ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಮೋದಿ ಸಂಕಲ್ಪ:ಪಿ.ಎಚ್. ಪೂಜಾರ

| Published : Jan 10 2024, 01:46 AM IST

ಸಾರಾಂಶ

ಬಾಗಲಕೋಟೆ: ರಬಕವಿ-ಬನಹಟ್ಟಿ ತಾಲೂಕಿನ ಡವಳೇಶ್ವರ ಗ್ರಾಮ ಪಂಚಾಯತಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಜಾಗೃತಿ ಮೂಡಿಸಲು ಮಂಗಳವಾರ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮ ನಡೆಯಿತು. ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ, ಶಾಸಕ ಸಿದ್ದು ಸವದಿ ಮಾತನಾಡಿ, ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೇಶದ ಸಮಸ್ತ ನಾಗರಿಕರ ಅಭಿವೃದ್ಧಿಯ ಮೂಲ ಉದ್ದೇಶವಾಗಿಟ್ಟುಕೊಂಡು ಆಡಳಿತ ನಡೆಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರ ಜನಪರವಾದ ಹಲವು ಯೋಜನೆಗಳನ್ನು ಜಾರಿಗೊಳಿಸಿ ಬಡವರ ಪರ ಆಡಳಿತ ನೀಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು.

ರಬಕವಿ-ಬನಹಟ್ಟಿ ತಾಲೂಕಿನ ಡವಳೇಶ್ವರ ಗ್ರಾಮ ಪಂಚಾಯತಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಜಾಗೃತಿ ಹಿನ್ನೆಲೆಯಲ್ಲಿ ಹಮ್ಮಿಕೊಂಡ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ದಿವ್ಯಾಂಗರ ಸಬಲೀಕರಣ ಹಾಗೂ 401 ಏಕಲವ್ಯ ಮಾದರಿ ವಸತಿ ಶಾಲೆ ಆರಂಭಿಸಿದೆ. ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಶೇ.10ರಷ್ಟು ಮೀಸಲಾತಿ ನೀಡುತ್ತಿದೆ. ಪ್ರಧಾನಮಂತ್ರಿ ಸ್ವನಿಧಿ ಯೋಜಯಡಿ ಬೀದಿಬದಿ ವ್ಯಾಪಾರಿಗಳಿಗೆ ಸುಲಭ ಸಾಲ ಸಿಗುತ್ತಿದ್ದು, 54 ಲಕ್ಷಕ್ಕೂ ಅಧಿಕ ವ್ಯಾಪಾರಿಗಳಿಗೆ ಸಾಲ ವಿತರಿಸಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿದ್ದು ಸವದಿ ಮಾತನಾಡಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ 49.5 ಕೋಟಿ ರೈತರು ಹೆಸರು ನೋಂದಾಯಿಸಿಕೊಂಡಿದ್ದು, ಕಳೆದ 7 ವರ್ಷಗಳಲ್ಲಿ 1.45 ಲಕ್ಷ ಕೋಟಿಗೂ ಅಧಿಕ ಜನರು ಯೋಜನೆಯ ಫಲಾನುಭವಿಗಳಾಗಿದ್ದಾರೆ. ತ್ರಿವಳಿ ತಲಾಖ್ ಕಾನೂನು ಜಾರಿ ಮೂಲಕ ಅಲ್ಪಸಂಖ್ಯಾತ ಮಹಿಳೆಯರ ಘನತೆ ಮತ್ತು ಭದ್ರತೆ ಖಾತರಿಪಡಿಸಿದ್ದಾರೆ. ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಗ್ರಾಮೀಣ ಭಾಗದಲ್ಲಿ 11.74 ಕೋಟಿ ಶೌಚಾಲಯ ಕಟ್ಟಿಸಲಾಗಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಪ್ರಯೋಜನ ಪಡೆದು ಶೇ.69ರಷ್ಟು ಮಹಿಳಾ ಉದ್ಯಮಿಗಳಾಗಿದ್ದಾರೆ . ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆಯಲ್ಲಿ 1.38 ಕೋಟಿ ಯುವಜನರು ತರಬೇತಿ ಪಡೆದಿದ್ದಾರೆ. ಇದು ಮೋದಿ ಸರ್ಕಾರದ ಗ್ಯಾರಂಟಿಗಳಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಲು ವಿನಂತಿಸಿಕೊಂಡರು.

ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಶಶಿಕುಮಾರ ಅವಟೆ, ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಶಿವಪುರ, ಉಪಾಧ್ಯಕ್ಷೆ ಯಲ್ಲವ್ವ ಅಕ್ಕಿನವರ, ಇರುವ ಸಂಗಣ್ಣವರ, ಗ್ರಾಪಂ ಪಿಡಿಒ ಸಿದ್ದರಾಮೇಶ್ವರ ಕುಂದರಗಿಮಠ, ಹಿರಿಯರಾದ ಶ್ರೀಶೈಲ ಗೌಡ ಪಾಟೀಲ, ಮಹಾಲಿಂಗಪ್ಪ ಪಟ್ಟಣಶೆಟ್ಟಿ, ಗಂಗಾಧರ ಸಂಗಣ್ಣವರ, ಮೌನೇಶ ಬಡಿಗೇರ, ಲಕ್ಷ್ಮಿ ಕಾಸರಗೋಳ, ಬನ್ನಪ್ಪಗೋಳ ಪಾಟೀಲ, ಮಾರುತಿ ಹವಾಲ್ದಾರ. ಎಂಜಿ ಕಲ್ಲಪ್ಪ ಸಂಗಣ್ಣವರ, ಚೆನ್ನಪ್ಪ ತೇಲಿ ಹಾಗೂ ಊರಿನ ಹಿರಿಯರು, ಮಹಿಳೆಯರು ಸೇರದಂತೆ ಅನೇಕರು ಉಪಸ್ಥಿತರಿದ್ದರು.