ರಾಜ್ಯದಲ್ಲಿ ಪ್ರಧಾನಿ ಮೋದಿ ಹವಾ ಏನೂ ಇಲ್ಲ

| Published : Apr 02 2024, 01:03 AM IST

ರಾಜ್ಯದಲ್ಲಿ ಪ್ರಧಾನಿ ಮೋದಿ ಹವಾ ಏನೂ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 20 ವರ್ಷಗಳಿಂದ ನಮ್ಮ ಬಾಗಲಕೋಟೆ ಬಿಜೆಪಿ ಸಂಸದರು ಎಲ್ಲಿ ಹೋಗಿದ್ದರು ಎಂಬುದೇ ಈ ಕ್ಷೇತ್ರದ ಜನರಿಗೆ ತಿಳಿದಿಲ್ಲ.

ಕನ್ನಡಪ್ರಭ ವಾರ್ತೆ ಲೋಕಾಪುರ

ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಿಂದ ದೇಶ ಅಭಿವೃದ್ಧಿ ಆಗುವುದಿಲ್ಲ. ರಾಜ್ಯದಲ್ಲಿ ಮೋದಿ ಹವಾ ಏನೂ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪುರ ಹೇಳಿದರು.

ಪಟ್ಟಣದ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಮೋದಿ ಸರ್ಕಾರ ವೈಫಲ್ಯ ಕಂಡಿದೆ. ಅಧಿಕಾರಕ್ಕೆ ಬಂದರೆ ಪ್ರತಿವರ್ಷ ಯುವಕರಿಗೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಮೋದಿ ಭರವಸೆ ನೀಡಿದ್ದರು. ಆದರೆ, ಅವರು ನುಡಿದಂತೆ ನಡೆಯಲಿಲ್ಲ. ಮೋದಿ ಸರ್ಕಾರದ ವೈಫಲ್ಯ ಹಾಗೂ ನಮ್ಮ ರಾಜ್ಯ ಸರ್ಕಾರದ ಸಾಧನೆಯಿಂದಾಗಿ ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ 20 ವರ್ಷಗಳಿಂದ ನಮ್ಮ ಬಾಗಲಕೋಟೆ ಬಿಜೆಪಿ ಸಂಸದರು ಎಲ್ಲಿ ಹೋಗಿದ್ದರು ಎಂಬುದೇ ಈ ಕ್ಷೇತ್ರದ ಜನರಿಗೆ ತಿಳಿದಿಲ್ಲ. ನಮ್ಮ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರಿಗೆ ಅಧಿಕ ಮತ ನೀಡಿ ಜಯಮಾಲೆ ಹಾಕಿದರೆ, ಕೇವಲ ಐದು ವರ್ಷದಲ್ಲಿ ಕುಡಚಿ - ಬಾಗಲಕೋಟ ರೈಲು ಕಾಮಗಾರಿ ಸಂಪೂರ್ಣವಾಗಿ ಮಾಡುತ್ತೇವೆ. ಆದ್ದರಿಂದ ಮೇ 7 ರಂದು ನಡೆಯುವ ಚುನಾವಣೆಯಲ್ಲಿ ಸಂಯುಕ್ತಾ ಪಾಟೀಲ ಅವರಿಗೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಕಾಂಗ್ರೆಸ್‌ ಕೋ-ಆರ್ಡಿನೇಟರ್ ಸದುಗೌಡ ಪಾಟೀಲ ಮಾತನಾಡಿ, ಕಾಂಗ್ರೆಸ್‌ ವರಿಷ್ಠರು ಬಾಗಲಕೋಟ ಲೋಕಸಭೆ ಕ್ಷೇತ್ರದ ಟಿಕೆಟ್‌ನ್ನು ಸಂಯುಕ್ತಾ ಪಾಟೀಲ ಅವರಿಗೆ ನೀಡಿದ್ದಾರೆ. ಅವರನ್ನು ಗೆಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶದಲ್ಲಿ ಎಲ್ಲೂ ಮೋದಿ ಹವಾ ಇಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ ಏನಿದ್ದರೂ ಸಚಿವ ಆರ್‌.ಬಿ.ತಿಮ್ಮಾಪುರ ಹವಾ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹವಾ ಮಾತ್ರ ಇದೆ ಎಂದರು.

ವಕೀಲ ಉದಯಸಿಂಗ್ ಪಡತಾರೆ ಮಾತನಾಡಿ, ಬಾಗಲಕೋಟೆಗೆ ಸಂಯುಕ್ತಾ ಪಾಟೀಲ ಸ್ಪರ್ಧೆ ಮಾಡಿದ್ದಾರೆ. ಅವರನ್ನು ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿದರೆ ಬಾಗಲಕೋಟ ಲೋಕಸಭಾ ಮತಕ್ಷೇತ್ರ ದೆಹಲಿಯಲ್ಲಿ ಸದ್ದು ಮಾಡಲಿದೆ ಎಂದರು. ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಮಾತನಾಡಿ, ನಮ್ಮ ಸರ್ಕಾರ ಎಲ್ಲರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಯಾವುದೇ ತಾರತಮ್ಯ ಇಲ್ಲದೆ ಸರ್ವ ಸಮುದಾಯದ ಏಳಿಗೆಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇಂತಹ ಪಕ್ಷವನ್ನು ಬೆಂಬಲಿಸಬೇಕು. ಬಾಗಲಕೋಟ ಸಂಸದರ ವೈಫಲ್ಯಗಳನ್ನು ಜನರಿಗೆ ತಿಳಿಸಿ ಮತಯಾಚಿಸಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ನಮ್ಮ ಸರ್ಕಾರ ಬಡವರ ಪರವಾಗಿದೆ. ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದೆ. ಅಧಿಕಾರಕ್ಕೆ ಬಂದ 9 ತಿಂಗಳಲ್ಲೇ ಘೋಷಿಸಿದ್ದ ಎಲ್ಲ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ ಎಂದರು.

ಈ ವೇಳೆ ಮುಧೋಳ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಧರೆಪ್ಪ ಸಾಂಗ್ಲೀಕರ, ಲೋಕಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಕಿವಡಿ, ಬಿಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ, ಗುರುರಾಜ ಉದಪುಡಿ, ಕೆಎಂಎಫ್ ನಿರ್ದೇಶಕ ಲಕ್ಷ್ಮಣ ಮಾಲಗಿ, ರಾಜುಗೌಡ ನ್ಯಾಮಗೌಡ, ಡಾ. ಬಸವರಾಜ ಹಿರೇಮಠ, ಹೊಳಬಸು ದಂಡಿನ, ರಘು ಮೊಕಾಸಿ, ಮುದಕಪ್ಪ ಅಂಬಿಗೇರ, ಕೃಷ್ಣಾ ಹೂಗಾರ, ಮಹಾಂತೇಶ ಕಡಕೋಳಮಠ, ಕೃಷ್ಣಾ ಜಟ್ಟೆನ್ನವರ, ಮಹೇಶ ಪೂಜಾರ ಮಹಿಳಾ ಘಟಕ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.

ಕೋಟ್..

ಕಳೆದ 20 ವರ್ಷಗಳಿಂದ ನಮ್ಮ ಬಾಗಲಕೋಟೆ ಬಿಜೆಪಿ ಸಂಸದರು ಎಲ್ಲಿ ಹೋಗಿದ್ದರು ಎಂಬುದೇ ಈ ಕ್ಷೇತ್ರದ ಜನರಿಗೆ ತಿಳಿದಿಲ್ಲ. ನಮ್ಮ ಕಾಂಗ್ರೆಸ್‌ ಅಭ್ಯರ್ಥಿ ಸಂಯುಕ್ತಾ ಪಾಟೀಲ ಅವರಿಗೆ ಅಧಿಕ ಮತ ನೀಡಿ ಜಯಮಾಲೆ ಹಾಕಿದರೆ, ಕೇವಲ ಐದು ವರ್ಷದಲ್ಲಿ ಕುಡಚಿ - ಬಾಗಲಕೋಟ ರೈಲು ಕಾಮಗಾರಿ ಸಂಪೂರ್ಣವಾಗಿ ಮಾಡುತ್ತೇವೆ. ಆದ್ದರಿಂದ ಮೇ 7 ರಂದು ನಡೆಯುವ ಚುನಾವಣೆಯಲ್ಲಿ ಸಂಯುಕ್ತಾ ಪಾಟೀಲ ಅವರಿಗೆ ಹೆಚ್ಚಿನ ಮತಗಳನ್ನು ನೀಡಿ ಗೆಲ್ಲಿಸಿ.

ಆರ್‌.ಬಿ.ತಿಮ್ಮಾಪುರ. ಅಬಕಾರಿ ಸಚಿವ