ನೆಹರೂ ಅವರು ಬ್ರಿಟಿಷರ ನೇಮಕದಿಂದ ಅಧಿಕಾರದಲ್ಲಿದ್ದರು ಮತ್ತು ಇಂದಿರಾಗಾಂಧಿ ತುರ್ತು ಪರಿಸ್ಥಿತಿಯ ಮೂಲಕ ಸಂವಿಧಾನದ ಮೌಲ್ಯಗಳನ್ನು ಕಡೆಗಣಿಸಿದ್ದರು ಎಂದು ಟೀಕಿಸಿದ ನಾರಾಯಣಸ್ವಾಮಿ, ಸಂವಿಧಾನ ಬದ್ಧವಾಗಿ, ಸತತ ಚುನಾವಣೆಗಳಲ್ಲಿ ಜಯಗಳಿಸುತ್ತಾ ದೇಶವನ್ನು ಮುನ್ನಡೆಸುತ್ತಿರುವ ಮೋದಿ ಅವರ ಸಾಧನೆ ಅನನ್ಯವಾದುದು

ಕನ್ನಡಪ್ರಭ ವಾರ್ತೆ ಕೋಲಾರ

ಪ್ರಧಾನಿ ಮೋದಿ ಅವರು ಪ್ರಜಾಸತ್ತಾತ್ಮಕವಾಗಿ ಚುನಾಯಿತರಾಗಿ ೪೪೦೦ಕ್ಕೂ ಹೆಚ್ಚು ದಿನಗಳ ಕಾಲ ದೇಶವನ್ನು ಮುನ್ನಡೆಸಿರುವುದು ಐತಿಹಾಸಿಕ ಸಾಧನೆಯಾಗಿದೆ ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸುದೀರ್ಘ ಅವಧಿಯು ದೇಶದ ರಾಜಕೀಯ ಇತಿಹಾಸದಲ್ಲಿ ಒಂದು ಹೊಸ ಮೈಲಿಗಲ್ಲು ಎಂದು ಬಣ್ಣಿಸಿದರು.

ನೆಹರೂ ಅವರು ಬ್ರಿಟಿಷರ ನೇಮಕದಿಂದ ಅಧಿಕಾರದಲ್ಲಿದ್ದರು ಮತ್ತು ಇಂದಿರಾಗಾಂಧಿ ತುರ್ತು ಪರಿಸ್ಥಿತಿಯ ಮೂಲಕ ಸಂವಿಧಾನದ ಮೌಲ್ಯಗಳನ್ನು ಕಡೆಗಣಿಸಿದ್ದರು ಎಂದು ಟೀಕಿಸಿದ ನಾರಾಯಣಸ್ವಾಮಿ, ಸಂವಿಧಾನ ಬದ್ಧವಾಗಿ, ಸತತ ಚುನಾವಣೆಗಳಲ್ಲಿ ಜಯಗಳಿಸುತ್ತಾ ದೇಶವನ್ನು ಮುನ್ನಡೆಸುತ್ತಿರುವ ಮೋದಿ ಅವರ ಸಾಧನೆ ಅನನ್ಯವಾದುದು ಎಂದರು.

ಹಿಂದಿನ ಕಾಂಗ್ರೆಸ್ ಆಡಳಿತ ಕೇವಲ ಭ್ರಷ್ಟಾಚಾರದ ಕೂಪವಾಗಿತ್ತು, ಆದರೆ ಇಂದು ಮೋದಿ ಅವರ ನೇತೃತ್ವದಲ್ಲಿ ಭಾರತವು ೧೧ನೇ ಸ್ಥಾನದಿಂದ ೪ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿದೆ ಎಂದರು.

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆಯುತ್ತಿರುವ ಕುರಿತು ಸ್ಪಷ್ಟನೆ ನೀಡಿದ ಅವರು, ಇದು ಕೇವಲ ನಕಲಿ ಹೆಸರುಗಳನ್ನು ತೆಗೆದುಹಾಕುವ ಕಳೆ ತೆಗೆಯುವ ಪ್ರಕ್ರಿಯೆ. ಇದು ಯಾವುದೇ ಪಕ್ಷದ ತಾರತಮ್ಯವಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳನ್ನು ಯಾವುದೇ ಸಮೀಕ್ಷೆ ಅಥವಾ ಸಮಿತಿಯ ರಚನೆ ಇಲ್ಲದೆ ಏಕಾಏಕಿ ಮೂರೂವರೆ ಲಕ್ಷ ಜನರನ್ನು ಕೈಬಿಟ್ಟಿರುವುದು ವಂಚನೆಯ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಜಿಪಂ ಮಾಜಿ ಸದಸ್ಯ ಬಿ.ವಿ. ಮಹೇಶ್, ಮುಖಂಡರಾದ ಶಿಳ್ಳಂಗೆರೆ ಮಹೇಶ್, ಕೆಂಬೋಡಿ ನಾರಾಯಣಸ್ವಾಮಿ, ಸಾ.ಮಾ.ಬಾಬು, ರಾಜೇಶ್ ಸಿಂಗ್, ತಿಮ್ಮರಾಯಪ್ಪ, ಅರುಣಮ್ಮ, ಓಹಿಲೇಶ್, ಬಾಲಾಜಿ ಇದ್ದರು.