ಸಾರಾಂಶ
ಶೇಷಮೂರ್ತಿ ಅವಧಾನಿ
ಕನ್ನಡಪ್ರಭ ವಾರ್ತೆ ಕಲಬುರಗಿಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜ.19ರಂದು ಕಲಬುರಗಿ ಜಿಲ್ಲೆಯ ಮೂಲಕ ನೆರೆಯ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪೂರ ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.
ಪ್ರಧಾನಿ ಮೋದಿಯವರ ವಯಾ ಕಲಬುರಗಿ ಅಲ್ಪಕಾಲದ ಈ ಭೇಟಿ ಇದೀಗ ಹಲವಾರು ತರಹದ ರಾಜಕೀಯ ಲೆಕ್ಕಾಚಾರಗಳಿಗೆ ಎಡೆ ಮಾಡಿಕೊಟ್ಟಿದೆ. ಸೊಲ್ಲಾಪುರಕ್ಕೆ ಹೋಗಲು ಪ್ರಧಾನಿ ಮೋದಿಯವರಿಗೆ ಪುಣೆ ಸೇರಿದಂತೆ ಹಲವು ಸುರಕ್ಷಿತವಾದಂತಹ ದಾರಿಗಳಿದ್ದರೂ ಕಲಬುರಗಿ ಮೂಲಕವೇ ಸಾಗುತ್ತಿರೋದಕ್ಕೆ ರಾಜಕೀಯ ಬಣ್ಣ ಬಳಿಯೋ ಚರ್ಚೆಗಳು ಪುಂಖಾನುಪುಂಖವಾಗಿ ಕೇಳಿಬರುತ್ತಿವೆ.ಕಲಬುರಗಿ ಎಐಸಿಸಿ ಅಧ್ಯಕ್ಷ, ಇಂಡಿಯಾ ಒಕ್ಕೂಟದ ಪ್ರಧಾನಿ ಹುದ್ದೆಗೆ ಬಿಂಬಿಸಲ್ಪಟ್ಟಿರುವ ಡಾ. ಮಲ್ಲಿಕಾರ್ಜುನ ಖರ್ಗೆ ತವರೂರು. ಲೋಕ ಸಮರದ ಹೊಸ್ತಿಲಲ್ಲೇ ಮೋದಿಯವರು ಕಲಬುರಗಿಗೆ ಬಂದಿಳಿದು ಬಿಜೆಪಿ ನಾಯಕರೊಂದಿಗೆ ಬೆ.10 ನಿಮಿಷ ಹಾಗೂ ಮಧ್ಯಾಹ್ನ 10 ನಿಮಿಷ ಮಾತುಕತೆ ನಡೆಸಲು ಸಮಯ ಕೊಟ್ಟದ್ದರಿಂದ ಈ ಮಾತುಕತೆಯಲ್ಲೇ ಮೋದಿ ಕಲಬುರಗಿ ಲೋಕ ಸಮರಕ್ಕೆ ರಣಕಹಳೆ ಊದಿ ಹೋಗಲಿದ್ದಾರೆಂಬ ಚರ್ಚೆಗಳು ಸಾಗಿವೆ.
ಖರ್ಗೆಗೆ ಟಕ್ಕರ್ ಕೊಡಲು ಪ್ಲ್ಯಾನ್?:ಸದ್ಯ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರೋ ಡಾ. ಮಲ್ಲಿಕಾರ್ಜುನ ಖರ್ಗೆ 2019ರ ಲೋಕ ಸಮರದಲ್ಲಿ ಸೋತವರು. ತಮ್ಮನ್ನು ಸೋಲಿಸಲು ಮೋದಿ, ಅಮೀತ್ ಶಾ, ನಡ್ಡಾ ದಿಲ್ಲಿಯಿಂದಲೇ ಸಂಚು ರೂಪಿಸಿದ್ದಾರೆಂದು ಹೇಳುತ್ತಲೇ ಡಾ. ಖರ್ಗೆ ಸೊಲನ್ನಪ್ಪಿದ್ದು ಇತಿಹಾಸ.
ಆದರೆ ಈ ಬಾರಿ ಮತ್ತೆ ಡಾ. ಖರ್ಗೆ ಕಲಬುರಗಿಯಂದಲೇ ಕಣಕ್ಕಿಳಿಯುವ ಇರಾದೆ ಹೊಂದಿದ್ದಾರೋ ಇಲ್ಲವೋ ಇನ್ನೂ ಸ್ಪಷ್ಟವಾಗಿಲ್ಲ, ಆದಾಗ್ಯೂ ಇಲ್ಲಿನ ಕಾಂಗ್ರೆಸ್ ಕಮಿಟಿ ಠರಾವು ಅಂಗೀಕರಿಸಿದ್ದು ಚುನಾವಣೆಗೆ ಸ್ಪರ್ಧಿಸುವಂತೆ ಖರ್ಗೆಯವರಿಗೆ ಆಹ್ವಾನಿಸಿದ್ದು ಗುಟ್ಟೇನಲ್ಲ.ಹೀಗಾಗಿ ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಮತ್ತೆ ಸ್ಪರ್ಧಿಸುವ ಅಸ್ಪಷ್ಟ ಸುಳಿವು ಈಗಾಗಲೇ ಸಿಕ್ಕಿರುವ ಬೆನ್ನಲ್ಲೇ ಮೋದಿ ಸೊಲ್ಲಾಪುರ ಭೇಟಿಗೆ ವಯಾ ಕಲಬುರಗಿ ಹೋಗುವ ಯೋಜನೆ ರೂಪಿಸಿದ್ದಾರೆಂದು ಹೇಳಲಾಗುತ್ತಿದೆ. ರಾಜಕೀಯವಾಗಿ ಕಲಬುರಗಿ ಕ್ಷೇತ್ರ ದಿಲ್ಲಿಯಲ್ಲೂ ಗಮನ ಸೆಳೆದಿರೋದರಿಂದಾಗಿ ಈ ಅಲ್ಪಕಾಲದ ಭೇಟಿಯಲ್ಲೇ ಕಲಬುರಗಿಯಲ್ಲೇ ಖರ್ಗೆ ಕೈ ಕಟ್ಟಿ ಹಾಕೋದು ಹೇಗೆಂಬ ಯೋಜನೆ ಹೆಣೆಯಲೆಂದೇ ಮೋದಿಯವರು ಕಲಬುರಗಿಯತ್ತ ಮುಖ ಮಾಡಿದ್ದಾರೆಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿ ಬರಲಾರಂಭಿಸಿವೆ.
ಜ.19ರ ಬೆ.10 ಗಂಟೆಗೆ ಹಾಗೂ ಸೊಲ್ಲಾಪುರಕ್ಕೆ ಹೋಗಿ ಬಂದ ನಂತರ ಮಧ್ಯಾಹ್ನ 1 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಬಿಜೆಪಿ ನಾಯಕರ ಭೇಟಿಗೆ ಮೋದಿಯವರು ಸ್ಥಳೀಯ ನಾಯಕರೊಂದಗೆ ಮಾತುಕತೆಗೆಂದೇ ಹತ್ತು ನಿಮಿಷ ಸಮಯ ಕೊಟ್ಟಿದ್ದಾರೆ. ಈ ಹತ್ತು ನಿಮಿಷಗಳ ಚರ್ಚೆಯಲ್ಲೇ ಮತ್ತೊಮ್ಮೆ ಖರ್ಗೆಗೆ ಕೆಡವಲು ಖೆಡ್ಡಾ ರೆಡಿ ಮಾಡುವ ಲಕ್ಷಣಗಳಿವೆ ಎನ್ನಲಾಗುತ್ತಿದೆ.ಇತಿಹಾಸ ಮರುಕಳಿಸುವುದೆ?:
2019ರ ಲೋಕ ಸಮರಕ್ಕೂ ಮುನ್ನವೇ ಕಲಬುರಗಿಗೆ ಆಗಮಿಸಿ ಬಹಿರಂಗ ಸಭೆ ನಡೆಸಿದ್ದ ಮೋದಿ ಖರ್ಗೆ ಹೆಸರು ಹೇಳದೆಯೇ ರಣತಂತ್ರ ಹೆಣೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ನಂತರ ನಡೆದ ಚುನಾವಣೆಯಲ್ಲಿ ಡಾ. ಖರ್ಗೆ ಸೋಲಿಸುವಲ್ಲಿ ಬಿಜೆಪಿ ಯಶ ಕಂಡಿದ್ದು ಇತಿಹಾಸ.ಖರ್ಗೆ ಸೋಲಿಸುವ ಮೂಲಕ ಕಮಲ ಅರಳಿರುವ ಕಲಬುರಗಿ ಭದ್ರಕೊಟೆಯನ್ನ ಯಾವ ಕಾರಣಕ್ಕೂ ಕೈವಶವಾಗದಂತೆ ಮಾಡಬೇಕು, ಕಮಲ ಸದಾಕಾಲ ಇಲ್ಲಿ ಅರಳಬೇಕೆಂಬ ಇರಾದೆಯಲ್ಲೇ ಮೋದಿ ಸ್ಥಳೀಯ ಬಿಜೆಪಿಗರೊಂದಿಗೆ ಮುಖಾಮುಖಿಗೆ ಮುಂದಾಗಿದ್ದಾರೆಂದೂ ಹೇಳಲಾಗುತ್ತಿದೆ.
ಸೊಲ್ಲಾಪೂರದಲ್ಲಿನ ಕಾರ್ಯಕ್ರಮಕ್ಕೆ ಮೋದಿ ಹೋಗಲು ಪುಣೆ ಸುರಕ್ಷಿತವಾಗಿದ್ದರೂ ಕಲಬುರಗಿ ದಾರಿಯನ್ನೇ ಯಾಕೆ ಆರಿಸಿಕೊಂಡರು? ಮೋದಿಯವರ ಈ ಅಲ್ಪಕಾಲದ ಕಲಬುರಗಿ ಭೇಟಿ ಹಿಂದೆ ಮಹಾ ರಾಜಕೀಯ ಮಸಲತ್ತು ಅಡಗಿದೆ ಎಂದು ಕಾಂಗ್ರೆಸ್ಸಿಗರೂ ಸಹ ಹೇಳುತ್ತಿದ್ದಾರೆ.ಹೀಗಾಗಿ ಕಡೆಗಳಿಗೆಯಲ್ಲಿ ಕಲಬುರಗಿ ಮೂಲಕ ಸೊಲ್ಲಾಪುರಕ್ಕೆ ಮೋದಿ ಹೋಗುತ್ತಿರೋದರ ಹಿಂದೆ ಬಹುದೊಡ್ಡ ರಾಜಕೀಯ ಲೆಕ್ಕಾಚಾರ ಅಡಗಿದೆ ಎಂದು ಹೇಳಲಾಗುತ್ತಿದೆ. ಇವೆಲ್ಲದರ ನಡುವೆಯೇ ಸ್ಥಳೀಯ ಬಿಜೆಪಿ ಘಟಕ ಮೋದಿಯವರನ್ನ ಬೆಳಗ್ಗೆ ಯಾರು ಭೇಟಿ ಯಾಗಬೇಕು, ಮಧ್ಯಾಹ್ನ ಯಾರ್ಯಾರು ಕಾಣಬೇಕು ಎಂಬ ಲಿಸ್ಟ್ ಸಿದ್ಧಮಾಡಿಟ್ಟುಕೊಂಡಿದೆ.
ಅಸೆಂಬ್ಲಿ ಸೋಲಿನಿಂದ ಹತಾಶವಾಗಿ ಹೊದ್ದು ಮಲಗಿದ್ದ ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ ಕಮಲ ಪಡೆಗೆ ವಯಾ ಕಲಬುರಗಿ ಪ್ರಧಾನಿ ಮೋದಿ ಸೊಲ್ಲಾಪುರ ಭೇಟಿ ಟಾನಿಕ್ ಆಗುವಂತಿದೆ. ಏಕೆಂದರೆ ಸ್ಥಳೀಯ ಬಿಜೆಪಿಗರು ಮೋದಿ ಜೊತೆಗಿನ ಮಾತುಕತೆಗೆ ಯಾದಿ ಸಿದ್ಧಪಡಿಸಿಕೊಂಡು ಲವಲವಿಕೆಯಲ್ಲಿ ಕಾಣುತ್ತಿದ್ದಾರೆ. ಮೋದಿಯವರ ಅಲ್ಪಕಾಲದ ಕಲಬುರಗಿ ಭೇಟಿ ಕಮಲ ಪಾಳಯದಲ್ಲಿ ಸಂಚಲನವಂತೂ ಮೂಡಿಸಿದೆ.