ್ಪನವರ ಜನ್ಮಭೂಮಿ, ಕರ್ಮಭೂಮಿ, ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾದಾಗಿನಿಂದಲೂ ಹಲವಾರು ಸ್ಥಾನಮಾನ ಸಿಕ್ಕಿದರೂ ಅಭೀವೃದ್ಧಿಯಲ್ಲಿ ಹಿನ್ನಡೆಯಾಗಿದೆ. ಚಿತ್ರದುರ್ಗ ಲೋಕಸಭಾ ಕೇತ್ರ ಅಭಿವೃದ್ಧಿ ವಂಚಿತ ಕ್ಚೇತ್ರವಾಗಿದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಬೇಕಿದೆ ಎಂದರು.

ನಾನು ಕಳೆದ ಅವಧಿಯಲ್ಲಿ ನೀರಾವರಿ ಮಂತ್ರಿಯಾಗಿದ್ದು ಕೇವಲ 18 ತಿಂಗಳು ಮಾತ್ರ . ಈ ಸಿಕ್ಕ ಅಲ್ಪ ಅವಧಿಯಲ್ಲಿಯೇ ಅಪ್ಪರ್‌ ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲು ಕ್ಯಾಬಿನೆಟ್‌ನಲ್ಲಿ ಅನುಮೋದನೆ ಕೊಡಿಸಿ, ಬಜೆಟ್‌ನಲ್ಲಿ 5300 ಕೋಟಿ ಅನುದಾನವನ್ನು ಪ್ರಧಾನಿಯವರಿಂದ ಇಡಿಸಿದ್ದೆ. ಆದರೆ, ಅದಕ್ಕೆ ಬೇಕಾದ ಕಾಗದ ಪತ್ರಗಳನ್ನು ಕೊಡದೆ ಹಣ ಬಿಡುಗಡೆ ಮಾಡಿಸಿಕೊಳ್ಳಲು ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಾಧ್ಯವಾಗಿಲ್ಲ. ಅವರಿಗೆ ಕೇವಲ ಗರ್ವದಿಂದ ಮಾತನಾಡುವುದನ್ನು ಬಿಟ್ಟರೆ ಮತ್ತೇನೂ ಬರುವುದಿಲ್ಲ. ಅವರ ಗರ್ವವನ್ನು ಈ ಲೋಕಸಭೆ ಚುನಾವಣೆಯಲ್ಲಿ ಜನ ಮುರಿಯಲಿದ್ದಾರೆ ಎಂದರು.ಹೊಳಲ್ಕೆರೆ ಶಾಸಕ ಚಂದ್ರಪ್ಪ ಬಂಡಾಯದ ಬಗ್ಗೆ ನಮ್ಮ ಹೈಕಮಾಂಡ್ ಹಾಗೂ ನಮ್ಮ ನಾಯಕರಾದ ಯಡಿಯೂರಪ್ಪನವರು ಗಮನಿಸುತ್ತಿದ್ದಾರೆ. ಅದನ್ನು ಬಗೆ ಹರಿಸುತ್ತಾರೆ ಇದರಿಂದ ನಮಗೆ ಯಾವುದೇ ತೊಂದರೆಯಾಗಲ್ಲ ಎಂದರು.

ಈ ವೇಳೆ ಬಿಜೆಪಿ ಮುಖಂಡರುಗಳಾದ ಎಸ್‌ ಲಿಂಗಮೂರ್ತಿ, ಕಲ್ಮಠ್‌, ಬುರುಡೇಕಟ್ಟೆ ರಾಜೇಶ್‌, ಸೇರಿದಂತೆ ಬಿಜೆಪಿಯ ಕಾರ್ಯಕರ್ತರು ಹಾಜರಿದ್ದರು.