ಬರ ಪರಿಹಾರ ನೀಡದೆ ಮೋದಿ, ಶಾ ರಾಜ್ಯಕ್ಕೆ ಕಾಲಿಡಬೇಡಿ: ಸುರ್ಜೇವಾಲ

| Published : Apr 23 2024, 12:53 AM IST

ಬರ ಪರಿಹಾರ ನೀಡದೆ ಮೋದಿ, ಶಾ ರಾಜ್ಯಕ್ಕೆ ಕಾಲಿಡಬೇಡಿ: ಸುರ್ಜೇವಾಲ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣಾ ತಯಾರಿಯ ಪರಿಶೀಲನೆಗಾಗಿ ಮಂಗಳೂರಿಗೆ ಆಗಮಿಸಿದ ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಸುದ್ದಿಗಾರರ ಜೊತೆ ಮತಾನಾಡಿ, ಬರ ಪರಿಹಾರ ಬಿಡುಗಡೆ ಮಾಡದೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಕಾಲಿಡಬೇಡಿ ಎಂದು ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಬರ ಪರಿಹಾರ ಬಿಡುಗಡೆ ಮಾಡದೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಕಾಲಿಡಬೇಡಿ ಎಂದು ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಎಚ್ಚರಿಕೆ ನೀಡಿದ್ದಾರೆ.

ಚುನಾವಣಾ ತಯಾರಿಯ ಪರಿಶೀಲನೆಗಾಗಿ ಮಂಗಳೂರಿಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬರ ಪರಿಹಾರ ವರದಿಯ ಪ್ರಕಾರ 18,172 ಕೋಟಿ ರು.ಗಳನ್ನು ಕರ್ನಾಟಕದ ಜನತೆಗೆ ನೀಡುವುದು ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರ ಜವಾಬ್ದಾರಿ. ನೀಡಬೇಕಾದ್ದನ್ನು ನೀಡದೆ ಈಗ ರಾಜ್ಯಕ್ಕೆ ಓಟು ಕೇಳಲು ಬರುತ್ತಿದ್ದಾರೆ. ಇಂದು ರಾತ್ರಿಯೊಳಗೆ ಬರ ಪರಿಹಾರ ಅನುದಾನ ಬಿಡುಗಡೆ ಮಾಡಿ, ಇಲ್ಲದಿದ್ದರೆ ಕರ್ನಾಟಕಕ್ಕೆ ಕಾಲಿಡಬೇಡಿ ಎಂದರು.

ಓಟು ಹಾಕಿಲ್ಲ ಅಂತ ದ್ವೇಷ:

ಕಳೆದ ವರ್ಷ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆ, ರೈತರು ಬಿಜೆಪಿಗೆ ಓಟು ಹಾಕಿಲ್ಲ ಎಂಬ ಏಕೈಕ ದ್ವೇಷದಿಂದ ಕೇಂದ್ರ ಬಿಜೆಪಿ ಸರ್ಕಾರ ಬರ ಪರಿಹಾರ ನೀಡಿಲ್ಲ. 2023 ಸೆ.13ರಂದು ರಾಜ್ಯ ಸರ್ಕಾರ ಬರ ಘೋಷಣೆ ಮಾಡಿತ್ತು. ಅದಾಗಿ 9 ದಿನದೊಳಗೆ ಸೆ.22ರಂದು 18,172 ಕೋಟಿ ರು. ಬರ ಪರಿಹಾರ ನೀಡಲು ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಅದರ ಆಧಾರದಲ್ಲಿ ಅ.9ರಂದು ಕೇಂದ್ರ ಸರ್ಕಾರದ ತಂಡ ರಾಜ್ಯದ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅ.25ರಂದು ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಅದರ ನಂತರ ರಾಜ್ಯದ ಸಚಿವರಿಗೆ ಅಮಿತ್‌ ಶಾ, ನಿರ್ಮಲಾ ಸೀತಾರಾಮನ್‌ ಭೇಟಿಗೆ ಅವಕಾಶವನ್ನೇ ನೀಡಿಲ್ಲ. ಹಾಗಾಗಿ ನ.25ರಂದು ರಾಜ್ಯದ ಮೂವರು ಸಚಿವರು ದೆಹಲಿಗೆ ತೆರಳಿ ಕೃಷಿ ಮತ್ತು ಗೃಹ ಸಚಿವಾಲಯದ ಕಾರ್ಯದರ್ಶಿಗಳನ್ನು ಭೇಟಿ ಮಾಡಿದ್ದಾರೆ. ಡಿ.19ರಂದು ಸ್ವತಃ ಸಿಎಂ ಪ್ರಧಾನಿ, ಅಮಿತ್‌ ಶಾ ಅವರನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ. ಆದರೂ ಈಡೇರದೆ ಇದ್ದಾಗ ಕೊನೆಯ ಅಸ್ತ್ರವಾಗಿ ದೆಹಲಿಯಲ್ಲಿ ಇಡೀ ಕರ್ನಾಟಕ ಸರ್ಕಾರ ಪ್ರತಿಭಟನೆ ಕೈಗೊಂಡಿತ್ತು ಅಲ್ಲದೆ, ಸುಪ್ರೀಂನಲ್ಲೂ ಪ್ರಕರಣ ದಾಖಲಿಸಿದೆ. ಸಂಪೂರ್ಣ 5 ತಿಂಗಳು ಕರ್ನಾಟಕಕ್ಕೆ ಬರ ಪರಿಹಾರ ನೀಡದೆ ಕೇಂದ್ರ ಸತಾಯಿಸಿದೆ ಎಂದು ಆರೋಪಿಸಿದರು.

ಸುಪ್ರೀಂ ಹೇಳಿಕೆ ‘ವಿಜಯ’:

ಇದೀಗ ಸುಪ್ರೀಂ ಕೋರ್ಟ್‌, ಈ ವಿಚಾರಗಳನ್ನು ಒಕ್ಕೂಟ ವ್ಯವಸ್ಥೆಯಲ್ಲಿ ಸೌಹಾರ್ದಯುತವಾಗಿ ಬಗೆಹರಿಸಬೇಕಿತ್ತು ಎಂದಿದೆ. ಇದು ರಾಜ್ಯದ ರೈತರಿಗೆ ದೊರೆತ ಬಹುದೊಡ್ಡ ವಿಜಯ ಎಂದು ಸುರ್ಜೇವಾಲಾ ಹೇಳಿದರು.

..................

ಮೂರು ತಿಂಗಳೊಳಗೆ ನೇಹಾಗೆ ನ್ಯಾಯ

ಉತ್ತರ ಕನ್ನಡದ ಪರೇಶ್‌ ಮೇಸ್ತ ಸಾವಿನ ಸಂದರ್ಭದಲ್ಲಿ ಕೀಳು ರಾಜಕೀಯ ಮಾಡಿದಂತೆಯೇ ಇದೀಗ ಹುಬ್ಬಳ್ಳಿಯ ನೇಹಾ ಕೊಲೆ ವಿಚಾರದಲ್ಲೂ ಬಿಜೆಪಿ ರಾಜಕೀಯ ನಡೆಸುತ್ತಿದೆ. ನೇಹಾ ಕರ್ನಾಟಕದ ಮಗಳು. ಮುಂದಿನ ಮೂರು ತಿಂಗಳೊಳಗೆ ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ಕಠಿಣ ಶಿಕ್ಷೆಯಾಗುವಂತೆ ಮಾಡಿ ನೇಹಾ ಕುಟುಂಬಕ್ಕೆ ನ್ಯಾಯ ಒದಗಿಕೊಡುತ್ತೇವೆ. ನೇಹಾಗೆ ನ್ಯಾಯ ನೀಡೋದೆ ಅತ್ಯಂತ ಮುಖ್ಯವೇ ಹೊರತು, ಕೀಳು ರಾಜಕೀಯ ಮಾಡೋದಲ್ಲ ಎಂದು ಸುರ್ಜೇವಾಲಾ ಹೇಳಿದರು.

ಪರೇಶ್‌ ಮೇಸ್ತ ಪ್ರಕರಣದಲ್ಲಿ ಮೋದಿ, ಶಾ ಸೇರಿದಂತೆ ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡಿ ರಾಜಕೀಯ ಮಾಡಿದರು. ಬಳಿಕ ಮೇಸ್ತ ಕುಟುಂಬವನ್ನೇ ಕೈಬಿಟ್ಟರು. ತೀರ್ಪು ಬಂದ ಬಳಿಕ ಅಂದು ಮೋದಿ, ಶಾ ಮಾಡಿದ ಆರೋಪಗಳೇ ಸುಳ್ಳು ಎನ್ನುವುದು ಸಾಬೀತಾಗಿಲ್ಲವೇ ಎಂದು ಪ್ರಶ್ನಿಸಿದ ಅವರು, ನೇಹಾ ಪ್ರಕರಣದಲ್ಲೂ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಲಿದೆ ಎಂದರು.